ಹೊನ್ನಾವರ: ಮಂಗನ ಕಾಯಿಲೆ ಮತ್ತೆ ಆರಂಭವಾಗುವ ಲಕ್ಷಣ ಕಾಣಿಸಿಕೊಂಡಿದ್ದು 2020ರ ಜನೆವರಿಯಲ್ಲಿ ಸಿದ್ಧಾಪುರ ಹೊನ್ನೇಪಟಕಿ ಬಳಿ 6 ಮಂಗಗಳು ಮೃತಪಟ್ಟಿದ್ದು ಒಂದಕ್ಕೆ ಕೆಎಫ್‌ಡಿ ತಗುಲಿದ್ದು ಕಂಡುಬಂದಿದೆ. ಜನಕ್ಕೆ ಈವರೆಗೆ ಬಾಧಿಸಿಲ್ಲ, ನಿರ್ಲಕ್ಷಿಸಿದರೆ ಪ್ರಾಣಕ್ಕೆ ಅಪಾಯ ತರುವ ಮಂಗನ ಕಾಯಿಲೆ ನಿಯಂತ್ರಿಸಲು ಜಿಲ್ಲಾ ಕೆಎಫ್‌ಡಿ ಘಟಕ ಸ್ಥಾನಿಕ ವೈದ್ಯಾಧಿಕಾರಿ ಡಾ| ಸತೀಶ ಶೇಟ್ ಹೇಳಿದ್ದಾರೆ.
ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಘಟಕದ ಸಹಕಾರದಲ್ಲಿ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಈವರೆಗೆ 1ಲಕ್ಷ ಡೋಸ್ ಸಿದ್ಧ ಮಾಡಿಕೊಂಡು ಇಷ್ಟರಲ್ಲಿ ಕೊಟ್ಟು ಮುಗಿಯಬೇಕಿತ್ತು. ಜನ ಆಸಕ್ತಿ ವಹಿಸದೆ, ಸಹಕಾರ ನೀಡದೇ ಇರುವುದರಿಂದ ಕೇವಲ 15,288 ಡೋಸ್ ಮಾತ್ರ ಕೊಡುವುದು ಸಾಧ್ಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಸರ್ವೇಕ್ಷಣ ವೈದ್ಯಾಧಿಕಾರಿ ಡಾ| ಸತೀಶಚಂದ್ರ ಅವರು ಹೇಳಿದಂತೆ ಉಣ್ಣೆಗಳ ನಿಯಂತ್ರಣ ಮತ್ತು ಪೂರ್ಣ ಪ್ರಮಾಣದ ಲಸಿಕೆ ಪಡೆಯುವುದರಿಂದ ಮಂಗನ ಕಾಯಿಲೆ ನಿಯಂತ್ರಿಸುವುದು ಸಾಧ್ಯವಿದೆ. ಜಿಲ್ಲೆಯ ಹೊನ್ನಾವರ, ಕುಮಟಾ, ಶಿರಸಿ, ಸಿದ್ಧಾಪುರ, ಭಟ್ಕಳ, ಜೋಯಿಡಾ, ಯಲ್ಲಾಪುರ ತಾಲೂಕುಗಳ 20 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆಗಳನ್ನು ಇಡಲಾಗಿದ್ದು ರಜಾದಿನದ ಹೊರತು ಯಾವತ್ತು ಬೇಕಾದರೂ ಲಸಿಕೆ ಪಡೆಯಬಹುದು.
ಹೆಚ್ಚಿನ ಜನ ಬಂದರೆ ಯಾವುದೇ ಸ್ಥಳದಲ್ಲಿ ಲಸಿಕಾ ಶಿಬಿರ ನಡೆಸಲು ನಾವು ಸಿದ್ಧರಿದ್ದೇವೆ. ಈಗಾಗಲೇ ಹಳ್ಳಿಹಳ್ಳಿಗಳಲ್ಲಿ ಕಾಡಿಗೆ ಹೋಗುವವರಿಗೆ ಡಿಎಂಪಿ ತೈಲ ವಿತರಿಸಲಾಗಿದೆ. ಮಂಗಗಳು ಸತ್ತಲ್ಲಿ, ಉಣ್ಣಿಗಳು ಕಂಡಲ್ಲಿ ಸುಡುವ ವ್ಯವಸ್ಥೆ ಮಾಡಲಾಗಿದೆ. ಶಾಲೆ, ಕಾಲೇಜು ಸಹಿತ ಎಲ್ಲೆಡೆ ಲಸಿಕೆಯ ಮಾಹಿತಿ ನೀಡಿದ್ದು, ಧ್ವನಿವರ್ಧಕ, ಮಾಧ್ಯಮದಲ್ಲೂ ಪ್ರಚಾರ ಕೊಡಲಾಗಿದೆ. ಈ ವರ್ಷ 17 ರಕ್ತದ ಸ್ಯಾಂಪಲ್ ಗಳನ್ನು ಸಂಗ್ರಹಿಸಿದ್ದು 3 ಸತ್ತ ಮಂಗಗಳ ಉಣ್ಣಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. 2019 ಜನೆವರಿವರೆಗೆ ಜಿಲ್ಲೆಯಲ್ಲಿ 413 ಮಂಗಗಳು ಸತ್ತಿದ್ದವು. 62 ಮಂಗಗಳು ಶವಪರೀಕ್ಷೆ ಮಾಡಲಾಗಿತ್ತು. 820 ಜ್ವರ ಪೀಡಿತರ ರಕ್ತ ಸಂಗ್ರಹಿಸಲಾಗಿತ್ತು. 86 ಜನರ ರಕ್ತದಲ್ಲಿ ಕೆಎಫ್‌ಡಿ ವೈರಾಣು ಇರುವುದು ಪತ್ತೆಯಾಗಿತ್ತು.
ಇದರಲ್ಲಿ ಸಿದ್ಧಾಪುರದ ಮೂವರು ಮೃತಪಟ್ಟಿದ್ದಾರೆ. ಕಳೆದವರ್ಷದ ಲೆಕ್ಕಾಚಾರದಲ್ಲಿ ಈ ವರ್ಷವೂ ಮಂಗನ ಕಾಯಿಲೆ ಎದುರಿಸಲು ಎಲ್ಲ ಸಿದ್ಧತೆ ಮಾಡಿದೆ. ಜನ ಕೈಜೋಡಿಸಿದರೆ ಮಾತ್ರ ನಿಯಂತ್ರಣ ಸಾಧ್ಯ. ಏಳು ತಾಲೂಕುಗಳಲ್ಲಿ ಓಡಾಡಲು ಹೆಚ್ಚು ಸಿಬ್ಬಂದಿ ಬೇಕಿತ್ತು, ಯಾರು ಹೇಳುವುದು, ಎಲ್ಲವನ್ನೂ ಸುಧಾರಿಸಿಕೊಂಡು ಘಟಕ ತನ್ನ ಕೆಲಸ ಮಾಡುತ್ತಿದ್ದರೂ ಜನ ಲಸಿಕೆ ಪಡೆಯಲು ಮುಂದೆ ಬರದೇ ಇರುವುದು ಪರಿಣಾಮಕಾರಿ ನಿಯಂತ್ರಣಕ್ಕೆ ತೊಡಕಾಗಿದೆ ಎಂದು ಅವರು ಹೇಳಿದ್ದಾರೆ. ಎಚ್ಚರಿಕೆ ಘಂಟೆ ಬಾರಿಸಿದೆ, ಜನ ಎಚ್ಚರಾಗಬೇಕಿದೆ.
-ಜೀಯು, ಹೊನ್ನಾವರ