ಅಶ್ಲೀಲ, ಅಸಭ್ಯ, ಅನುಚಿತ ಮತ್ತು ಆಕ್ಷೇಪಾರ್ಹ ವಿಷಯಗಳನ್ನು ಪ್ರದರ್ಶಿಸುತ್ತಿದ್ದ 18 ಒಟಿಟಿ ಪ್ಲಾಟ್‌ಫಾರಂಗಳನ್ನು ಕೇಂದ್ರ ಸರಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ಇದರ ಜತೆಯಲ್ಲಿ ಈ ನಿಷೇಧಿತ ಒಟಿಟಿ ಪ್ಲಾಟ್‌ಫಾರಂ ಗಳಿಗೆ ಸಂಬಂಧಿಸಿದಂತೆ 10 ಪ್ಲಿಕೇಶನ್‌ಗಳು, 19 ವೆಬ್‌ಸೈಟ್‌ಗಳು ಹಾಗೂ 57 ಸಾಮಾಜಿಕ ಜಾಲ ತಾಣ ಖಾತೆಗಳಿಗೂ ನಿರ್ಬಂಧ ವಿಧಿಸಲಾಗಿದೆ. ಈ ಮೂಲಕ ಕೇಂದ್ರ ಸರಕಾರ ದೇಶದ ಕಾನೂನು ನಿಯಮಾವಳಿಗಳೆಲ್ಲವನ್ನೂ ಗಾಳಿಗೆ ತೂರಿ ದೇಶದಲ್ಲಿ ಕಾರ್ಯ ನಿರ್ವಹಿಸಲು ಮುಂದಾಗುವ ಸಾಮಾಜಿಕ ಮಾಧ್ಯಮಗಳಿಗೆ ದೇಶದಲ್ಲಿ ಅವಕಾಶ ನೀಡಲಾಗದು ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.
ಸದ್ಯ ಸರಕಾರದಿಂದ ನಿಷೇಧಿತವಾಗಿರುವ ಈ ಎಲ್ಲ ಒಟಿಟಿ ಪ್ಲಾಟ್‌ಫಾರಂಗಳು ಮತ್ತು ಇವುಗಳೊಂದಿಗೆ ನಂಟು ಹೊಂದಿರುವ ಸಾಮಾಜಿಕ ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸೃಜನಶೀಲತೆಯ ಹೆಸರಿನಲ್ಲಿ ಅಸಭ್ಯ ಮತ್ತು ಅಶ್ಲೀಲ ವಿಷಯಗಳನ್ನು ಪ್ರದರ್ಶಿಸುತ್ತಲೇ ಬಂದಿದ್ದವು. ಈ ಬಗ್ಗೆ ಕೇಂದ್ರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ತತ್‌ಕ್ಷಣವೇ ಇಂತಹ ಅಕ್ರಮ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಸಂಬಂಧಿತ ಕಂಪೆನಿಗಳಿಗೆ ಸೂಚನೆ ನೀಡಿತ್ತು. ಇದರ ಹೊರತಾಗಿಯೂ ಈ ಒಟಿಟಿ ಪ್ಲಾಟ್‌ಫಾರಂಗಳು ಮತ್ತು ವೆಬ್‌ಸೈಟ್‌ಗಳು ಅಶ್ಲೀಲ ಮತ್ತು ಆಕ್ಷೇಪಾರ್ಹ ವಿಷಯಗಳನ್ನು ತೆಗೆಯದೆ ತಮ್ಮ ಚಾಳಿಯನ್ನು ಮುಂದುವರಿಸಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಹಕ್ಕುಗಳು, ಸಾಮಾಜಿಕ ಮಾಧ್ಯಮಗಳು ಮತ್ತು ಮನೋರಂಜನ ಕ್ಷೇತ್ರದ ತಜ್ಞರು ಹಾಗೂ ಕೇಂದ್ರದ ಸರಕಾರದ ಇನ್ನಿತರ ಸಂಬಂಧಿತ ಸಚಿವಾಲಯಗಳೊಂದಿಗೆ ಸಮಾಲೋಚನೆ ನಡೆಸಿ, ಈ ಎಲ್ಲ ಒಟಿಟಿ ಪ್ಲಾಟ್‌ಫಾರಂಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಮಾಹಿತಿ ತಂತ್ರಜ್ಞಾನ ಕಾಯಿದೆ, 2000ದ ನಿಯಮಾವಳಿಗಳಡಿಯಲ್ಲಿ ನಿಷೇಧಿಸಿ ಆದೇಶ ಹೊರಡಿಸಿದೆ.
