Advertisement

ಡೆಂಗ್ಯೂ, ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಿ

10:11 PM Jul 24, 2019 | mahesh |

ಉಪ್ಪಿನಂಗಡಿ : ಗ್ರಾಮದಲ್ಲಿ ಕಾಡುತ್ತಿರುವ ಡೆಂಗ್ಯೂ ಜ್ವರ ಸಹಿತ ಸಾಂಕ್ರಾಮಿಕ ರೋಗಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು. ಈ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ಜರುಗಿಸಬೇಕು ಎಂದು ಉಪ್ಪಿನಂಗಡಿ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಕೆ. ಅಬ್ದುಲ್‌ ರಹಿಮಾನ್‌ ಅಧ್ಯಕ್ಷತೆಯಲ್ಲಿ ಜು. 23ರಂದು ಗ್ರಾಮಸಭೆಯಲ್ಲಿ ನಡೆಯಿತು. ಉಪ್ಪಿನಂಗಡಿಯ ಸರಕಾರಿ ವೈದ್ಯರೂ ಡೆಂಗ್ಯೂ ಜ್ವರ ಪೀಡಿತರಾಗಿದ್ದಾರೆ ಎನ್ನುವ ಮಾಹಿತಿ ಇದೆ. ಹಲವಾರು ಡೆಂಗ್ಯೂ ಪ್ರಕರಣಗಳು ಹೊಸದಾಗಿ ದಾಖಲಾಗುತ್ತಿದೆ. ರೋಗಿಗಳ ಚಿಕಿತ್ಸೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವೇನು? ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಹೆಚ್ಚುವರಿ ವೈದ್ಯರ ನೇಮಕಾತಿ ಅಗತ್ಯ ಎಂದು ಗ್ರಾಮಸ್ಥರು ಹೇಳಿದರು.

ಕಟ್ಟಡ ಕಾರ್ಮಿಕ ನಿಧಿ ಏನಾಗುತ್ತಿದೆ?
ಕಟ್ಟಡ ನಿರ್ಮಾಣದ ವೇಳೆ ಕಟ್ಟಡ ಕಾರ್ಮಿಕ ನಿಧಿ ಎಂದು ಸಂಗ್ರಹಿಸಿ ಲಕ್ಷಾಂತರ ರೂ.ಗಳನ್ನು ಕಾರ್ಮಿಕ ಇಲಾಖೆಗೆ ನೀಡಲಾಗುತ್ತದೆ. ಆದರೆ ಈ ಇಲಾಖೆಯ ಸೌಲಭ್ಯಗಳು ಕಾರ್ಮಿಕರಿಗೆ ಸರಿಯಾಗಿ ದೊರಕುತ್ತಿಲ್ಲ. ಪುತ್ತೂರಲ್ಲಿ ಕಚೇರಿ ಇದೆ. ಅದು ಇದ್ದೂ ಇಲ್ಲದಂತಿದೆ. ಕಾರ್ಮಿಕರಿಗೆ ಅನುಕೂಲ ಆಗುವ ಸಲುವಾಗಿ ಈ ಕಚೇರಿಯನ್ನು ಪುತ್ತೂರು ಮಿನಿ ವಿಧಾನಸೌಧ ಕಚೇರಿಗೆ ಸ್ಥಳಾಂತರ ಮಾಡುವಂತೆ ಇಲಾಖೆಯನ್ನು ಕೋರುವಂತೆ ಆಗ್ರಹ ವ್ಯಕ್ತವಾಗಿ ಅದರಂತೆ ನಿರ್ಣಯ ಅಂಗೀಕರಿಸಲಾಯಿತು.

ಗ್ರಾಮಸ್ಥರಾದ ಮಹಮ್ಮದ್‌ ಕೆಂಪಿ, ಲಕ್ಷ್ಮಣ ಗೌಡ, ಚಂದ್ರ ಗೌಡ, ಮಹಮ್ಮದ್‌ ಕೆಂಪಿ, ಜುಬೇರ್‌ ಪೆರಿಯಡ್ಕ, ಅಜೀಜ್‌ ಪೆರಿಯಡ್ಕ, ಸ್ನೇಕ್‌ ಝಕರಿಯಾ ಸಮಸ್ಯೆಗಳ ಬಗ್ಗೆ ಸಭೆಯ ಗಮನ ಸೆಳೆದರು. ಉಷಾ ಮುಳಿಯ ಉಪಸ್ಥಿತರಿದ್ದರು. ತಾ.ಪಂ. ಸದಸ್ಯೆ ಸುಜಾತಾಕೃಷ್ಣ, ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಹೇಮಲತಾ ಶೆಟ್ಟಿ, ಸದಸ್ಯರಾದ ಯು.ಕೆ. ಇಬ್ರಾಹಿಂ, ಸುರೇಶ್‌ ಅತ್ರಮಜಲು, ಗೋಪಾಲ ಹೆಗ್ಡೆ, ಸುನಿಲ್‌ ದಡ್ಡು, ರಮೇಶ್‌ ಭಂಡಾರಿ, ಉಮೇಶ್‌ ಗೌಡ, ಸುಂದರಿ, ಸುಶೀಲಾ, ಚಂದ್ರಾವತಿ, ಜಮೀಳಾ, ಯೋಗಿನಿ, ಚಂದ್ರಾವತಿ ಹೆಗ್ಡೆ ಉಪಸ್ಥಿತರಿದ್ದರು.

