ಯಾದಗಿರಿ: ಕೊರೊನಾ ಸೋಂಕಿನ ವಿರುದ್ಧ ಹೋರಾಟದಲ್ಲಿ ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ, ವಿವಿಧ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತದ ಜತೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್. ಮನವಿ ಮಾಡಿದರು.
ನಗರದ ಜಿಲ್ಲಾಧಿ ಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಕೋವಿಡ್ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸುಮಾರು 500ಕ್ಕೂ ಹೆಚ್ಚು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಹರಡುವಿಕೆ ನಿಯಂತ್ರಿಸಲು ಎಲ್ಲರ ಸಹಕಾರ ಅಗತ್ಯವಿದೆ. ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾಕ್ಕೆ ಹೆದರದೇ ಸಿಬ್ಬಂದಿ ಸರಿಯಾಗಿ ಚಿಕಿತ್ಸೆ ನೀಡಬೇಕು ಎಂದರು.
ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ಹಾಸಿಗೆಗಳನ್ನು ಸೋಂಕಿತರಿಗೆ ಮೀಸಲಿಡುವಂತೆ ಸರ್ಕಾರ ಆದೇಶಿಸಿರುವುದರಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಆಯಾ ಆಸ್ಪತ್ರೆ ಮುಖ್ಯಸ್ಥರು ತಮ್ಮ ಸಿಬ್ಬಂದಿಯನ್ನು ಪೂರ್ಣ ಪ್ರಮಾಣದಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ನೋಡಿಕೊಳ್ಳಬೇಕು ಎಂದರು. ನಂತರ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ವಿವಿಧ ಸಮಿತಿ ನೇಮಕ ಮಾಡಲಾಯಿತು.
ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ ಹಂಚುವಿಕೆ, ಹೋಂ ಕ್ವಾರಂಟೈನ್, ಕ್ವಾರಂಟೈನ್ ಆಪ್ ನಿರ್ವಹಣೆ ಸೇರಿದಂತೆ ಇತರೆ ತಂಡ ಮಾಡಿ ಅ ಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ತಹಶೀಲ್ದಾರ್ ಸೇರಿದಂತೆ ತಾಲೂಕು ಮಟ್ಟದ ಅ ಧಿಕಾರಿಗಳು ಹಾಗೂ ಗ್ರಾಮ ಮಟ್ಟದಲ್ಲಿ ಪಿಡಿಒ, ಆಶಾ-ಅಂಗನವಾಡಿ ಕಾರ್ಯಕರ್ತೆಯರು ಸಮಿತಿಯಲ್ಲಿ ಕಾರ್ಯ ನಿರ್ವಹಿಸುವರು. ಈ ವೇಳೆ ಜಿಪಂ ಸಿಇಒ ಶಿಲ್ಪಾ ಶರ್ಮಾ, ಹಿರಿಯ ಉಪ ವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಡಿಎಚ್‌ಒ ಡಾ| ಇಂದುಮತಿ ಕಾಮಶೆಟ್ಟಿ, ಅಬಕಾರಿ ಇಲಾಖೆ ಜಿಲ್ಲಾಧಿ ಕಾರಿ ಶಿವನಗೌಡ ಪಾಟೀಲ್, ಆಹಾರ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ನಾಯಕ, ಆರ್‌ಸಿಎಚ್ ಡಾ| ಸೂರ್ಯಪ್ರಕಾಶ್ ಕಂದಕೂರು, ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ| ಲಕ್ಷ್ಮೀಕಾಂತ್, ಡಾ| ಸಾಜಿದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಇತರರು ಇದ್ದರು.