ಸೃಜನಶೀಲತೆಯನ್ನು ಮುಂದಿಟ್ಟು ಕೌಟುಂಬಿಕ ಸಂಬಂಧ, ಗುರು-ಶಿಷ್ಯ ಬಾಂಧವ್ಯವನ್ನೂ ಅತ್ಯಂತ ಕೀಳಾಗಿ ಬಿಂಬಿಸುವ ಅಶ್ಲೀಲ ಮತ್ತು ಅನುಚಿತ ವಿಷಯಗಳನ್ನು ಈ ಒಟಿಟಿಗಳಲ್ಲಿ ಪ್ರದರ್ಶಿಸಲಾಗುತ್ತಿತ್ತು. ಅಷ್ಟು ಮಾತ್ರವಲ್ಲದೆ ಕೆಲವೊಂದು ದ್ವೇಷಮಯ ಮತ್ತು ಆಕ್ಷೇಪಾರ್ಹ ವಿಷಯಗಳನ್ನೂ ಈ ಸಾಮಾಜಿಕ ಜಾಲ ತಾಣ ಖಾತೆಗಳ ಮೂಲಕ ಹರಡಲಾಗುತ್ತಿತ್ತು. ಮಹಿಳೆಯರ ಘನತೆ, ಗೌರವಕ್ಕೆ ಕುಂದುಂಟು ಮಾಡುವ ಮತ್ತು ಮಕ್ಕಳ ಮೇಲೆ ದೌರ್ಜನ್ಯ, ಶೋಷಣೆಯಂತಹ ಸಂಗತಿಗಳೂ ಇದರಲ್ಲಿ ಸೇರಿದ್ದವು. ಇವೆಲ್ಲವನ್ನು ಗಂಭೀರವಾಗಿ ಪರಿಗಣಿಸಿ ಸರಕಾರ ಈ ನಿರ್ಧಾರ ಕೈಗೊಂಡಿದೆ.
ಸರಕಾರದ ಈ ನಿರ್ಧಾರ ಸ್ವಾಗತಾರ್ಹ ಮತ್ತು ನ್ಯಾಯೋಚಿತ ಕೂಡ. ಆದರೆ ಈಗ ನಿಷೇಧಿಸಲ್ಪಟ್ಟಿರುವ ಈ ಒಟಿಟಿ ಪ್ಲಾಟ್‌ಫಾರಂಗಳು, ವೆಬ್‌ಸೈಟ್‌ಗಳು, ಆ್ಯಪ್‌ಗ್ಳು ಮತ್ತು ಸಾಮಾಜಿಕ ಜಾಲ ತಾಣ ಖಾತೆಗಳು ವಿದೇಶಗಳ ನೆಟ್‌ವರ್ಕ್ ಮತ್ತು ಮೂರನೇ ಮಧ್ಯವರ್ತಿ ಕಂಪೆನಿಗಳ ಸಹಿತ ಇತರ ಯಾವುದೇ ಮಾರ್ಗದಲ್ಲಿ ದೇಶದಲ್ಲಿ ಲಭ್ಯವಾಗದಂತೆ ಖಾತರಿಪಡಿಸುವ ಮಹತ್ತರ ಹೊಣೆಗಾರಿಕೆ ಸರಕಾರದ ಮೇಲಿದೆ. ಹಾಗಾದಲ್ಲಿ ಮಾತ್ರವೇ ಇವುಗಳ ನಿಷೇಧ ಸಂಪೂರ್ಣ ಯಶಸ್ವಿಯಾಗಲು ಸಾಧ್ಯ. ಮಾಹಿತಿ ತಂತ್ರಜ್ಞಾನ ಕ್ಷೇತ್ರ ದಿನೇದಿನೆ ಪ್ರಗತಿಪಥದಲ್ಲಿ ದಾಪುಗಾಲಿಡುತ್ತಿರು ವಾಗ ಸರಕಾರ ಇನ್ನೂ ಇಂತಹ ನಿಷೇಧ, ನಿರ್ಬಂಧಗಳಿಗೆ ಸೀಮಿತವಾಗದೆ ತಂತ್ರಜ್ಞಾನ ಮಾರ್ಗದ ಮೂಲಕವೇ ಇವುಗಳಿಗೆ ಶಾಶ್ವತ ಕಡಿವಾಣ ಹಾಕಲು ಸೂಕ್ತ ಕಾರ್ಯತಂತ್ರ ರೂಪಿಸಬೇಕು. ಇಲ್ಲವಾದಲ್ಲಿ ಇಂತಹ ನಿಷೇಧಗಳು “ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ’ ಎಂಬ ಗಾದೆ ಮಾತಿನಂತಾಗುವುದು ನಿಶ್ಚಿತ.