ಕುಂದಾಪುರ: ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅದು ದೇಶದ ಭದ್ರ ಭವಿಷ್ಯ ರೂಪಿಸಲು ನಾವು ನೀಡುವ ದೇಣಿಗೆ. ಆದ್ದರಿಂದ ಕುಂದಾಪುರ ಜೂನಿಯರ್ ಕಾಲೇಜಿಗೆ ನೀಡಿದ ಕೊಡುಗೆ ಎಲ್ಲರಿಗೂ ಮಾದರಿಯಾಗಲಿ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.
ಅವರು ಶನಿವಾರ ಇಲ್ಲಿನ ಜೂನಿಯರ್ ಕಾಲೇಜಿನಲ್ಲಿ ಶಾಲಾ ಹಳೆವಿದ್ಯಾರ್ಥಿನಿ ಮುಕ್ತಾ ಪೈ ಭಂಡಾರ್ಕರ್ ಹೆಸರಿನಲ್ಲಿ 40 ಲ. ರೂ. ವೆಚ್ಚದಲ್ಲಿ ಸತೀಶ್ ಪೈ ಅವರು ನೀಡಿದ ಮುಕ್ತಾ ಪೈ ಭಂಡಾರ್ಕರ್ ಬ್ಲಾಕ್ ಕಟ್ಟಡದ ಉದ್ಘಾಟನೆ ಸಂದರ್ಭ ಮಾತನಾಡಿದರು.
ಕಟ್ಟಡವನ್ನು ತಮ್ಮ ತಾಯಿಯ ಹೆಸರಿನಲ್ಲಿ ನೀಡಿದ ಹಿಂಡಾಲ್ಕೋ ಕಂಪೆನಿಯ ಮುಂಬಯಿಯ ವ್ಯವಸ್ಥಾಪನ ನಿರ್ದೇಶಕ ಸತೀಶ್ ಪೈ ಅವರು, ಉತ್ತಮ ಶಿಕ್ಷಣ ದೊರೆತರೆ ನಮ್ಮ ಭವಿಷ್ಯಕ್ಕೆ ಗಟ್ಟಿ ಪಂಚಾಂಗ ಹಾಕಿದಂತೆ. ಆಧುನಿಕ ಭಾರತದಲ್ಲಿ ಮಹಿಳೆಯರು ಕೂಡ ಶಿಕ್ಷಣವೇತ್ತರಾಗಿ ದೇಶವನ್ನು ಮುನ್ನಡೆಸಿ. ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬೇಕು. ನನ್ನ ತಾಯಿ ಮೂರು ವರ್ಷ ವ್ಯಾಸಂಗ ಮಾಡಿದ ಈ ಶಾಲೆಗೆ ಕಟ್ಟಡವನ್ನು ನೀಡಲು ಹೆಮ್ಮೆಯಾಗುತ್ತದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸೊಲೊಮನ್ ಸೋನ್ಸ್, ಸತೀಶ್ ಪೈ ಅವರ ಸೋದರ ಮಾವ ಕೆ. ಮೋಹನ ಭಂಡಾರ್ಕರ್, ಚಿಕ್ಕಮ್ಮ ರತ್ನಾ ಕಾಮತ್, ಪುರಸಭೆ ಸದಸ್ಯ ಮೋಹನದಾಸ ಶೆಣೈ, ವೇನ್ವಿನ್ ಸತೀಶ್ ಪೈ ಉಪಸ್ಥಿತರಿದ್ದರು.
ಕಟ್ಟಡದ ದಾನಿ ಸತೀಶ್ ಪೈ ದಂಪತಿ ಯನ್ನು ಶಾಸಕರು ಹಾಗೂ ಇತರರು ಸಮ್ಮಾನಿಸಿದರು. ಕಟ್ಟಡ ನಿರ್ಮಾಣದಲ್ಲಿ ಮುನ್ನೇತೃವಾಗಿದ್ದ ಗಣೇಶ್ ಪ್ರಭು ಕುಂಭಾಶಿ, ಎಂಜಿನಿಯರ್ ಗಣೇಶ್ ಪೈ ಅವರನ್ನು ಗೌರವಿಸಲಾಯಿತು.
ಪ್ರಾಂಶುಪಾಲ, ವಿದ್ಯಾಂಗ ಇಲಾಖೆ ಉಪನಿರ್ದೇಶಕ ಸುಬ್ರಹ್ಮಣ್ಯ ಜೋಷಿ ಸ್ವಾಗತಿಸಿ, ಉಪನ್ಯಾಸಕ ಉದಯ ಕುಮಾರ್ ಶೆಟ್ಟಿ ಕಾಳಾವರ ನಿರ್ವಹಿಸಿದರು. ಉಪಪ್ರಾಂಶುಪಾಲ ಮಾಧವ ಅಡಿಗ ವಂದಿಸಿದರು.