ಹಾವೇರಿ: ಆಡಳಿತ ಮಂಡಳಿಯ ದೂರದೃಷ್ಟಿತ್ವ ಕೊರತೆಯಿಂದಾಗಿ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿದ್ದ ಕೋಟ್ಯಂತರ ರೂ. ಮೌಲ್ಯದ ಸಕ್ಕರೆ ಕಾರ್ಖಾನೆ ಗುತ್ತಿಗೆದಾರರ ಕೈ ಸೇರಿದ್ದು ಈಗ ಕಬ್ಬು ಬೆಳೆಗಾರರು ಕೈ ಕೈ ಹಿಸುಕಿಕೊಳ್ಳುವ ದುಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಉತ್ತಮ ದರ ಸಿಗಬೇಕು. ತನ್ಮೂಲಕ ರೈತರು ಆರ್ಥಿಕವಾಗಿ ಸದೃಢರಾಗಬೇಕು ಎಂಬ ಸದುದ್ದೇಶದಿಂದ ಹಿರಿಯ ಸಹಕಾರಿಗಳೆಲ್ಲ ಸೇರಿ ಸಂಗೂರಿನಲ್ಲಿ ಸ್ಥಾಪಿಸಿದ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆ ಈಗ ಗುತ್ತಿಗೆದಾರರ ಕೈಯಲ್ಲಿದೆ.
ಸಾಕಷ್ಟು ಮುಂದಾಲೋಚನೆ ಮಾಡದೆ ಕಾರ್ಖಾನೆಯನ್ನು ಗುತ್ತಿಗೆ ಕೊಟ್ಟ ರೈತರು, ಈಗ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡವರಂತೆ ಮರುಕ ಪಡುತ್ತಿದ್ದಾರೆ. ಫಕ್ಕೀರಪ್ಪ ತಾವರೆ, ಬಿ.ಜಿ. ಬಣಕಾರ, ಪಿ.ಸಿ. ಶೆಟ್ಟರ್ ಸೇರಿದಂತೆ ಇನ್ನಿತರ ಆಗಿನ ಹಿರಿಯ ಸಹಕಾರಿಗಳು 1974ರಲ್ಲಿ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆ ಸಂಸ್ಥೆಯನ್ನು ನೋಂದಣಿ ಮಾಡಿಸಿದರು. ರೈತರಿಂದ ಷೇರು ಸಂಗ್ರಹಿಸಿ ಅಂದಾಜು 8-10 ಕೋಟಿ ರೂ. ಗಳಲ್ಲಿ ಕಾರ್ಖಾನೆ ಸ್ಥಾಪಿಸಿದರು. 1984ರಲ್ಲಿ ಕಾರ್ಖಾನೆ ಉತ್ಪಾದನೆ ಪ್ರಾರಂಭಿಸಿತು. ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಕಾರ್ಖಾನೆ ಉದ್ಘಾಟಿಸಿದರು.
ಆರಂಭದಲ್ಲಿ ಲಾಭ: ಆರಂಭದ 10-15ವರ್ಷ ಕಾರ್ಖಾನೆ ಲಾಭದಲ್ಲಿದ್ದು ಐದಾರು ಕೋಟಿ ರೂ. ಠೇವಣಿಯೂ ಇಡುವಂತಾಗಿತ್ತು. ಬಳಿಕ ವರ್ಷದಿಂದ ವರ್ಷಕ್ಕೆ ಕಾರ್ಖಾನೆ ನಷ್ಟದ ಹಾದಿಯಲ್ಲಿ ಸಾಗಿತು. ಠೇವಣಿ ಹಣವೂ ಕರಗಿ, ಸರ್ಕಾರದಿಂದ 14-15 ಕೋಟಿ ಸಾಲ, ಖಾಸಗಿಯಾಗಿ ಮೂರು ಕೋಟಿ ಸಾಲ ಕಾರ್ಖಾನೆಯ ಮೇಲೆ ಬಿತ್ತು. ಈ ಸಾಲಕ್ಕೆ ಅಂಜಿ ಆಗಿನ ಆಡಳಿತ ಮಂಡಳಿ, ಈ ಬಗ್ಗೆ ಎಲ್ಲ ರೈತರೊಡಗೂಡಿ ಕೂಲಂಕಷವಾಗಿ ಚರ್ಚಿಸದೆ ಕಾರ್ಖಾನೆಯನ್ನು ಗುತ್ತಿಗೆ ನೀಡುವ ತೀರ್ಮಾನ ಕೈಗೊಂಡಿತು.
ಇದರ ಪರಿಣಾಮವಾಗಿ ಸಹಕಾರಿಗಳ ಕೈಯಲ್ಲಿದ್ದ ಕಾರ್ಖಾನೆಯನ್ನು 2008ರಲ್ಲಿ ಕಾರ್ಖಾನೆಯನ್ನು 30ವರ್ಷದ ಅವಧಿ ಗೆ 42 ಕೋಟಿ ರೂ.ಗಳಿಗೆ ಜಿ.ಎಂ. ಶುಗರ್ನವರಿಗೆ ಗುತ್ತಿಗೆ ನೀಡಲಾಯಿತು.