ಪಶು ವೈದ್ಯ ಆಸ್ಪತ್ರೆಯ ಡಾ| ರಾಮ್‌ ಪ್ರಕಾಶ್‌ ಚರ್ಚಾ ನಿಯಂತ್ರಣಾಧಿಕಾರಿ ಯಾಗಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹರಿಣಾಕ್ಷಿ, ಜಿ.ಪಂ. ಎಂಜಿನಿಯರ್‌ ಸಂದೀಪ್‌, ತೋಟಗಾರಿಕಾ ಇಲಾಖೆಯ ಬಸವ ರಾಜ, ಕಂದಾಯ ಇಲಾಖೆಯ ಚಂದ್ರ ನಾಯ್ಕ, ಶಿಕ್ಷಣ ಇಲಾಖೆಯ ಸೀತಮ್ಮ ಅವರು ಇಲಾಖಾ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಮಾಧವ ಕೆ. ಸ್ವಾಗತಿಸಿ, ಕಾರ್ಯದರ್ಶಿ ಮರಿಯಮ್ಮ ವಂದಿಸಿದರು.

Advertisement

ಸಬ್‌ಸ್ಟೇಶನ್‌ ಕೋರಿಕೆ ಏನಾಯಿತು?
ವಿದ್ಯುತ್‌ ಸಮಸ್ಯೆ ಬಗೆಹರಿಸುವ ಬಗ್ಗೆ ಮೆಸ್ಕಾಂ ಅಧಿಕಾರಿಗಳು ಮತ್ತು ಸಿಬಂದಿ ಕಾಳಜಿಯಿಂದ ಕೆಲಸ ಮಾಡಬೇಕೆಂದು ಗ್ರಾಮಸ್ಥರು ಅಗ್ರಹಿಸಿದರು. ಅಧ್ಯಕ್ಷರು ಮಾತನಾಡಿ, ಗ್ರಾಮದಲ್ಲಿ ಸಬ್‌ಸ್ಟೇಶನ್‌ಗೆ ಕೋರಿಕೆ ಸಲ್ಲಿಸಿ ವರ್ಷ ಕಳೆದರೂ ನಿವೇಶನ ಮಂಜೂರಾತಿ ಏಕೆ ಸಾಧ್ಯವಾಗಿಲ್ಲವೆಂದು ಎಂಜಿನಿಯರ್‌ ಅವರನ್ನು ಪ್ರಶ್ನಿಸಿದರು. ಈಗಾಗಲೇ ಮಠ ಬಳಿಯ ಗೋಮಾಳ ನಿವೇಶನವನ್ನು ಗುರುತಿಸಲಾಗಿದ್ದರೂ ಅರಣ್ಯ ಇಲಾಖೆಯ ಆಕ್ಷೇಪಣೆಯೊಂದಿಗೆ ಹಿರಿಯ ಅಧಿಕಾರಿಗಳು ಕಡತವನ್ನು ಹಾಗೇ ಇರಿಸಿಕೊಂಡಿದ್ದು, ಅದರ ಬೆನ್ನು ಹಿಡಿದು ಮಂಜೂರಾತಿ ಮಾಡುವುದು ಯಾರ ಕೆಲಸ? ನಿಗಮದ ಹಿರಿಯ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಹಿಡಿದು ಶಾಸಕರು ಒತ್ತಡ ಹೇರಿದ್ದರೂ ಸಾಧ್ಯವಾಗುತ್ತಿಲ್ಲ ಎಂದರು.

ಗ್ರಾ.ಪಂ. ಮೇಲ್ದರ್ಜೆಗೇರಿಸಿ
ಜನಸಂಖ್ಯೆ ಮಿತಿಮೀರಿದ್ದರೂ ಗ್ರಾ.ಪಂ. ಮೇಲ್ದರ್ಜೆಗೇರದ ಬಗ್ಗೆ ಗ್ರಾಮಸ್ಥರಾದ ಆದಂ ಕೊಪ್ಪಳ ಹಾಗೂ ನಝೀರ್‌ ಮಠ ವಿಷಯ ಪ್ರಸ್ತಾವಿಸಿದರು. ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದೆಂದು ಸರ್ವಾನುಮತದ ನಿರ್ಣಯದೊಂದಿಗೆ ತೀರ್ಮಾನ ಕೈಗೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next