Advertisement

ಕೊರೊನಾ ಸೋಂಕು ತಡೆಗೆ ಸಹಕರಿಸಿ: ಡಿಸಿ

02:09 PM Mar 14, 2020 | Suhan S |

ಬೆಳಗಾವಿ: ಕೊರೊನಾ ಸೋಂಕನ್ನು ಸಾಮಾಜಿಕ ಸಮಸ್ಯೆ ಎಂದು ಭಾವಿಸಿ ಸೋಂಕು ನಿಯಂತ್ರಣ ಮಾಡಬೇಕು. ಈ ದಿಸೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಮನವಿ ಮಾಡಿದರು.

Advertisement

ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಕೊರೊನಾ ವೈರಸ್‌ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್‌ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದು, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಸೋಂಕು ಹರಡದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕೊರೊನಾ ವೈರಸ್‌ ಬಗ್ಗೆ ಜನರಲ್ಲಿರುವ ತಪ್ಪು ಮಾಹಿತಿಗಳನ್ನು ಮೊದಲು ಹೊಗಲಾಡಿಸುವುದು ನಮ್ಮ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸರ್ಕಾರಿ ಕಾರ್ಯ ಕ್ರಮ ಅಥವಾ ಕೆಲಸವೆಂದು ಭಾವಿಸದೇ ಇದನ್ನು ಸಾಮಾಜಿಕ ಸಮಸ್ಯೆ ಎಂದು ತಿಳಿದು ಕರ್ತವ್ಯ ನಿರ್ವಹಿಸಬೇಕು ಎಂದರು.

ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅದಕ್ಕಾಗಿ ನಾವು ಜವಾಬ್ದಾರಿ ಸ್ಥಾನದಲಿದ್ದು, ಅನಾಹುತಗಳು ಆಗುವುದಕ್ಕೆ ಅವಕಾಶ ನೀಡಬಾರದು. ಹೋಟೆಲ್‌ ಗಳಲ್ಲಿ ವಿದೇಶದಿಂದ ಪ್ರವಾಸಿಗರು ಬಂದು ವಾಸ ಮಾಡಿದರೆ ಹೋಟೆಲ್‌ ಮಾಲೀಕರು ಅವರ ಮಾಹಿತಿ ನೀಡಬೇಕು. ವಿದೇಶದಿಂದ ಭಾರತಿಯರು ಬಂದರೆ ಟ್ರಾವೆಲರ್ಸ್‌ಗಳು ಮಾಹಿತಿ ಕಲೆಹಾಕಿ ಸರ್ಕಾರಕ್ಕೆ ಒದಗಿಸಬೇಕು ಎಂದು ಸೂಚನೆ ನೀಡಿದರು.

ಸರ್ಕಾರ ನೀಡಿರುವ ನಿರ್ದೇಶನದಂತೆ ಜಿಲ್ಲಾಸ್ಪತ್ರೆಯಲ್ಲಿ ಐಸೂಲೇಷನ್‌ ವಾರ್ಡ್‌ ನಿರ್ಮಾಣ ಮಾಡಲಾಗಿದೆ. ಕೊರೊನಾ ವೈರಸ್‌ ತಡೆಯಲು ಸಾಧ್ಯವಾದಷ್ಟು ಸಾರ್ವಜನಿಕ ಸಮಾರಂಭಗಳನ್ನು ಕಡಿಮೆ ಮಾಡಬೇಕು. ಸೋಂಕಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಾಕಿದರೆ ಕ್ರಿಮಿನಲ್‌ ಕೇಸ್‌ ಹಾಕಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

