Advertisement

ಔಷಧ ಕಂಪನಿಗಳ ಧನದಾಹ ನಿಯಂತ್ರಿಸಿ

12:57 PM Mar 05, 2017 | |

ದಾವಣಗೆರೆ: ಔಷಧ ಕಂಪನಿಗಳ ಧನದಾಹ ನಿಯಂತ್ರಿಸಲು, ಔಷಧ ಮಾರಾಟ ಪ್ರತಿನಿಧಿಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ಕಾನೂನು ರಚಿಸಬೇಕು ಎಂದು ಎಂಎಫ್‌ಆರ್‌ಐ ಪ್ರಧಾನ ಕಾರ್ಯದರ್ಶಿ ಶಾಂತನು ಚಟರ್ಜಿ ಆಗ್ರಹಿಸಿದರು. ಶನಿವಾರ ಮೋತಿ ಚನ್ನಸಬಸಮ್ಮ ಕಲ್ಯಾಣ ಮಂಟಪದಲ್ಲಿ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ 24ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. 

Advertisement

ಇಂದು ಔಷಧ ಕಂಪನಿಗಳು ಹೆಚ್ಚು ಹೆಚ್ಚು ಲಾಭ ಗಳಿಸುವ ಏಕೈಕಉದ್ದೇಶದಿಂದ ವ್ಯಾಪಾರಿ ಧರ್ಮ ಮೀರಿ ವ್ಯವಹರಿಸುತ್ತಿವೆ. ಔಷಧಗಳಿಗೆ ಹೆಚ್ಚು ಬೆಲೆ ನಿಗದಿ ಮಾಡಿ, ಅಧಿಕ ಪ್ರಮಾಣದಲ್ಲಿ ಮಾರಾಟ ಆಗಬೇಕು ಎಂಬ ಉದ್ದೇಶದಿಂದ ಮಾರಾಟ ಪ್ರತಿನಿಧಿಗಳ ಮೇಲೆ ಒತ್ತಡ ಹೇರುತ್ತಿವೆ. ಇದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಸೂಕ್ತ ಕಾನೂನು ಜಾರಿ ಮಾಡಬೇಕು ಎಂದರು. 

ಇಂದು ಮಾರಾಟ ಪ್ರತಿನಿಧಿಗಳು, ವೈದ್ಯರು ಜನರ ವೈರಿಗಳೆಂಬಂತೆ ಆಗಿದ್ದಾರೆ. ಕೇಂದ್ರ ಸರ್ಕಾರ ಸಹ ಈ ಇಬ್ಬರನ್ನು ವೈರಿಗಳಂತೆ ಬಿಂಬಿಸುತ್ತಿದೆ. ಔಷಧ ಕಂಪನಿಗಳು ಯಾವುದೇ ತಪ್ಪು ಮಾಡುತ್ತಿಲ್ಲ, ಬದಲಿಗೆ ಇವರೇ ಎಲ್ಲ ತಪ್ಪು ಮಾಡುತ್ತಿದ್ದಾರೆ. ವೈದ್ಯರು ದುಡ್ಡು ತೆಗೆದುಕೊಳ್ಳುತ್ತಾರೆ. ಮಾರಾಟ ಪ್ರತಿನಿಧಿಗಳು ಹೆಚ್ಚು ಔಷಧ ಮಾರಾಟ ಮಾಡುವ ಸಲುವಾಗಿ ವೈದ್ಯರಿಗೆ ದುಡ್ಡು ಕೊಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
 

