ಕುಂದಾಪುರ: ಸಾರ್ವಜನಿಕ ಆಸ್ಪತ್ರೆಯಿಲ್ಲದೆ ತುರ್ತು ಚಿಕಿತ್ಸೆಗಾಗಿ ಹತ್ತಾರು ಕಿ.ಮೀ. ದೂರ ಸಂಚರಿಸಬೇಕಾದ ಅನಿವಾರ್ಯ ಇರುವ ಅಮಾಸೆಬೈಲಿಗೆ ಕಾರ್ಡಿಯಾಕ್ ಎಟ್ ಡೋರ್‌ಸ್ಟೆಪ್‌ನ (ಸಿಎಡಿ) ಗುರುವಾರ ಬೆಳಕು ತಲುಪಿದೆ.
ಇಲ್ಲಿನ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಡಾ| ಗುರುದತ್ ಕೊಡ್ಗಿ ಅವರ ಕೀರ್ತಿ ಕ್ಲಿನಿಕ್ ಹಾಗೂ ಸರಕಾರಿ ಆಯುರ್ವೇದ ಚಿಕಿತ್ಸಾಲಯ ಆಯುಷ್ ಆರೋಗ್ಯ ಕ್ಷೇಮ ಕೇಂದ್ರಕ್ಕೆ ಕೆಎಂಸಿ ಮಂಗಳೂರಿನ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ| ಪದ್ಮನಾಭ್ ಕಾಮತ್ ಅವರು ಗುರುವಾರ ತಮ್ಮ ಸಿಎಡಿ ಟ್ರಸ್ಟ್ ಮೂಲಕ ಇಸಿಜಿ ಯಂತ್ರಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಯಂತ್ರಗಳನ್ನು ಡಾ| ಗುರುದತ್ ಕೊಡ್ಗಿ ಹಾಗೂ ಆಯುಷ್ ಆರೋಗ್ಯ ಕ್ಷೇಮ ಕೇಂದ್ರದ ಡಾ| ಹೇಮಲತಾ ಅವರು ಪಡೆದುಕೊಂಡಿದ್ದು, ಶೀಘ್ರವಾಗಿ ಸ್ಪಂದಿಸಿರುವ ಡಾ|ಪದ್ಮನಾಭ್ ಕಾಮತ್ ಮತ್ತು ಅವರ ಟ್ರಸ್ಟ್‌ಗೆ ಅಭಿನಂದನೆ ತಿಳಿಸಿದ್ದಾರೆ.
ಅಮಾಸೆಬೈಲಿನ ಕೆಳಸುಂಕ, ಕೆಲಾ, ಶ್ಯಾಮೆಹಕ್ಲು, ತೊಂಬಟ್ಟು, ನಡಂಬೂರು ಮತ್ತಿತರ ಭಾಗದ ಜನ ತುರ್ತು ಚಿಕಿತ್ಸೆಗಾಗಿ 20-25 ಕಿ.ಮೀ. ದೂರ ಸಂಚರಿಸಬೇಕಾಗಿದ್ದು, ಅಮಾಸೆಬೈಲಿನಲ್ಲಿ ಆಸ್ಪತ್ರೆಯಿಲ್ಲದೆ ಜನ ಅನುಭವಿಸುತ್ತಿರುವ ಸಂಕಷ್ಟದ ಕುರಿತಂತೆ “ಉದಯವಾಣಿ’ಯಲ್ಲಿ ಎ. 20ರಂದು ಪ್ರಕಟಗೊಂಡ “ಆಸ್ಪತ್ರೆಗೆ ಹೋಗಬೇಕಾದರೆ 25 ಕಿ.ಮೀ. ಸಂಚರಿಸಬೇಕು’ ಎಂಬ ವಿಶೇಷ ವರದಿಗೆ ತತ್‌ಕ್ಷಣ ಸ್ಪಂದಿಸಿದ್ದ ಡಾ| ಪದ್ಮನಾಭ ಕಾಮತ್ “ಕಾರ್ಡಿಯೋಲಜಿ ಆಟ್ ಡೋರ್ ಸ್ಟೆಪ್ ಫೌಂಡೇಶನ್’ ಮೂಲಕವಾಗಿ ಇಸಿಜಿ ಯಂತ್ರ ನೀಡುವುದಾಗಿ ತಿಳಿಸಿದ್ದರು.
ಅದನ್ನು ಸದ್ಯ ಅಮಾಸೆಬೈಲಿನಲ್ಲಿರುವ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿಟ್ಟು, ಒಬ್ಬರಿಗೆ ತರಬೇತಿ ನೀಡಿ, ಅದರ ಬಗ್ಗೆ ತಿಳಿಸಿಕೊಟ್ಟು, ಜನರಿಗೆ ನೆರವಾಗುವಂತೆ ಮಾಡಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ ತಿಳಿಸಿದ್ದಾರೆ.