ದಾವಣಗೆರೆ: ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯ ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ತು (ಎಬಿವಿಪಿ) ಕಾರ್ಯಕರ್ತರು ಬುಧವಾರ ಡಾ| ಎಂ.ಸಿ. ಮೋದಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ವಿವಿಧ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರತಿಭಟಿಸಿದ ಕಾರ್ಯಕರ್ತರು ವಿಶ್ವವಿದ್ಯಾಲಯದ ವಿಳಂಬ ನೀತಿ, ಅಧಿಕಾರಿಗಳ ನಿರ್ಲಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ಮುಖಂಡರು, ವಿಶ್ವೇಶ್ವರಾಯ
ವಿಶ್ವವಿದ್ಯಾಲಯ ಇಡೀ ರಾಜ್ಯಕ್ಕೆ ಏಕೈಕ ತಾಂತ್ರಿಕ ವಿಶ್ವವಿದ್ಯಾಲಯ ಆಡಳಿತ ಮಂಡಳಿಯ ಮಾಡುತ್ತಿರುವ ಎಡವಟ್ಟುಗಳಿಂದ ಇಡೀ ತಾಂತ್ರಿಕ ಶಿಕ್ಷಣ ಹಳ್ಳ ಹಿಡಿಯುತ್ತಿದೆ. ವಿದ್ಯಾರ್ಥಿಗಳು ಪಡಬಾರದ ಪಾಡುಪಡುತ್ತಿದ್ದಾರೆ ಎಂದರು.
ಪರೀಕ್ಷೆ ವಿಷಯದಲ್ಲಿ ಸಾಕಷ್ಟು ಎಡವಟ್ಟುಗಳು ಆಗಿವೆ. ಉಚ್ಛ ನ್ಯಾಯಾಲಯದ ಆದೇಶದಂತೆ ಕ್ರಾಶ್ ಕೋರ್ಸ್ ಆರಂಭಿಸಿ 2017ರ ಫೆಬ್ರವರಿಯಲ್ಲಿ ಪರೀಕ್ಷೆ ನಡೆಸಬೇಕಿತ್ತು. ಆದರೆ, ಅಧಿಕಾರಿಗಳು ಆದೇಶ ಪಾಲಿಸಿಲ್ಲ. ಫೆಬ್ರವರಿ ಬದಲು ಮೇನಲ್ಲಿ ಕ್ರಾಶ್ ಕೋರ್ಸ್ ಪರೀಕ್ಷೆ ನಡೆಸಿದ್ದರೂ ಈವರೆಗೆ ಫಲಿತಾಂಶ ಪ್ರಕಟಿಸಿಲ್ಲ. ಕ್ರಾಶ್ ಕೋರ್ಸ್‌ನ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪರೀಕ್ಷೆ ಆದ ಒಂದು ತಿಂಗಳೊಳಗೆ ತಮ್ಮ ರೆಗ್ಯುಲರ್ ಪರೀಕ್ಷೆ ಬರೆಯುವಂತಹ ಸ್ಥಿತಿ ನಿರ್ಮಾಣ ಮಾಡಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವವಿದ್ಯಾಲಯ ಅಧಿಕಾರಿಗಳು ಕ್ರಾಶ್ ಕೋರ್ಸ್ ಪದ್ಧತಿಯಲ್ಲಿರುವ ಗೊಂದಲ ನಿವಾರಣೆಗೆ ಮುಂದಾಗಬೇಕು. ಪಠ್ಯಕ್ರಮದಲ್ಲಿನ ಸಮಸ್ಯೆ ನಿವಾರಿಸಬೇಕು. ಪರೀಕ್ಷೆ ಮುಗಿದ ಒಂದು ತಿಂಗಳ ಒಳಗೆ ಫಲಿತಾಂಶ ನೀಡಬೇಕು. ಹಿರಿಯ ಅಧ್ಯಾಪಕರಿಂದ ಮೌಲ್ಯಮಾಪನ ಮಾಡಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ರಾಜ್ಯ ಕಾರ್ಯದರ್ಶಿ ರಾಜೇಶ್ ಗುರಾಣಿ, ಪ್ರದೀಪ್, ದೀಕ್ಷಿತ್, ರಾಮು, ಸ್ವಾತಿ, ತೇಜಸ್ವಿನಿ, ಸೌಮ್ಯ ಕೆ.ಎಸ್., ಚೇತನ್ ಡಿ., ದಿವಾಕರ್ ರೆಡ್ಡಿ, ಮಂಜುನಾಥ ಗೌಡ, ಬಸವರಾಜ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.