ಕೆಲಸ ಕಳೆದುಕೊಂಡ ನೌಕರರು: ಕಾರ್ಖಾನೆ ಸಹಕಾರಿಗಳ ಕೈಯಲ್ಲಿದ್ದಾಗ ಒಟ್ಟು 640 ನೌಕರರು ಕೆಲಸ ಮಾಡುತ್ತಿದ್ದರು. ಗುತ್ತಿಗೆದಾರರ ಕೈಗೆ ಕಾರ್ಖಾನೆ ಕೊಡುವಾಗ ಅರ್ಧಕ್ಕರ್ಧ ನೌಕರರನ್ನು ಕಡಿತಗೊಳಿಸಲಾಯಿತು. 320 ನೌಕರರಿಂದ ಸ್ವಯಂ ನಿವೃತ್ತಿ ಪಡೆಯಲಾಯಿತು. ಇವರಿಗೆ ಗುತ್ತಿಗೆದಾರರಿಂದ ಮುಂಗಡ ಏಳು ಕೋಟಿ ರೂ. ಪಡೆದು ಪರಿಹಾರವೂ ನೀಡಲಾಯಿತು. ಕಾರ್ಖಾನೆಯನ್ನು ಗುತ್ತಿಗೆ ಕೊಟ್ಟ ಬಳಿಕ ಬೆಳೆಗಾರರು ಸಂಕಷ್ಟ ಅನುಭವಿಸುತ್ತಲೇ ಬಂದಿದ್ದಾರೆ. ಕಬ್ಬಿಗೆ ಉತ್ತಮ ದರ ನೀಡುತ್ತಿಲ್ಲ. ಇಳುವರಿ ಕಡಿಮೆ ತೋರಿಸುತ್ತಿದ್ದಾರೆ. ಸಾಗಾಟ, ಕಟಾವಿಗೆ ಹೆಚ್ಚಿನ ದರ ಕಡಿತ ಗೊಳಿಸುತ್ತಿದ್ದಾರೆ ಎಂದು ಬೆಳೆಗಾರರು ಅನೇಕ ವರ್ಷಗಳಿಂದ ಆರೋಪಿಸುತ್ತಲೇ ಬಂದಿದ್ದಾರೆ.
ಅಲ್ಲದೇ ಆಡಳಿತ ಮಂಡಳಿಯ ವಾರ್ಷಿಕ ಸಭೆಗಳಲ್ಲಿ ಗುತ್ತಿಗೆದಾರರಿಂದ ಒಪ್ಪಂದ ಉಲ್ಲಂಘನೆಯಾಗಿದ್ದು, ಕಾರ್ಖಾನೆಯನ್ನು ರೈತರಿಗೆ ವಾಪಸ್ ಪಡೆಯಲು ಸರ್ಕಾರ ಮಟ್ಟದಲ್ಲಿ ಒತ್ತಡ ಹೇರಬೇಕು ಎಂಬ ನಿರ್ಣಯವನ್ನೂ ಮಾಡುತ್ತಲೇ ಬಂದಿದ್ದಾರೆ. ಆದರೆ, ಅದು ನಿರ್ಣಯಕ್ಕೆ ಮಾತ್ರ ಸೀಮಿತವಾಗಿದೆ. ಏಕೆಂದರೆ ವಾಸ್ತವದಲ್ಲಿ 30ವರ್ಷಕ್ಕೆ ಗುತ್ತಿಗೆ ಕೊಟ್ಟು ಮಧ್ಯದಲ್ಲಿ ಮರಳಿ ಪಡೆಯುವುದು ಸುಲಭದ ಮಾತಲ್ಲ. ಗುತ್ತಿಗೆದಾರರ ಗುತ್ತಿಗೆ ಅಧಿವ 30ವರ್ಷವಿದ್ದು, ಒಪ್ಪಂದದ ಪ್ರಕಾರ ಅವಧಿ ಮುಗಿದ ಬಳಿಕ ರೈತರು ಗುತ್ತಿಗೆದಾರ ಕಾರ್ಖಾನೆಗೆ ಮಾಡಿರುವ ಖರ್ಚಿನ ಹಣ ಕೊಟ್ಟು ವಾಪಸ್ ಪಡೆಯಬೇಕಾಗಿದೆ. ಗುತ್ತಿಗೆದಾರರು ಈಗಾಗಲೇ ಕಾರ್ಖಾನೆ ಅಭಿವೃದ್ಧಿಗೆ 350ಕೋಟಿ ರೂ. ವ್ಯಯ ಮಾಡಿರುವುದಾಗಿ ಹೇಳುತ್ತಿದ್ದು, ಅಷ್ಟೊಂದು ಹಣ ಕೊಟ್ಟು ಮರಳಿ ಕಾರ್ಖಾನೆ ಪಡೆಯುವುದು ಕನಸಿನ ಮಾತೇ ಸರಿ ಎಂಬಂತಾಗಿದೆ.
-ಎಚ್.ಕೆ. ನಟರಾಜ