Advertisement

ಅಪರಾಧ ಚಟುವಟಿಕೆ ನಿಯಂತ್ರಿಸಿ

10:12 AM Feb 03, 2019 | |

ಶಿವಮೊಗ್ಗ: ಗಾಂಜಾ, ಮಟ್ಕಾ ದಂಧೆಯನ್ನು ಜಿಲ್ಲಾ ಪೊಲೀಸ್‌ ಇಲಾಖೆ ನಿಯಂತ್ರಿಸದಿದ್ದರೆ ಶ್ರೀಮಂತವಾಗಿರುವ ಶಿವಮೊಗ್ಗದ ಸಾಂಸ್ಕೃತಿಕ ಸಂಪತ್ತು ಸಂಪೂರ್ಣ ನಾಶವಾಗಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಆತಂಕ ವ್ಯಕ್ತಪಡಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದೆ. ಬಹಿರಂಗವಾಗಿ ಭೀಕರ ಕೊಲೆ, ರೌಡಿ ಗ್ಯಾಂಗ್‌ ಮಧ್ಯೆ ಸಂಘರ್ಷ ನಡೆಯುತ್ತಿದೆ. ಭಯ ಜನರಲ್ಲಿದೆ, ರೌಡಿಗಳಿಗಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದರು.

ನಗರದ ಶಾಲಾ- ಕಾಲೇಜು ಆವರಣ, ಹಳ್ಳಿ ಹಳ್ಳಿಗಳಲ್ಲೂ ಗಾಂಜಾ ವ್ಯಾಪಿಸಿದೆ. ಸರಳವಾಗಿ ಶಾಲಾ- ಕಾಲೇಜು ಮಧ್ಯೆ ಗಾಂಜಾ ಹರಡುತ್ತಿದೆ. ಪೊಲೀಸ್‌ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಗಾಂಜಾ ಹಾಗೂ ಮಟ್ಕಾ ದಂಧೆೆ ನಿಯಂತ್ರಿಸುವಲ್ಲಿ ಪೊಲೀಸ್‌ ಇಲಾಖೆ ಸಮರ್ಥವಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಗಾಂಜಾ ಹಾಗೂ ಮಟ್ಕಾ ದಂಧೆ ಕೇವಲ ನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಹಳ್ಳಿಗಳನ್ನು ವ್ಯಾಪಿಸಿದೆ. ಮಟ್ಕಾ ದಂಧೆ ಸಣ್ಣ ಸಣ್ಣ ಹಳ್ಳಿಗಳನ್ನು ತಲುಪಿದೆ. ಇದನ್ನು ನಿಯಂತ್ರಿಸದಿದ್ದರೆ ಬಡ ಕುಟುಂಬಗಳು ಸಂಪೂರ್ಣ ಸರ್ವನಾಶವಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಪೊಲೀಸ್‌ ಸಿಬ್ಬಂದಿ ಮೇಲೆ ಗಾಂಜಾ ಸೇವಿಸಿ ಹಲ್ಲೆ ನಡೆಸುತ್ತಿರುವ ಪ್ರಕರಣ ವರದಿಯಾಗುತ್ತಿದೆ. ಜನಸಾಮಾನ್ಯರ ಮೇಲೆ ದಾಳಿ ನಡೆಯುತ್ತಿದೆ. ಗಾಂಜಾ ನಿಯಂತ್ರಿಸದಿದ್ದರೆ ಜಿಲ್ಲೆಯಲ್ಲಿ ಇನ್ನಷ್ಟು ಅಪರಾಧ ಕೃತ್ಯ ನಡೆಯುವುದರಲ್ಲಿ ಅನುಮಾನವಿಲ್ಲ. ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.

Advertisement

ಗಾಂಜಾ ಸೇವಿಸಿ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆದಾಗ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತು. ಆದರೆ ಪೊಲೀಸ್‌ ಇಲಾಖೆ ನಿಷ್ಕ್ರಿಯವಾದ ಪರಿಣಾಮ ಅಪರಾಧಿಗಳಲ್ಲಿ ಪೊಲೀಸರ ಬಗ್ಗೆ ಭಯ ಹೊರಟು ಹೋಗಿದೆ ಎಂದರು.

