ರಾಮನಗರ: ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಹಿಂಬಾಲಕರಿಗೆ ಮಾತ್ರ ಕಾಮಗಾರಿಗಳ ಗುತ್ತಿಗೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಿಎಂ ತವರು ಕ್ಷೇತ್ರ ಚನ್ನಪಟ್ಟಣದ ಗುತ್ತಿಗೆದಾರರು ಸೇರಿದಂತೆ ಜಿಲ್ಲೆಯ ಗುತ್ತಿಗೆದಾರರು ನಗರದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಲೋಕೋಪಯೋಗಿ ಇಲಾಖೆಯ ಆವರಣದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದ ಗುತ್ತಿಗೆದಾರರು ಇಲ್ಲಿನ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿ ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸದೆ ಕಾಮಗಾರಿಗಳ ಗುತ್ತಿಗೆಯನ್ನು ಸಿಎಂ ಎಚ್.ಡಿ.ಕುಮಾರಸ್ವಾಮಿ ಹಿಂಬಾಲಕರಿಗೆ ನೀಡುತ್ತಿದ್ದಾರೆ ಎಂದು ದೂರಿದರು.
ಪರವಾನಗಿ ಇಲ್ಲದವರಿಗೂ ಗುತ್ತಿಗೆ: ವೇಳೆ ಗುತ್ತಿಗೆದಾರ ಪ್ರೇಮ್‌ಕುಮಾರ್ ಮಾತನಾಡಿ, ಚನ್ನಪಟ್ಟಣದಲ್ಲಿ ಗ್ರಾಮೀಣ ರಸ್ತೆ ಹಾಗೂ ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ 1.90 ಕೋಟಿ ರೂ, ಅನುದಾನ ಬಿಡುಗಡೆ ಆಗಿದೆ. ಪ್ರತಿ ಕಾಮಗಾರಿಯನ್ನು 5 ಲಕ್ಷದೊಳಗೆ ತುಂಡು ಗುತ್ತಿಗೆಗಳನ್ನಾಗಿ ವಿಂಗಡಿಸಿ, ಜೆಡಿಎಸ್ ಕಾರ್ಯಕರ್ತರಿಗೆ ಸೀಕ್ರೆಟ್ ಟೆಂಡರ್ ಅಡಿಯಲ್ಲಿ ಕಾಮಗಾರಿಯ ಗುತ್ತಿಗೆ ನೀಡಲಾಗುತ್ತಿದೆ. ಗುತ್ತಿಗೆ ಪರವಾನಗಿ ಹೊಂದಿಲ್ಲದವರಿಗೂ ಅಧಿಕಾರಿಗಳು ಗುತ್ತಿಗೆ ನೀಡಲು ಮುಂದಾಗಿದ್ದಾರೆ. ಟೆಂಡರ್ ಕರೆದು 21 ದಿನಗಳ ಕಾಲಾವಕಾಶ ನೀಡುವುದು ಮುಂತಾದ ಯಾವ ನಿಯಮವನ್ನು ಅಧಿಕಾರಿಗಳು ಪಾಲಿಸಿಲ್ಲ ಎಂದು ಆರೋಪಿಸಿದರು.
ಅಧಿಕಾರಿಗಳಿಂದ ಅಕ್ರಮ: ಸೀಕ್ರೆಟ್ ಟೆಂಡರ್ ಮೂಲಕ ಮುಖ್ಯಮಂತ್ರಿ ಹಿಂಬಾಲಕರು ಮತ್ತು ಜೆಡಿಎಸ್‌ನ ಒಂದು ಬಣದ ಕಾರ್ಯಕರ್ತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಕಾನೂನು ಪ್ರಕಾರ ಟೆಂಡರ್ ಅಧಿಸೂಚನೆ ಹೊರಡಿಸಿ, ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದು ಬುಲೆಟಿನ್ ಹೊರತಂದಿಲ್ಲ. ಇಲಾಖೆಯ ಅಧಿಕಾರಿಗಳು ಅಕ್ರಮಕ್ಕೆ ಕೈಜೋಡಿಸಿದ್ದಾರೆ ಎಂದು ದೂರಿದರು.
ಕೆಲ ಮುಖಂಡರಿಗೆ ಮಾತ್ರ ಅನುಕೂಲ: ರಾಮನಗರಕ್ಕೂ 1 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇಲ್ಲಿಯೂ ಕೆಲವು ಮುಖಂಡರಿಗೆ ಮಾತ್ರ ಅಧಿಕಾರಿಗಳು ಅನುಕೂಲ ಮಾಡಿಕೊಡುತ್ತಿದ್ದಾರೆ. ಆರೇಳು ತಿಂಗಳಿಂದೀಚೆ ಈ ಚಾಳಿ ಶುರುವಾಗಿದ್ದು, ಈ ಕ್ಷೇತ್ರಗಳ ಶಾಸಕರ ಆಪ್ತರಿಗೆ ಮಾತ್ರ ಕೆಲಸ ನೀಡಲಾಗುತ್ತಿದೆ ಎಂದು ದೂರಿದರು.
ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಒಪನ್ ಟೆಂಡರ್ ಕರೆಯಬೇಕು. ಇಲ್ಲವೆ ಕಾಮಗಾರಿಗಳ ಬಗ್ಗೆ ಗುತ್ತಿಗೆದಾರರ ಸಂಘಕ್ಕೆ ಮಾಹಿತಿ ನೀಡಬೇಕು. ಆದರೆ, ಅಧಿಕಾರಿಗಳು ಅದ್ಯಾವುದನ್ನು ಮಾಡುತ್ತಿಲ್ಲ. ಎಲ್ಲಾ ಗುತ್ತಿಗೆದಾರರನ್ನು ಅಧಿಕಾರಿಗಳು ಪರಿಗಣಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.