ಮುಂಬೈ: ವಿಶ್ವದ ಶ್ರೀಮಂತ ಟಿ20 ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಗುರುವಾರ ಅವಮಾನಕಾರಿ ಘಟನೆಯೊಂದು ನಡೆಯಿತು. ಸ್ಟೇಡಿಯಂ ನಲ್ಲಿ ನಡೆದ ವಿದ್ಯುತ್ ಕಡಿತದ ಕಾರಣದಿಂದ ಸಿಎಸ್ ಕೆ ಬ್ಯಾಟರ್ ಡೆವೋನ್ ಕಾನ್ವೆ ವಿಕೆಟ್ ಕೈಚೆಲ್ಲಬೇಕಾಯಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಎರಡನೇ ಎಸೆತದಲ್ಲಿಯೇ ಡೆವೋನ್ ಕಾನ್ವೆ ವಿಕೆಟ್ ಕಳೆದುಕೊಂಡಿತು. ಡೇನಿಯಲ್ ಸ್ಯಾಮ್ಸ್ ಎಸೆದ ಚೆಂಡು ಕಾನ್ವೇ ಪ್ಯಾಡ್ ಗೆ ಬಡಿಯಿತು. ಅಂಪೈರ್ ಔಟ್ ನೀಡಿದರು. ಕಾನ್ವೇ ಕೂಡಲೇ ಡಿಆರ್ ಎಸ್ ಗೆ ಮನವಿ ಮಾಡಿದರು. ಆದರೆ ಸ್ಟೇಡಿಯಂ ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಪವರ್ ಕಟ್ ಆದ ಪರಿಣಾಮ ಆರಂಭದಲ್ಲಿ ಡಿಆರ್ ಎಸ್ ಸೇವೆ ಲಭ್ಯವಿರಲಿಲ್ಲ. ಹೀಗಾಗಿ ಕಾನ್ವೇ ಅಸಮಾಧಾನದಿಂದ ಪೆವಿಲಿಯನ್ ಗೆ ಮರಳಬೇಕಾಯಿತು.
ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಸೇರಿದಂತೆ ಕಾಮೆಂಟೇಟರ್ ಗಳು ‘ಇದು ಮೈದಾನದ ಅಂಪೈರ್‌ನ ಕಳಪೆ ನಿರ್ಧಾರ ಮತ್ತು ಚೆಂಡು ಸ್ಟಂಪ್‌ನಿಂದ ಹೊರಹೋಗಿದೆ’ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ:ಐಪಿಎಲ್ 2022: ಕೂಟದಿಂದ ಹೊರಬಿದ್ದ ಡೆಲ್ಲಿ ಓಪನರ್ ಪೃಥ್ವಿ ಶಾ
ಸತತ ವಿಕೆಟ್ ಕಳೆದುಕೊಂಡ ಸಿಎಸ್ ಕೆ ತಂಡವು 16 ಓವರ್ ಗಳಲ್ಲಿ ಕೇವಲ 97 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಗುರಿ ಬೆನ್ನತ್ತಿದ್ದ ಮುಂಬೈ ತಂಡ ಐದು ವಿಕೆಟ್ ಕಳೆದುಕೊಂಡು 103 ರನ್ ಗಳಿಸಿತು. ಈ ಸೋಲಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಧಿಕೃತವಾಗಿ ಪ್ಲೇ ಆಫ್ ರೇಸ್ ನಿಂದ ಹೊರಬಿತ್ತು.