ಬೆಂಗಳೂರು: ಸೈಬರ್ ಅಪರಾಧಗಳನ್ನು ಪತ್ತೆ ಹಚ್ಚಲು ಪ್ರಯೋಗಾಲಯ ಸ್ಥಾಪನೆಗೆ ರಾಜ್ಯ ಸರ್ಕಾರದೊಂದಿಗೆ
ಇನ್ಫೋಸಿಸ್ ಪ್ರತಿಷ್ಠಾನ ಒಪ್ಪಂದ ಮಾಡಿಕೊಂಡಿದೆ. ಬುಧವಾರ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸಮ್ಮುಖದಲ್ಲಿ ಸುಮಾರು 22 ಕೋಟಿ ರೂ. ಮೊತ್ತದ ಯೋಜನೆಗೆ ಒಪ್ಪಂದ ಮಾಡಿಕೊಳ್ಳಲಾಯಿತು.
ಈ ವೇಳೆ ಮಾತನಾಡಿದ ಪರಮೇಶ್ವರ್, ತಂತ್ರಜ್ಞಾನ ಬಳಸಿ ಅಪರಾಧ ಪತ್ತೆ ಹಚ್ಚಲು ಸಿಐಡಿ ವಿಭಾಗದಲ್ಲಿ ಪ್ರಯೋಗಾಲಯ ಸ್ಥಾಪನೆಯಾಗುತ್ತಿರುವುದು ದೇಶದಲ್ಲಿಯೇ ಮೊದಲು. ಪೊಲೀಸ್ ಇಲಾಖೆ ಬಗ್ಗೆ ಎಲ್ಲರೂ ನಕಾರಾತ್ಮಕ ಧೋರಣೆ ಹೊಂದಿರುತ್ತಾರೆ. ಆದರೆ, ಇನ್ಫೋಸಿಸ್ ಸಂಸ್ಥೆ ನಿರಂತರವಾಗಿ ಪೊಲೀಸ್ ಇಲಾಖೆಗೆ ಸಹಾಯ ಹಸ್ತ ನೀಡುತ್ತ ಬಂದಿದೆ ಎಂದರು.
ಪೊಲೀಸ್ ಇಲಾಖೆಗೆ ಬಜೆಟ್‌ನಲ್ಲಿಯೂ ನಿರೀಕ್ಷಿತ ಹಣಕಾಸು ದೊರೆಯುತ್ತಿಲ್ಲ. ಸಾರ್ವಜನಿಕರಿಂದಲೂ ಸಾಕಷ್ಟು ಸಹಾಯ ದೊರೆಯುವುದಿಲ್ಲ. ಆದರೆ, ರಾಜ್ಯ ಸರ್ಕಾರ ಪೊಲೀಸರ ಶ್ರೇಯೋಭಿವೃದ್ಧಿಗೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. 1800 ಕೋಟಿ ರೂ. ವೆಚ್ಚದಲ್ಲಿ ಪೊಲೀಸರಿಗೆ ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ. ಎಲ್ಲ ಪೊಲೀಸ್ ಠಾಣೆಗಳಿಗೂ ಇಂಟರ್ ನೆಟ್ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.
ಈಗ ಸೈಬರ್ ಅಪರಾಧಗಳ ಪತ್ತೆಗೆ ಹೊಸ ತಂತ್ರಜ್ಞಾನ ಲಭ್ಯವಿರುವುದರಿಂದ ಈ ಬಗ್ಗೆ ಪೊಲೀಸರಿಗೆ ತಾಂತ್ರಿಕ ತರಬೇತಿ ನೀಡಲು ದೇಶದ ವಿವಿಧ ಭಾಗದಿಂದ ತಂತ್ರಜ್ಞರನ್ನು ಕರೆಸಿ ತರಬೇತಿ ನೀಡಲಾಗುವುದು. ಗುಜರಾತ್‌ನ ಅಹಮದಾಬಾದ್‌ನಲ್ಲಿ ಅತ್ಯಂತ ಸುಸಜ್ಜಿತವಾದ ಸೈಬರ್ ಅಪರಾಧ ಪತ್ತೆ ಕೇಂದ್ರವಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಸೈಬರ್ ಅಪರಾಧ ಪತ್ತೆ ಕೇಂದ್ರ ಸ್ಥಾಪಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ ಮಾತನಾಡಿ, ಸಮಾಜದ ರಕ್ಷಣೆಗಾಗಿ ಪೊಲೀಸರು ಹಗಲಿರುಳು ಶ್ರಮಿಸುತ್ತಾರೆ. ಅವರ ಅನುಕೂಲಕ್ಕೆ ಸಮಾಜದ ಭಾಗವಾಗಿ ಕೆಲಸ ಮಾಡುತ್ತಿರುವುದು ಖುಷಿ ತಂದಿದೆ. ಕಳ್ಳರು ಹೊಸ ಹೊಸ ತಂತ್ರಜ್ಞಾನ ಬಳಸಿ ಅಪರಾಧಗಳನ್ನು ಮಾಡುತ್ತಾರೆ. ಅಂತಹ ತಂತ್ರಜ್ಞಾನವನ್ನು ಪತ್ತೆಹಚ್ಚಲು ಪೊಲೀಸರಿಗೆ
ಅನುಕೂಲವಾಗಲೆಂದು ಇನ್ಫೋಸಿಸ್ ಪ್ರತಿಷ್ಠಾನವು ಪ್ರಯೋಗಾಲಯ ಸ್ಥಾಪನೆಗೆ ಒಪ್ಪಂದ ಮಾಡಿಕೊಂಡಿದೆ. ಐದು ವರ್ಷಗಳವರೆಗೆ ಇನ್ಫೋಸಿಸ್ ಸಂಸ್ಥೆಯೇ ಪ್ರಯೋಗಾಲಯ ನಿರ್ವಹಣೆಯ ಜವಾಬ್ದಾರಿ ವಹಿಸಲಿದೆ ಎಂದು ಹೇಳಿದರು.