ಹೊನ್ನಾವರ: ಸಂಖ್ಯೆಯ ಲೆಕ್ಕದಲ್ಲಿ ಕೇವಲ ನಾಲ್ಕೈದು ಲಕ್ಷ ಇದ್ದರೂ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗೌಡ ಸಾರಸ್ವತ ಸಮಾಜದವರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ. ಆಚಾರ್ಯ ಹೇಳಿದರು.
ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಉಡುಪಿ, ಉತ್ತರ ಕನ್ನಡ ಜಿಲ್ಲಾ ಯುವವಾಹಿನಿ ಮತ್ತು ಹಳದೀಪುರ ಜಿಎಸ್‌ಬಿ ಸಮಾಜ ಸಂಯುಕ್ತವಾಗಿ ಏರ್ಪಡಿಸಿದ್ದ 2017ನೇ ಸಾಲಿನ ಜಿಎಸ್‌ಬಿ ಸಾಮಾಜಿಕ ಜಾಗೃತಿ ಸಮಾವೇಶವನ್ನು ಪತ್ನಿ ಕವಿತಾ ಆಚಾರ್ಯ ಅವರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರಾéನಂತರ ಬ್ಯಾಂಕಿಂಗ್, ಆರೋಗ್ಯ ಸೇವೆ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ದೇಶದ ಅಭಿವೃದ್ಧಿಗಾಗಿ ದುಡಿಯುತ್ತಾ ಅಸಂಖ್ಯ ಉದ್ಯೋಗ ಸೃಷ್ಠಿಸಿದ, ಆರ್ಥಿಕ ಅಭಿವೃದ್ಧಿಗೆ ಕಾರಣವಾದ ಡಾ. ಮಾಧವ ಪೈ, ಮಂಜೇಶ್ವರ ಗೋವಿಂದ ಪೈಗಳಂತೆ ಎಲ್ಲ ಕ್ಷೇತ್ರದಲ್ಲಿ ಜಿಎಸ್‌ಬಿಗಳು ದುಡಿದು ದೇಶಕ್ಕೆ ಕೊಡುಗೆಯಾಗಬೇಕು ಎಂದು ಹೇಳಿದರು.
ದಿಕ್ಸೂಚಿ ಭಾಷಣ ಮಾಡಿದ ಉದ್ಯಮಿ ಡಾ. ಪಿ. ದಯಾನಂದ ಪೈ, ಸಮಾವೇಶ ಸಮಾಜದ ಐಕ್ಯಮತ ಮತ್ತು ಶಕ್ತಿಯ ಸಂಕೇತ. ಸಂಘಟನೆಯಿಂದಲೇ ಸೇವೆ, ಸೇವೆಯಿಂದಲೇ ಸಂಘಟನೆ ಎಂದರು. ಗೌಡಸಾರಸ್ವತ ಸಮಾಜ ಮಾತ್ರವಲ್ಲ ಎಲ್ಲ ಸಮಾಜವೂ ಬಲಿಷ್ಠವಾಗಬೇಕು, ಅಂದರೆ ದೇಶ ಬಲಿಷ್ಠವಾಗುತ್ತದೆ ಎಂದು ಹೇಳಿದರು. ಬೆಂಗಳೂರಿನಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ ಒಂದು ಕೋಟಿ ರೂ. ಕೊಡುವುದಾಗಿ ಪ್ರಕಟಿಸಿದರು.
ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಎಂ.ವಿ. ಕಿಣಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಮಾಜಿ ಶಾಸಕ ಸುನೀಲ ಹೆಗಡೆ, ಮುಂಬೈಯ ಉಲ್ಲಾಸ ಕಾಮತ್, ವಿದ್ವಾಂಸ ಪವನ್ ಭಟ್, ಉದ್ಯಮಿ ಸುನಿಲ್ ಗಾಯತೊಂಡೆ ಇತರರು ಮಾತನಾಡಿದರು. ಸುಧಾಕರ ಶಾನಭಾಗ ಅಧ್ಯಕ್ಷತೆ ವಹಿಸಿದ್ದರು.
ಸ್ವಾಗತ ಸಮಿತಿಯ ಅಧ್ಯಕ್ಷ ಮಂಗಲದಾಸ ಕಾಮತ್ ಸ್ವಾಗತಿಸಿದರು. ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಪ್ರಾಸ್ತಾವಿಕ ಮಾತನಾಡಿದರು. ಉಡುಪಿ, ದ.ಕ., ಉ.ಕ. ಶಿವಮೊಗ್ಗ ಜಿಲ್ಲೆಗಳ ಮತ್ತು ನಾಡಿನ ವಿವಿಧ ಭಾಗಗಳ ಐದು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.