Advertisement

ಕೋವಿಡ್‌ ಆಸ್ಪತ್ರೆಗೆ ಜೀವ ರಕ್ಷಕ ಔಷಧಗಳ ಕೊಡುಗೆ

04:34 PM May 15, 2021 | Team Udayavani |

ಕಡೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕೋವಿಡ್‌ ರೋಗಿಗಳಿಗೆ ಅಮೂಲ್ಯ ಜೀವ ರಕ್ಷಕ ಔಷಧಗಳನ್ನು ನೀಡುವ ಮೂಲಕ ಶಾಸಕ ಬೆಳ್ಳಿಪ್ರಕಾಶ್‌ ಬಸವ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದರು.

Advertisement

ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಎಸ್‌.ವಿ. ದೀಪಕ್‌ ಮತ್ತು ತಾಲೂಕು ವೈದ್ಯಾಧಿಕಾರಿ ರವಿಕುಮಾರ್‌ ಅವರಿಗೆ ಶುಕ್ರವಾರ ಔಷಧ ಮತ್ತು ಮಾಸ್ಕ್ ಮತ್ತು ವೈದ್ಯರು ಬಳಸುವ ಕೈ ಕವಚ ಸೇರಿದಂತೆ ವಿವಿಧ ಔಷಧ ಸಾಮಗ್ರಿಯ ದಾಸ್ತಾನನ್ನು ಹತ್ತಾಂತರಿಸಿದರು.

ನಂತರ ಶಾಸಕ ಬೆಳ್ಳಿಪ್ರಕಾಶ್‌ ಮಾತನಾಡಿ, ಕೋವಿಡ್‌ ಸೋಂಕಿತರಿಗೆ ಅತ್ಯಮೂಲ್ಯವಾಗಿ ಅಗತ್ಯವಿರುವ ಔಷಧಗಳು ಇದಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿಯೂ ಈ ಔಷಧಗಳು ದುರ್ಲಬವಾಗಿದೆ. ಬಸವಣ್ಣ ಅವರ “ದಯೆಯೇ ಧರ್ಮದ ಮೂಲವಯ್ಯ’ ಎನ್ನುವಂತೆ ತನಗೆ ಶಾಸಕನನ್ನಾಗಿ ಮಾಡಿದ ಕ್ಷೇತ್ರದ ಜನತೆಯ ಆರೋಗ್ಯದ ದೃಷ್ಟಿಯಿಂದ ತಾವು ವೈಯಕ್ತಿಕ ಮತ್ತು ಬಿಜೆಪಿ ವತಿಯಿಂದ ಈ ದೊಡ್ಡ ಪ್ರಮಾಣದ ಔಷಧಗಳನ್ನು ನೀಡಿದ್ದೇನೆ ಎಂದರು.

ಕೋವಿಡ್‌ ಎರಡನೇ ಅಲೆಯ ಇಂತಹ ಸಂಕಷ್ಟ ಸಮಯದಲ್ಲಿ ಈ ರೀತಿಯ ದಾನ- ಧರ್ಮಕ್ಕೆ ಉಳ್ಳವರು ಕೈ ಜೋಡಿಸಬೇಕು. ಅಗತ್ಯ ಪರಿಕರ ಮತ್ತು ಔಷಧಗಳನ್ನು ಆಸ್ಪತ್ರೆಗಳಿಗೆ ದಾನವಾಗಿ ನೀಡುವ ಮೂಲಕ ಬಸವಣ್ಣ ಅವರ ತತ್ವ- ಆದರ್ಶಗಳನ್ನು ನೈಜ ರೀತಿಯಲ್ಲಿ ಪಾಲಿಸಿದಂತೆ ಆಗುತ್ತದೆ ಎಂದು ಶಾಸಕರು ಹೇಳಿದರು. ಆಸ್ಪತ್ರೆಗೆ ನೀಡಿರುವ ಔಷಧಗಳೆಲ್ಲವೂ ಆಡಳಿತ ವೈದ್ಯಾಧಿಕಾರಿ ಎಸ್‌.ವಿ. ದೀಪಕ್‌ ವಾಡಿಲಾಲ್‌ ಅವರ ಸಲಹೆ ಮೇರೆಗೆ ತುರ್ತು ಅಗತ್ಯವಿರುವುದರಿಂದ ತರಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಇನ್ನೂ ಹೆಚ್ಚಿನ ಔಷಧಗಳನ್ನು ನೀಡಲು ತಾವು ಮತ್ತು ಪಕ್ಷ ಸಿದ್ಧವಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಚ್‌.ಸಿ. ಕಲ್ಮರುಡಪ್ಪ ಮಾತನಾಡಿ, ಶಾಸಕ ಬೆಳ್ಳಿಪ್ರಕಾಶ್‌ ಅವರು ಓರ್ವ ಮಾತೃ ಹೃದಯ ಇರುವ ಶಾಸಕ. ಅವರನ್ನು ಶಾಸಕನನ್ನಾಗಿ ಪಡೆದ ಕಡೂರು ಕ್ಷೇತ್ರದ ಜನರೇ ಅದೃಷ್ಟವಂತರು ಎಂದರು. ಬಿಜೆಪಿ ಕೋವಿಡ್‌ ನಿರ್ವಹಣೆ ಕುರಿತಂತೆ ಜಿಲ್ಲಾದ್ಯಂತ 11 ವಿಭಾಗಗಳನ್ನು ರಚಿಸಿಕೊಂಡಿದ್ದು, ಪಕ್ಷದ ನೂರಾರು ಕಾರ್ಯಕರ್ತರು ಇದರಡಿ ಕೆಲಸ ಮಾಡುತ್ತಿದ್ದಾರೆ ಎಂದರು.

Advertisement

ತಾಲೂಕು ಬಿಜೆಪಿ ಅಧ್ಯಕ್ಷ ದೇವಾನಂದ್‌, ಬೀರೂರು ಪುರಸಭೆ ಅಧ್ಯಕ್ಷ ಎಂ.ಪಿ. ಸುದರ್ಶನ್‌, ಕೆ.ಆರ್‌. ಮಹೇಶ್‌ ಒಡೆಯರ್‌, ವಕ್ತಾರ ಶಾಮಿಯಾನ ಚಂದ್ರು, ಮುಖಂಡರಾದ ವಕೀಲ ಬೊಮ್ಮಣ್ಣ, ಮುರಳಿ ಕೊಠಾರಿ, ಅಡಕೆ ಚಂದ್ರು, ರಾಜೇಂದ್ರ ಡಾಗಾ, ಆರೋಗ್ಯ ರಕ್ಷ ಸಮಿತಿ ಸದಸ್ಯರಾದ ಡಾ| ದಿನೇಶ್‌, ಸಿ.ಕೆ. ಮೂರ್ತಿ, ಡಾ| ರವಿಕುಮಾರ್‌, ವೃತ್ತ ನಿರೀಕ್ಷಕ ಮಂಜುನಾಥ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next