ಹಾಸನ: ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಪ್ರತಿಯೊಬ್ಬರ ಕರ್ತವ್ಯ ಇದಕ್ಕೆ ಎಲ್ಲಾ ಇಲಾಖೆಗಳು ಹಾಗೂ ಸಾರ್ವಜನಿಕರು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ್ ಅವರು ಹೇಳಿದರು.
ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ಕಾರ್ಮಿಕ ಇಲಾಖೆಯಿಂದ ಹಮ್ಮಿಕೊಂಡಿದ್ದ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಹಾಗೂ ಕಟ್ಟಡ ಕಾರ್ಮಿಕರ ಸೌಲಭ್ಯಗಳ ಅರಿವು ಮೂಡಿಸುವ ಕಲಾ ಜಾಥಾ ಉದ್ಘಾಟಿಸಿ ಮಾತ ನಾಡಿದ ಅವರು, ಎಲ್ಲಾ ಮಕ್ಕಳಿಗೂ ಉತ್ತಮ ಶಿಕ್ಷಣ ದೊರೆಯಬೇಕು ಎಂದರು.
ಮಕ್ಕಳನ್ನು ದುಡಿಸಿಕೊಳ್ಳುವವರಿಗೆ ದಂಡ ವಿಧಿಸಿ: ಕಲಿಯುವ ಮಕ್ಕಳಿಂದ ದುಡಿಸಿಕೊಳ್ಳುವವರಿಗೆ ದಂಡನೆಯಾಗಬೇಕು. ಪ್ರತಿ ಗ್ರಾಮಗಳಲ್ಲಿ ಈ ಬಗ್ಗೆ ಅರಿವು ಮೂಡಿಸಿ ಎಂದು ಅಧಿಕಾರಿಗಳಿಗೆ ನೀಡಿದ ಅವರು, ಯಾವುದೇ ಬಗೆಯ ಕೆಲಸಗಳಿಗೆ ಅಪ್ರಾಪ್ತ ಮಕ್ಕಳನ್ನು ಸೇರಿಸಿಕೊಳ್ಳುವಂತಿಲ್ಲ. ಮಕ್ಕಳಿಂದ ದುಡಿಸಿಕೊಳ್ಳುತ್ತಿರುವವರು ಯಾರೇ ಆಗಿದ್ದರೂ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನಿಡಿದರು.
10 ದಿನಗಳ ಕಾಲ ಜಾಥಾ: ಜಿಲ್ಲಾದ್ಯಂತ 10 ದಿನಗಳ ಕಾಲ ಈ ಜಾಥಾ ಸಾಗಲಿದ್ದು, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಸಾರ್ವಜನಿಕರಲ್ಲಿ, ಕಟ್ಟಡ ಕಾರ್ಮಿಕರ ನೋಂದಣಿ ಮತ್ತು ಅವರಿಗಿರುವ ಸವಲತ್ತುಗಳ ಕುರಿತು ವಿಶೇಷ ಅರಿವು ಮೂಡಿಸಲಿದೆ ಎಂದು ಅವರು ತಿಳಿಸಿದರು.ಜಿಲ್ಲಾ ವಾರ್ತಾಧಿಕಾರಿ ವಿನೋದ್‌ಚಂದ್ರ, ಮುಜರಾಯಿತಹಶೀಲ್ದಾರ್ ಶಾರದಾಂಬಾ, ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಎಂ.ಎಚ್. ರಾಮಕೃಷ್ಣ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಕನಕಲಕ್ಷ್ಮೀ, ಕಚೇರಿ ಸಹಾಯಕ ತಿಮ್ಮಪ್ಪ ಹಾಗೂ ಎಲ್ಲಾ ತಾಲೂಕುಗಳ ಕಾರ್ಮಿಕ ನಿರೀಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.