ಆದರೆ, ಇದಕ್ಕೆ ಕಾರಣ ಕಂಪನಿಗಳೇ ಹೊರತು ವೈದ್ಯರು, ಮಾರಾಟ ಪ್ರತಿನಿಧಿಗಳಲ್ಲ ಎಂದು ಅವರುಸ್ಪಷ್ಟಪಡಿಸಿದರು. ಕೇಂದ್ರ ಸರ್ಕಾರ ಸ್ವತಃ ಔಷಧ ಕಂಪನಿಗಳಿಗೆ ಉತ್ತೇಜನ ನೀಡುತ್ತಿದೆ. ಬೆಲೆ ನಿಗದಿ ಮಾಡುವಾಗ ಸಂಪೂರ್ಣ ಸ್ವಾಯತ್ತತೆ ನೀಡುತ್ತಿದೆ. ಇನ್ನೊಂದು ಕಡೆ ತನ್ನ ಒಡೆತನದ ಔಷಧ ಕಂಪನಿಗಳನ್ನು ಮುಚ್ಚಲು ಹೊರಟಿದೆ. ಇದರಿಂದ ಆಗುವ ಪರಿಣಾಮಗಳ ಕುರಿತು ಚಿಂತನೆ ನಡೆಸುತ್ತಿಲ್ಲ.

ಒಂದು ವೇಳೆ ಸಾರ್ವಜನಿಕ ಔಷಧ ಕಂಪನಿಗಳು ಮುಚ್ಚಿದರೆ ಔಷಧ ಕಂಪನಿಗಳು ಲಾಭಕ್ಕಾಗಿ ದುರ್ಮಾರ್ಗ ಹಿಡಿಯಲಿವೆ. ಜನರ ಶೋಷಣೆ ಮಾಡಲಿವೆ. ಸಾರ್ವಜನಿಕ ಒಡೆತನದ ಕಂಪನಿಗಳನ್ನು ಕೇಂದ್ರ ಸರ್ಕಾರ ಮುಚ್ಚಬಾರದು ಎಂದರು. ಮಾರಾಟ ಪ್ರತಿನಿಧಿಗಳನ್ನು ಈಗಾಗಲೇ ಕಂಪನಿಗಳು ಶೋಷಣೆ ಮಾಡುತ್ತಿವೆ. ಮೊದಲು ಕಂಪನಿಯಿಂದ ನೇರ ನೇಮಕ ಮಾಡಿಕೊಳ್ಳಲಾಗುತ್ತಿತ್ತು.

Advertisement

ಇದೀಗ ವಿತರಕರ ಕಡೆಯಿಂದ ಪ್ರತಿನಿಧಿಗಳ ನೇಮಕ ಆಗುತ್ತಿದೆ. ಕಡಮೆ ವೇತನ ನೀಡಿ, ಹೆಚ್ಚಿನ ಕೆಲಸ ತೆಗೆದುಕೊಳ್ಳುವ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ. ತಾಂತ್ರಿಕತೆ ಬಳಸಿಕೊಂಡು ಹೆಚ್ಚಿನ ವಹಿವಾಟು ಮಾಡುವ ದುರುದ್ದೇಶವನ್ನು ಕಂಪನಿಗಳು ಬೆಳೆಸಿಕೊಳ್ಳುತ್ತಿವೆ.

ವೈದ್ಯರಿಗೆ ಆಮಿಷಗಳನ್ನೊಡ್ಡಿ, ಹೆಚ್ಚಿನ ಔಷಧ ಮಾರಾಟ ಮಾಡುವಂತೆ ಮಾಡುತ್ತಿವೆ ಎಂದು ಅವರು ದೂರಿದರು. ಡಾ| ಎಚ್‌.ಎಲ್‌. ಸುಬ್ಬರಾವ್‌, ಸಿಐಟಿಯು ಪ್ರಧಾನ ಕಾರ್ಯದಶಿ ಮೀನಾಕ್ಷಿ ಸುಂದರಂ, ಕಾರ್ಯದರ್ಶಿ ಕೆ.ಎನ್‌. ಉಮೇಶ್‌, ಕಾಮೇಶ್ವರರಾವ್‌, ಎಚ್‌.ಜಿ. ಸುರೇಶ್‌, ಎಚ್‌.ಕೆ. ರಾಮಚಂದ್ರಪ್ಪ, ಕೆ.ಎಲ್‌. ಭಟ್‌ ವೇದಿಕೆಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next