ಪೊಲೀಸ್‌ ಇಲಾಖೆ ಕಾನೂನುಬದ್ಧ ಮಾಫಿಯಾ ಆಗುತ್ತದೆ ಎಂಬ ಸಂದೇಹ ಕಾಡತೊಡಗಿದೆ. ಹೀಗಾದರೆ ಜನರ ರಕ್ಷಣೆ ಹೇಗೆ ಎಂಬ ಆತಂಕ ನಮ್ಮದಾಗಿದೆ. ತೀರ್ಥಹಳ್ಳಿಗೆ ಅನ್ಯ ರಾಜ್ಯಗಳಿಂದ ಮಾಫಿಯಾ ವ್ಯಕ್ತಿಗಳು ಬರುತ್ತಿದ್ದಾರೆ. ಹೀಗಾದರೆ ಪೊಲೀಸ್‌ ಇಲಾಖೆ ಇದೆಯೇ ಎಂದು ಪ್ರಶ್ನಿಸಿದರು.

ಪೊಲೀಸ್‌ ಇಲಾಖೆಯ ಆಡಳಿತ ಕೆಳಮಟ್ಟಕ್ಕೆ ಕುಸಿಯುತ್ತಿದೆ. ಇಸ್ಪೀಟ್ ಅಡ್ಡೆ ಅಪರಾಧದ ಮನೆಯಾಗಿದೆ. ಜನರ ರಕ್ಷಣೆ ಮಾಡುವುದು ಇಲಾಖೆಯ ಕರ್ತವ್ಯ ಎಂಬುದನ್ನು ಮರೆಯಬಾರದು ಎಂದರು.

ಜಿಲ್ಲಾ ರಕ್ಷಣಾಧಿಕಾರಿಗಳ ಹೆಸರು ಬಸ್‌ಸ್ಟ್ಯಾಂಡ್‌ನಿಂದ ಮರಳು ಗುಡ್ಡೆಯವರೆಗೂ ಕೇಳಿ ಬರತೊಡಗಿದೆ. ಹೀಗಾಗಬಾರದು, ಅಪರಾಧ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಗಾಂಜಾ, ಮಟ್ಕಾ ದಂಧೆ ನಿಯಂತ್ರಣಕ್ಕೆ ತರಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ವಿಧಾನಪರಿಷತ್‌ ಸದಸ್ಯ ಎಸ್‌. ರುದ್ರೇಗೌಡ, ಪ್ರಮುಖರಾದ ಡಿ.ಎಸ್‌. ಅರುಣ್‌, ಬಿಳಕಿ ಕೃಷ್ಣಮೂರ್ತಿ, ಮಧುಸೂದನ್‌, ಅನಿತ ರವಿಶಂಕರ್‌, ರತ್ನಾಕರ ಶೆಣೈ ಮತ್ತಿತರರು ಇದ್ದರು.

ಜಿಲ್ಲೆಯಲ್ಲಿ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಪೊಲೀಸರು ಲಂಚ ಪಡೆದ ಬಗ್ಗೆ ವರದಿಯಾಗಿದೆ. ಪೊಲೀಸ್‌ ಇಲಾಖೆಯೇ ಅಕ್ರಮ ಚಟುವಟಿಕೆಗಳ ತಾಣ ಆಗುತ್ತಿರುವ ಚಿನ್ಹೆ ಇದು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೆಸರು ಅನೇಕ ಕಡೆ ಕೇಳಿ ಬರುತ್ತಿದೆ. ಕೆಳ ಹಂತದ ಅಧಿಕಾರಿಗಳು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ, ಅಧಿಕಾರಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಸಾರ್ವಜನಿಕ ವಲಯದಲ್ಲಿ ಪೊಲೀಸ್‌ ಇಲಾಖೆ ಬಗ್ಗೆ ನಂಬಿಕೆ ಹೊರಟುಹೋಗಿದೆ.
•ಆಯನೂರು ಮಂಜುನಾಥ್‌, ವಿ.ಪ. ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next