Advertisement

ಕೊರೊನಾ ಸೋಂಕನ್ನು ಹತೋಟೆಗೆ ತರಲು ಖಾಸಗಿ ವೈದ್ಯರ ಪಾತ್ರವು ಬಹಳ ಮುಖ್ಯವಾಗಿದೆ. ಯಾವುದೇ ವ್ಯಕ್ತಿಗೆ ಆರೋಗ್ಯದ ತೊಂದರೆಯಾದರೆ ಸಾಮಾನ್ಯವಾಗಿ ಜನರು ಖಾಸಗಿ ವೈದ್ಯರ ಹತ್ತಿರ ಹೋಗಿ ಆರೋಗ್ಯ ತಪಾಸಣೆ ಮಾಡಿಸುತ್ತಾರೆ. ಆದ್ದರಿಂದ ಕೊರೊನಾ ವೈರಸ್‌ ಲಕ್ಷಣಗಳು ಇರುವ ರೋಗಿಗಗಳು ಖಾಸಗಿ ಆಸ್ಪತ್ರೆಗಳಲ್ಲಿ ಬಂದರೆ ಅಂತಹ ವ್ಯಕ್ತಿಯ ಸಂಪೂರ್ಣ ಮಾಹಿತಿ ಪಡೆಯಬೇಕು ಎಂದು ಹೇಳಿದರು.

ಮಾಸ್ಕ್ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಕ್ರಿಮಿನಲ್‌ ಕೇಸ್‌ ದಾಖಲಿಸಲಾಗುವುದು. ಕೊರೊನಾ ಸೋಂಕು ಯಾರಿಗಾದರೂ ಇದ್ದರೆ ಅಂಥವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಅವರ ಮಾಹಿತಿಗಳನ್ನು ಗೌಪ್ಯವಾಗಿ ಇಡಲಾಗುತ್ತದೆ ಮತ್ತು ಸೋಂಕಿತರ ಮೇಲೆ ನಿಗಾ ವಹಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಜಿಪಂ ಸಿಇಒ ಡಾ| ರಾಜೇಂದ್ರ ಕೆ.ವಿ ಮಾತನಾಡಿ, ಕೊರೊನಾ ಸೋಂಕು ಹರಡದಂತೆ ತಡೆಯಲು ತಾಲೂಕು ಆಸ್ಪತ್ರೆಯವರು ಲೈಸನ್ಸ್‌ ಹೊಂದಿರುವ ಕ್ಲಿನಿಕ್‌ಗಳ ಸಭೆಯನ್ನು ಮಾಡಿ ಅವರ ಕ್ಲಿನಿಕ್‌ಗಳಿಗೆ ಬರುವ ರೋಗಿಗಳ ಸಂಪೂರ್ಣ ಮಾಹಿತಿ ಕಲೆ ಹಾಕುವುದು ಪ್ರತಿಯೊಬ್ಬ ವೈದ್ಯರ ಕೆಲಸವಾಗಿದೆ ಎಂದು ಹೇಳಿದರು.

ಕೊರೊನಾ ವೈರಸ್‌ ಸಂಬಂಧಿಸಿದಂತೆ ಮಾಹಿತಿ ನೀಡಿದ ಡಾ| ಸಿದ್ದಲಿಂಗಯ್ಯ ಅವರು ಕೊರೊನಾ ವೈರಸ್‌ ತಪಾಸಣೆ ನಡೆಸಲು ರಾಜ್ಯದಲ್ಲಿ ಮೈಸೂರು, ಹಾಸನ, ಬೆಂಗಳೂರಿನ ಲ್ಯಾಬ್‌ ವ್ಯವಸ್ಥೆ ಇದ್ದು, ಮುಂದಿನ ದಿನಗಳಲ್ಲಿ ಬೆಳಗಾವಿಯಲ್ಲಿ ಸಹ ಲ್ಯಾಬ್‌ ತೆರೆಯುವ ಚಿಂತನೆ ನಡೆದಿದೆ ಎಂದು ಹೇಳಿದರು.

ಸಭೆಯಲ್ಲಿ ಪೊಲೀಸ್‌ ಆಯುಕ್ತ ಲೋಕೇಶ ಕುಮಾರ್‌, ಮಹಾನಗರ ಪಾಲಿಕೆ ಆಯುಕ್ತ ಜಗದೀಶ್‌ ಕೆ.ಎಚ್‌, ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಮುನ್ಯಾಳ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next