Advertisement

ಮದ್ಯಕ್ಕೆ ನಿಯಂತ್ರಣ: ಎಲ್ಲೆಡೆ ನಾಕಾಬಂದಿ ಲಗಾಮು

11:26 AM Mar 17, 2019 | |

ಗಜೇಂದ್ರಗಡ: ಚುನಾವಣಾ ಆಯೋಗ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲನೆಗೆ ಮುಂದಾಗಿದೆ. ಮದ್ಯ ಮಾರಾಟಕ್ಕೆ ನಿಯಂತ್ರಣ ಹೇರಿದೆ.

Advertisement

ಹಳ್ಳಿಗಳಲ್ಲಿ ದಿನಸಿ ಅಂಗಡಿ, ಕ್ಯಾಂಟೀನ್‌, ಗೂಡಂಗಡಿಗಳಲ್ಲೂ ನಡೆಯುತ್ತಿದ್ದ ಮದ್ಯದ ವ್ಯವಹಾರಕ್ಕೆ ಬಿಸಿ ಮುಟ್ಟಿದೆ. ಎಣ್ಣೆ ಮಾರಾಟಕ್ಕೆ ಬ್ರೇಕ್ ಬಿದ್ದಿದೆ. ಹೆದ್ದಾರಿ ಬದಿಯ ಡಾಬಾಗಳ ಮೇಲೂ ಚುನಾವಣಾ ಅಧಿಕಾರಿಗಳು ಗಮನವಿರಿಸಿದ್ದು ಮದ್ಯ ಮಾರದಂತೆ ಕಟ್ಟೆಚ್ಚರ ವಹಿಸಿದ್ದಾರೆ. ವೈನ್‌ ಸ್ಟೋರ್  ಗಳ ಕೌಂಟರ್‌ನಲ್ಲಿ ಮದ್ಯ ಸೇವನೆಗೆ ವ್ಯವಸ್ಥೆ ಕಲ್ಪಿಸದಂತೆ ಮಾಲೀಕರಿಗೆ ಸೂಚನೆ ನೀಡಿದ್ದಾರೆ.

ಇಂತಿಷ್ಟೇ  ಮದ್ಯ ಮಾರಾಟ ಮಾಡಬೇಕೆಂದು ಸೂಚನೆ ನೀಡಲಾಗಿದೆ. ಕಾನೂನು ಪ್ರಕಾರ ಸಾಮಾನ್ಯ ದಿನಗಳಲ್ಲಿ ಒಬ್ಬರಿಗೆ ಗರಿಷ್ಠ 6 ಬಾಟಲ್‌ ಮದ್ಯ ನೀಡಬಹುದಾಗಿದೆ. ಆದರೆ ಚುನಾವಣಾ ನೀತಿ ಸಂಹಿತೆ  ಜಾರಿಯಲ್ಲಿರುವುದರಿಂದ ಒಬ್ಬರಿಗೆ ಕೇವಲ 2 ಬಾಟಲ್‌ ಮದ್ಯ ಮಾತ್ರ ಮಾರಬಹುದಾಗಿದೆ. ಜೊತೆಗೆ ಅಂಗಡಿಯಲ್ಲಿ ಮದ್ಯ ಸೇವನೆ ನಿಷೇಧಿಸಲಾಗಿದೆ. ಅಂಗಡಿ ಮಾಲೀಕರು ಸಹ ಪ್ರತಿನಿತ್ಯ ತಮಗಿರುವ ಬೇಡಿಕೆ ಹಾಗೂ ವ್ಯವಹಾರದ ಲೆಕ್ಕವನ್ನು ಚುನಾವಣಾ ಅಧಿಕಾರಿಗಳಿಗೆ ನೀಡಬೇಕಾಗಿದೆ. ಚುನಾವಣಾ ಆಯೋಗ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾದ ಪಾಲನೆಗೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆಯಾದರೂ ಕೆಲವು ಮದ್ಯದ ಅಂಗಡಿಗಳಲ್ಲಿ ಚುನಾವಣಾ ಆಯೋಗದ ಆದೇಶ ಧಿಕ್ಕರಿಸಿ ರಾಜಾರೋಷವಾಗಿ ಹೆಚ್ಚೆಚ್ಚು ಮದ್ಯ ಮಾರಾಟಕ್ಕೆ ಮುಂದಾಗಿದ್ದಾರೆ ಎನ್ನುವ ಆರೋಪಗಳು ಪ್ರಬಲವಾಗಿ ಕೇಳಿ ಬರುತ್ತಿವೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಯೋಗ ಅಬಕಾರಿ ಇಲಾಖೆಗೆ ನೀಡಿದ ನಿರ್ದೇಶನದಂತೆ ರೋಣ ಮತ್ತು ಗಜೇಂದ್ರಗಡ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಇಲಕಲ್‌ ಕ್ರಾಸ್‌, ಪುರ್ತಗೇರಿ ಕ್ರಾಸ್‌, ಬೆಳವಣಕಿ, ಹಿರೇಹಾಳ ಗ್ರಾಮ ಬಳಿ ನಾಕಾ ಬಂದಿಗಳನ್ನು ಹಾಕಲಾಗಿದೆ. ಅಲ್ಲದೇ ಎರಡು ತಾಲೂಕುಗಳ ವ್ಯಾಪ್ತಿಯಲ್ಲಿನ ಮದ್ಯದ ಅಂಗಡಿಗಳ ಮಾಲೀಕರ ಸಭೆ ಕರೆದು ಆಯೋಗದ ನಿಯಮ ಪಾಲನೆಗೆ ಆದೇಶಿಸಲಾಗಿದೆ. ಆದಾಗ್ಯೂ ನಿಯಮ ಪಾಲಿಸದಿರುವುದು ಕಂಡು ಬಂದರೆ ಸೂಕ್ತ ಕ್ರಮ ಜರುಗಿಸಲಾಗುವುದು.
. ದೀಪಕ್‌ ಎಸ್‌,
 ಅಬಕಾರಿ ನಿರೀಕ್ಷಕ

ಈ ಬಾರಿಯ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗ ಹೆಚ್ಚಿನ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿರುವುದು ಸ್ವಾಗತಾರ್ಹ. ಆದರೆ ಆದೇಶವನ್ನು ಸಮರ್ಪಕವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಆಯೋಗ ಕಣ್ಗಾವಲು ಹಾಕಬೇಕು. ಅಂದಾಗ ಮಾತ್ರ ಪಾರದರ್ಶಕ ಮತದಾನ ನಡೆಸಲು ಸಹಕಾರಿಯಾಗಲಿದೆ.
. ಮಹಾಂತೇಶ ಹೊಸಮನಿ,
 ಪ್ರಗತಿಪರ ಚಿಂತಕ

Advertisement

ಡಿ.ಜಿ ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next