Advertisement

ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಪ್ರಕರಣ: ಆ ನಾಲ್ಕನೇ ವ್ಯಕ್ತಿ ಯಾರು?

09:45 AM Apr 16, 2022 | Team Udayavani |

ಉಡುಪಿ: ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಚುರುಕುಗೊಂಡಿದ್ದು, ಪ್ರಕರಣದಲ್ಲಿ 4ನೇ ವ್ಯಕ್ತಿಯ ಹೆಸರೊಂದು ಪ್ರಸ್ತಾವಗೊಂಡಿದೆ. ಈ ಬಗ್ಗೆ ಪೊಲೀಸ್‌ ತನಿಖೆ ಮುಂದುವರಿದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Advertisement

ಈಗಾಗಲೆ ತನಿಖೆಗಾಗಿ ಎರಡು ವಿಶೇಷ ತಂಡಗಳನ್ನು ಜಿಲ್ಲಾ ಪೊಲೀಸ್‌ ಇಲಾಖೆ ರಚಿಸಿದ್ದು, ಫೋನ್‌ ಕರೆಗಳು, ಸಿಸಿಟಿವಿ ಪರಿಶೀಲನೆ ಸಹಿತ ತಾಂತ್ರಿಕ ಆಯಾಮದಲ್ಲಿ ತನಿಖೆ ನಡೆಯುತ್ತಿದೆ. ಸಂತೋಷ್‌ ಪಾಟೀಲ್‌ ಮತ್ತು ಇಬ್ಬರು ಸ್ನೇಹಿತರು ಸೇರಿ ಮೂವರು ಉಡುಪಿಗೆ ಬಂದು ಲಾಡ್ಜ್ ಪಡೆದಿದ್ದು, ಎರಡು ರೂಂ ಪಡೆದುಕೊಂಡಿದ್ದರು. ಸ್ನೇಹಿತರು ಪ್ರತ್ಯೇಕ ಕೋಣೆ ಯಾಕೆ ಎಂದು ಕೇಳಿದ್ದಕ್ಕೆ, ಸ್ನೇಹಿತರೊಬ್ಬರು ಬರುತ್ತಾನೆಂದು ಸಂತೋಷ್‌ ತಿಳಿಸಿದ್ದ ಎಂಬ ಮಾಹಿತಿಯನ್ನು ಅವರ ಗೆಳೆಯರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ನಿಟ್ಟಿನಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಪೊಲೀಸ್‌ ಅಧಿಕಾರಿಗಳು ಇದನ್ನು ದೃಢಪಡಿಸಿಲ್ಲ.

ಲಾಡ್ಜ್ ಮ್ಯಾನೇಜರ್‌ ಏನಂದರು?
ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ರೂಂ ಪಡೆದಿರುವುದು ಮತ್ತು ಇತರ ಚಲನವಲನಗಳ ಬಗ್ಗೆ ಅವರು ತಂಗಿದ್ದ ಲಾಡ್ಜ್ ಮ್ಯಾನೇಜರ್‌ ದಿನೇಶ್‌ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಂತೋಷ್‌ ಪಾಟೀಲ್‌ ಸ್ನೇಹಿತರಾದ ಸಂತೋಷ್‌ ಮತ್ತು ಪ್ರಶಾಂತ್‌ ಶೆಟ್ಟಿ ಅವರೊಂದಿಗೆ ಎ. 11ರ ಸಂಜೆ 5ಕ್ಕೆ ಸಂತೋಷ್‌ ಪಾಟೀಲ್‌ ಹೆಸರಲ್ಲಿ ರೂಂ ಕಾಯ್ದಿರಿಸಿದ್ದರು. ಹಿಂಡಲಗಾ ವಿಳಾಸ ಕೊಟ್ಟಿದ್ದರು.

ಅದರಂತೆ ರೂಂ ನಂ. 207ರಲ್ಲಿ ಸಂತೋಷ್‌ ಹಾಗೂ ರೂಂ ನಂ. 209ರಲ್ಲಿ ಸ್ನೇಹಿತರು ತಂಗಿದ್ದರು. ರೂಂ ಚೆಕ್‌ ಇನ್‌ ಆದ ಬಳಿಕ ಎಲ್ಲರೂ ಅಂದು ಸಂಜೆ ಊಟಕ್ಕೆ ಹೊರಗೆ ಹೋಗಿ ರಾತ್ರಿ 8.59ಕ್ಕೆ ರೂಂಗೆ ವಾಪಸ್‌ ಬಂದಿದ್ದರು. ಬರುವಾಗ ಸಂತೋಷ್‌ ಪಾಟೀಲ್‌ ಜ್ಯೂಸ್‌ ಪಾರ್ಸೆಲ್‌ ತಂದಿದ್ದರು. ಮರುದಿನ ಬೆಳಗ್ಗೆ 10.50ಕ್ಕೆ ಅವರ ಸ್ನೇಹಿತರು ಸಂತೋಷ್‌ ಬಗ್ಗೆ ನಮ್ಮಲ್ಲಿ ಕೇಳಿದರು. ಅವರು ರೂಂ ಬಾಗಿಲು ತೆಗೆಯುತ್ತಿಲ್ಲ. ಎಷ್ಟು ಮೊಬೈಲ್‌ ಕರೆ ಮಾಡಿದರೂ ತೆಗೆಯುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದರು.

Advertisement

ಕೂಡಲೇ ರೂಂ ಬಾಯ್‌ ಮೂಲಕ ನಕಲಿ ಬೀಗದಲ್ಲಿ ಬಾಗಿಲು ತೆಗೆದಾಗ ಸಂತೋಷ್‌ ಪಾಟೀಲ್‌ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡುಬಂದಿತ್ತು. ತತ್‌ಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದೆವು. ಮೃತಪಟ್ಟಿದ್ದ ಆ ದಿನ ಬೆಳಗ್ಗೆ ಪೊಲೀಸರು ಸಂತೋಷ್‌ ಪಾಟೀಲ್‌ ಅವರನ್ನು ಕೇಳಿಕೊಂಡು ಲಾಡ್ಜ್ ಗೆ ಬಂದಿದ್ದರು. ಬೆಳಗಾವಿ ವಿಳಾಸದೊಂದಿಗೆ ಫೋಟೋ ತೋರಿಸಿ ಈ ವ್ಯಕ್ತಿ ತಂಗಿದ್ದಾರಾ ಎಂದು ಪ್ರಶ್ನಿಸಿದ್ದರು. ಫೋಟೋ ನೋಡಿ ಪರಿಚಯ ಆಗಿರಲಿಲ್ಲ. ಸಂತೋಷ್‌ ಅವರು ಹಿಂಡಲಗಾ ವಿಳಾಸ ಕೊಟ್ಟಿದ್ದರಿಂದ ಪೊಲೀಸರು ಬೆಳಗಾವಿ ಅಂದಾಗ ನಮಗೆ ತಿಳಿಯಲಿಲ್ಲ. ನಮ್ಮಲ್ಲಿದ್ದ ಎಲ್ಲ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ. ಒಂದು ವಾರದ ವರೆಗೂ 207, 209 ಕೊಠಡಿಗಳನ್ನು ಯಾರಿಗೂ ಕೊಡಬೇಡಿ ಎಂದಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next