ದಾವಣಗೆರೆ: ಜಾಗತಿಕ ಔದ್ಯಮಿಕ ಕ್ಷೇತ್ರದಲ್ಲಿ ಭಾರತ ಮುಂಚೂಣಿಗೆ ತರಲು ವೈಯುಕ್ತಿಕ, ಸಾಮೂಹಿಕ ಜವಾಬ್ದಾರಿ ಇದೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಗ್ರಾಸಿಂ ಕೈಗಾರಿಕೆಯ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಜಗದೀಶ್ ಬಾಪಟ್ ಹೇಳಿದ್ದಾರೆ.
ಶನಿವಾರ ಬಾಪೂಜಿ ಬಿ ಸ್ಕೂಲ್‌ನ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಟ್ರಾನ್ಸಿಟ್ ಇಂಡಿಯಾದ 6ನೇ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ, ಮಾತನಾಡಿದ ಅವರು, ದೌರ್ಬಲ್ಯವನ್ನು ಸಾಮರ್ಥ್ಯವನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಶಿಕ್ಷಣದಿಂದ ಆಗಬೇಕು.
ವಿದ್ಯಾರ್ಥಿಗಳು ಇನ್ನೊಬ್ಬರ ಜತೆ ಪೈಪೋಟಿ ಮಾಡುವ ಮೊದಲು ತಮ್ಮ ಮೇಲೆ ತಾವೇ ಪೈಪೋಟಿ ನಡೆಸಿ ಮೇಲೆ ಬರಬೇಕು. ತಮ್ಮ ಸಾಮರ್ಥ್ಯವನ್ನು ಸರಿಯಾಗಿ ಗ್ರಹಿಸಿಕೊಳ್ಳಬೇಕು ಎಂದರು. ಇಂಗ್ಲೆಂಡ್ ಜನ ಬಟ್ಟೆ ತೊಡುವುದನ್ನು ಅರಿಯುವ ಮೊದಲೇ ಭಾರತ ದೇಶ ಜಗತ್ತಿಗೆ ರೇಷ್ಮೆ ರಫ್ತು ಮಾಡುತ್ತಿತ್ತು.
ನಮ್ಮ ಪೂರ್ವಿಕರ ಸಾಮರ್ಥ್ಯ ತಿಳಿದರೆ ನಮ್ಮ ದೇಶದ ಸಾಮರ್ಥ್ಯ ಸಹ ಅರ್ಥ ಆಗುತ್ತದೆ. ಜ್ಞಾನ ನಮ್ಮ ದೇಶದಲ್ಲಿ ಉಚಿತವಾಗಿದೆ. ಆದರೆ, ಯಾರೂ ಪಡೆಯಲಿಲ್ಲ. ಇದೇ ವಿಪರ್ಯಾಸ ಎಂದು ಅವರು ಹೇಳಿದರು.
ಹಿರಿಯ ಪತ್ರಿಕಾ ವ್ಯಂಗ್ಯ ಚಿತ್ರಕಾರ ಎಚ್.ಬಿ.ಮಂಜುನಾಥ ಮಾತನಾಡಿ, ನೈಸರ್ಗಿಕ ಸಂಪನ್ಮೂಲಗಳ ಮಿತ ಬಳಕೆ, ಆರ್ಥಿಕ ಸಂಪನ್ಮೂಲಗಳ ಸದ್ಬಳಕೆ, ಮಾನವ ಸಂಪನ್ಮೂಲದ ಗರಿಷ್ಠ ಬಳಕೆ ಮಾಡಿಕೊಂಡಲ್ಲಿ ಮಾತ್ರ ದೇಶವನ್ನು ಪ್ರಗತಿ ಪಥಕ್ಕೆ ತರಬಹುದು.
ಆದರೆ, ಇದಕ್ಕೆಲ್ಲಾ ಸರ್ಕಾರದ ನಿರ್ಬಂಧ, ನಿರೂಪಣೆ ಬರಲೆಂದು ಕಾಯುವ ಬದಲು ಜನತೆಯೇ ಸ್ವಯಂ ನಿಯಂತ್ರಣ, ನಿರ್ದೇಶನ ರೂಢಿಸಿಕೊಳ್ಳಬೇಕು ಎಂದರು. ಇನ್ಫೋಸಿಸ್ ಸೀನಿಯರ್ ವ್ಯವಸ್ಥಾಪಕ ಬೆಂಗಳೂರಿನ ಬಿ.ವಿ.ಹರೀಶ್, ಶಿವಮೊಗ್ಗದ ಅರವಿಂದ್ ಮಲ್ಲಿಕ್, ಕಾಲೇಜಿನ ನಿರ್ದೇಶಕ ಡಾ| ಆರ್.ಎಲ್. ನಂದೀಶ್ವರ್, ಸಿಂದು, ಡಾ| ಎಸ್.ಎಚ್. ಸುಜಿತ್‌ಕುಮಾರ್. ಕಾಲೇಜಿನ ಪ್ರಾಂಶುಪಾಲ ಡಾ| ತ್ರಿಭುವನಾನಂದಸ್ವಾಮಿ ವೇದಿಕೆಯಲ್ಲಿದ್ದರು.