Advertisement

ಕಾಣಿಕೆ ಹಣದಲ್ಲಿ ದೇಗುಲ ಅಭಿವೃದ್ಧಿ

02:51 PM Mar 11, 2017 | |

ಕಲಬುರಗಿ: ಭಕ್ತರು ನೀಡುವ ಕಾಣಿಕೆ ಹಣದಲ್ಲಿ ಭಕ್ತರಿಗಾಗಿ ರಾಜ್ಯದ ಶಕ್ತಿ ಕೇಂದ್ರಗಳಲ್ಲಿನ ದೇಗುಲಗಳಲ್ಲಿ ಸಕಲ ಸೌಕರ್ಯಗಳನ್ನು ನಿರ್ಮಾಣ ಮಾಡಿ ಅಭಿವೃದ್ಧಿ ಮಾಡಿ ಅನುಕೂಲ ಮಾಡಿ ಕೊಡಲಾಗುವುದು ಎಂದು ರಾಜ್ಯ ಮುಜರಾಯಿ ಖಾತೆ ಸಚಿವ ರುದ್ರಪ್ಪ ಲಮಾಣಿ ಹೇಳಿದರು. 

Advertisement

ಶುಕ್ರವಾರ ಚಿತ್ತಾಪುರ ತಾಲೂಕಿನ ರೇವಗ್ಗಿ ಗುಡ್ಡದಲ್ಲಿ ಧಾರ್ಮಿಕ ದತ್ತಿ ಇಲಾಖೆ, ರೇವಗ್ಗಿಯ ರೇವಣಸಿದ್ದೇಶ್ವರ ದೇವಸ್ಥಾನ ಆಡಳಿತ ಮಂಡಳಿಹಮ್ಮಿಕೊಂಡಿದ್ದ ಉತ್ಸವ, ರಥೋತ್ಸವ, 54 ಅಡಿ  ಎತ್ತರ ಜಗದ್ಗುರು ರೇಣುಚಾರ್ಯರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. 

ದೇವಸ್ಥಾನಗಳು ಧಾರ್ಮಿಕ ಕೇಂದ್ರಗಳಾಗಿದ್ದರಿಂದ ಹೆಚ್ಚಿನ ಜನ ಬರುತ್ತಾರೆ. ಅವರಿಗೆ ಅಲ್ಲಿ ಸೌಕರ್ಯಗಳ ಜೊತೆಯಲ್ಲಿ ದೇವರ ದರ್ಶನಕ್ಕೆ ಎಲ್ಲ ವ್ಯವಸ್ಥೆಗಳನ್ನು ಮಾಡುವುದು ಸರಕಾರದ ಕರ್ತವ್ಯವಾಗಿದೆ. ಆದ್ದರಿಂದ ಅಫಜಲಪುರದಘತ್ತರಗಿ ಭಾಗಮ್ಮ, ರೇವಗ್ಗಿಯ ರೇವಣಸಿದ್ದೇಶ್ವರ ದೇವಸ್ಥಾನ ಅಭಿವೃದ್ಧಿ ಮಾಡಲಾಗಿದೆ. 

ಅಲ್ಲದೆ, ಉತ್ತಮ ಪ್ರವಾಸಿ ಕೇಂದ್ರಗಳನ್ನಾಗಿ ಪರಿವರ್ತನೆ ಮಾಡಲಾಗುತ್ತಿದೆ. ಇನ್ನು ಮುಂದೆ ಅಫಜಲಪುರದ ದೇವಲಗಾಣಗಾಪುರ ದೇವಸ್ಥಾನವನ್ನು ಅಭಿವೃದ್ಧಿ ಮಾಡಿ ಅಲ್ಲಿಗೆಬರುವ ಭಕ್ತರಿಗೆ ಎಲ್ಲ ರೀತಿಯಿಂದ ಅನುಕೂಲ ಮಾಡಿಕೊಡಲಾಗುವುದು ಎಂದರು. ದೇವಸ್ಥಾನಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಗೆ ಈಗ ಕೇವಲ 2 ಸಾವಿರ ರೂ. ಸಂಬಳ ನೀಡಲಾಗುತ್ತಿತ್ತು.

ಈ ಹಿಂದೆ ರೇವಗ್ಗಿಗೆ ನನ್ನಪತ್ನಿ ಬಂದಾಗ ಸಿಬ್ಬಂದಿಗಳು ಅವರ ಬಳಿ ತಮ್ಮ ಗೋಳು ಹೇಳಿಕೊಂಡಿದ್ದರು. ಅದು ನಮಗೂ ತಲುಪಿದ್ದು, ದೇವಸ್ಥಾನದಲ್ಲಿನ ಎ ಮತ್ತು ಬಿ ವರ್ಗದ ಸಿಬ್ಬಂದಿಗಳಿಗೆ 6ಸಾವಿರ ರೂ. ಸಂಬಳ ಹೆಚ್ಚು ಮಾಡಲಾಗಿದೆ. ಅದು ಏಪ್ರಿಲ್‌ನಿಂದ ಜಾರಿಗೆ ಬರಲಿದೆ ಎಂದರು. 

Advertisement

ಕೇವಲ ಆರು ತಿಂಗಳಲ್ಲಿ ದೇವಸ್ಥಾನವನ್ನು ಪ್ರವಾಸಿಕೇಂದ್ರವನ್ನಾಗಿ ರೂಪಿಸುವಲ್ಲಿ ಹಗಲಿರುಳು ಶ್ರಮಿಸಿದ ಸೇಡಂ ಸಹಾಯಕ ಆಯುಕ್ತ ಭೀಮಾಶಂಕರ ತೆಗ್ಗಳ್ಳಿ ಅವರ ಕಾರ್ಯವನ್ನು ಗುಣಗಾನ ಮಾಡಿದ ಸಚಿವರು, ಅವರಿಲ್ಲದೆ ಹೋಗಿದ್ದರೆ ಇವತ್ತು ಇಷ್ಟು ದೊಡ್ಡ ಮಟ್ಟದಲ್ಲಿ ಅಂದರೆ 2.80 ಕೋಟಿ ರೂ. ವೆಚ್ಚದಲ್ಲಿ ರೇವಗ್ಗಿ ದೇವಸ್ಥಾನವನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಅಲ್ಲದೆ, ಚಿಂಚೋಳಿ ಶಾಸಕ ಉಮೇಶ ಜಾಧವ್‌ ಅವರು ತಮ್ಮ ತಂದೆ ರಾಮಚಂದ್ರ ಜಾಧವ್‌ ಹೆಸರಿನಲ್ಲಿ 20 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ಮಾಡಿಸಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ಭಾರತದಲ್ಲಿ ಮಠ ಮಾನ್ಯಗಳಿಂದ ಜನರಲ್ಲಿ ಪರಿವರ್ತನೆ ತರಲು ಸಾಧ್ಯವಿದೆ. ಅದನ್ನು ಮನಗಂಡು ಇವತ್ತು ಸರಕಾರ ಕೋಟ್ಯಂತರ ರೂ.ಗಳನ್ನು ಮಠಗಳಿಗೆ ಖರ್ಚು ಮಾಡುತ್ತಿದೆ. ಇದರಿಂದ ಜನರಿಗೆ ಧಾರ್ಮಿಕವಾಗಿ ಅನುಕೂಲವಾಗಲಿದೆ ಎಂದರು.  

Advertisement

Udayavani is now on Telegram. Click here to join our channel and stay updated with the latest news.

Next