Advertisement

ಜೀವನದಲ್ಲಿ ಕಂಟ್ರೋಲ್‌ ಝಡ್‌ಗೆ ಅವಕಾಶವಿಲ್ಲ!

09:54 PM Jul 28, 2019 | Team Udayavani |

ಓಹ್‌ ಆ ಘಟನೆ ನಡೆಯಬಾರದಿತ್ತು. ಅದು ನಡೆದೇ ಇಂದು ನಾನು ಈ ಸ್ಥಿತಿಗೆ ಬಂದಿದ್ದೀನಿ. ಅವನಿಂದ/ ಅವಳಿಂದ ದೂರವಾಗಿದ್ದೀನಿ. ಛೇ, ಅದೊಂದು ದಿನ ನಾನು ಚೆನ್ನಾಗಿ ವರ್ತಿಸ ಬೇಕಿತ್ತು. ಈಗ ನಾನು ಎಲ್ಲೋ ಇರುತ್ತಿದ್ದೆ. ಈಗಲೂ ಕಾಲವಿದೆ, ಅದೊಂದು ಘಳಿಗೆ ಸರಿಪಡಿಸಿದರೆ, ಮರುಕಳಿಸಿದರೆ ನಾನು ಸೆಟ್ಲ ಆಗಿಬಿಡುತ್ತೇನೆ ಎಂಬ ಇಂತಹ ಮಾತುಗಳು ನಮ್ಮ ಸ್ನೇಹಿತರು, ಆಪ್ತರಿಂದ ಆಗಾಗ ಕೇಳುತ್ತಿರುತ್ತೇವೆ.

Advertisement

ಆತುರ, ಅವಸರದಲ್ಲಿ ಏನೋ ಮಾಡಲು ಹೋಗಿ, ಇನ್ನೇನೂ ಮಾಡಿಕೊಂಡು ಬಿಡುತ್ತೇವೆ. ಅನಂತರ ತುಂಬಾ ತಾಳ್ಮೆಯಿಂದ ವರ್ತಿಸಲು ನೋಡುತ್ತೇವೆ. ಅಷ್ಟೊತ್ತಿಗೆ ಕಾಲ ಮಿಂಚಿ ಹೋಗಿರುತ್ತದೆ. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫ‌ಲವೇನೂ ಎಂಬಂತೆ ಸೋಲನ್ನು ಒಪ್ಪಿಕೊಂಡು ಸುಮ್ಮನೇ ಇರಬೇಕಾಗುತ್ತದೆ.

ಜೀವನವೂ ಒಂದು ಸುಂದರ ಅನುಭೂತಿ. ಅದನ್ನು ನಾವು ಅನುಭವಿಸಬೇಕು ಹಾಗೂ ಜೀವಿಸಬೇಕು. ಆದರೆ ಯಾವುದೋ ತರಾತುರಿಯಲ್ಲಿ ಬದುಕಲು ಹೋದರೆ ತುಂಬಾ ವ್ಯಥೆ ಪಡಬೇಕಾಗುತ್ತದೆ. ನಮ್ಮ ಕಂಪ್ಯೂಟರ್‌ನಲ್ಲಿ ನಾವು ಟೈಪ್‌ ಮಾಡಬೇಕಾದರೆ ಕೆಲವೊಂದು ತಪ್ಪು ಟೈಪ್‌ ಮಾಡಿದಾಗ, ಮತ್ತೇ ಅದನ್ನು ಸರಿಪಡಿಸಲು ಹಾಗೂ ಮೊದಲಿನದು ಮತ್ತೇ ತರಲು ಕಂಟ್ರೋಲ್‌ ಝಡ್‌ ಬಳಸುತ್ತೇವೆ. ಆದರೆ ಜೀವನ ಕಂಪ್ಯೂಟರ್‌ ತರಹ ಅಲ್ಲ. ಇಲ್ಲಿ ಕಂಟ್ರೋಲ್‌ ಝಡ್‌ಗೆ ಅವಕಾಶವೇ ಇಲ್ಲ. ಒಮ್ಮೆ ಏನಾಗತ್ತದೋ, ಅದೇ ಕೊನೆಯವರೆಗೂ ಇರುತ್ತದೆ. ಹಾಗಾಗಿ ನಾವು ನಮ್ಮ ನಡವಳಿಕೆ, ಭಾವನೆ, ವಿಚಾರಗಳು ಕೂಡ ಅಷ್ಟೇ ಸ್ವತ್ಛಂದವಾಗಿರಬೇಕು, ಶುದ್ಧವಾಗಿರಬೇಕು.

ಜೀವನದಲ್ಲಿ ಬದುಕುವಾಗ ನಾವೆಲ್ಲರೂ ಖುಷಿ, ಸಂತೋಷ ಹಾಗೂ ನೆಮ್ಮದಿಯನ್ನು ಅರಸುತ್ತೇವೆ. ಅಂತೆಯೇ ನಮ್ಮ ಅನುಕೂಲ, ವೈಯಕ್ತಿಕ ಹಿತಾಸಕ್ತಿಗೆ ಕೆಲವೊಂದು ಬಾರಿ ನಾವು ನಮ್ಮವರಿಗೆ ದ್ರೋಹ ಮಾಡಿ, ಬಳಿಕ ಕ್ಷಮೆಗೂ ಅನರ್ಹರಾದರೂ ನಾವು ಕ್ಷಮೆ ಕೇಳುತ್ತೇವೆ. ಆ ಘಟನೆ, ಸಮಯ ಆಗಿತ್ತು ಎಂದು ತೇಪೆ ಹಚ್ಚುತ್ತೇವೆ. ಕ್ಷಣಿಕದ ಕೋಪ-ತಾಪ, ಅಹಂಕಾರದಿಂದ ಸೋತವರ ಬಗ್ಗೆ ಹಲವು ಕಥೆಗಳನ್ನು ಕೇಳಿರಬಹುದು ಆದರೆ ಅವರೂ ನಮಗೆ ಪಾಠವಾಗಬೇಕು. ಹೀಗಾಗಿ ಎಂಥ ಸಂದರ್ಭಗಳೇ ಇರಲಿ, ನಿಮ್ಮ ವರ್ತನೆ, ನಡುವಳಿಕೆ ಮುಖ್ಯವಾಗುತ್ತದೆ. ಜೀವನದಲ್ಲಿ ಕಂಟ್ರೋಲ್‌ ಝಡ್‌ಗೆ ಅವಕಾಶವಿಲ್ಲ ಎಂಬುದು ನೆನಪಿರಲಿ.

-   ಅಭಿನವ

Advertisement
Advertisement

Udayavani is now on Telegram. Click here to join our channel and stay updated with the latest news.

Next