Advertisement

ಮುಂದುವರಿದ ಶಾಂತಕುಮಾರ್‌ ಶವದ ಶೋಧ

12:42 PM May 22, 2017 | |

ಬೆಂಗಳೂರು: ಮಳೆ ವೇಳೆ ರಾಜಕಾಲುವೆಯಲ್ಲಿ ಕೊಚ್ಚಿಹೋದ ಜೆಸಿಬಿ ಆಪರೇಟರ್‌ ಶಾಂತಕುಮಾರ್‌ ಶವದ ಶೋಧಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು  ಎಂಇಜಿ ತಂಡಗಳ ಮೊರೆ ಹೋಗಲು ಬಿಬಿಎಂಪಿ ಚಿಂತನೆ ನಡೆಸಿದೆ. 

Advertisement

ಮಳೆ ಬರುವಾಗ ರಾಜಕಾಲುವೆ ಪಕ್ಕ ನಿಂತಿದ್ದ ಜೆಸಿಬಿಯಲ್ಲೇ ಇದ್ದ ಜೆಸಿಬಿ ಆಪರೇಟರ್‌ ಶಾಂತಕುಮಾರ್‌ (35), ಶನಿವಾರ ರಾತ್ರಿ ಮಳೆ ನೀರಿನಲ್ಲಿ ಕೊಚ್ಚಿಹೋಗಿದ್ದರು. ಭಾನುವಾರ ರಾತ್ರಿವರೆಗೂ ಶೋಧಕಾರ್ಯ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ರಾತ್ರಿ ಶೋಧಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಸೋಮವಾರ ಬೆಳಿಗ್ಗೆ ಜ್ಞಾನಭಾರತಿಯಿಂದ ಕೆಂಗೇರಿವರೆಗೂ ಶೋಧ ನಡೆಯ­ಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಕುರುಬರಹಳ್ಳಿಯಿಂದ ಜ್ಞಾನಭಾರತಿವರೆಗೂ 7-8 ಜೆಸಿಬಿ ಬಳಸಿ ಶೋಧ ನಡೆಸಲಾಗುತ್ತಿದೆ. ಆದರೆ, ಯಾವುದೇ ಸುಳಿವು ಸಿಗದಿದ್ದರಿಂದ ಎನ್‌ಡಿಆರ್‌ಎಫ್ ಮತ್ತು ಎಂಇಜಿ ಮೊರೆಗೆ ಬಿಬಿಎಂಪಿ ಚಿಂತನೆ ನಡೆಸಿದೆ. ಈ ಸಂಬಂಧ ಸಂಪರ್ಕಕ್ಕೆ ಯತ್ನಿಸಲಾಗುತ್ತಿದೆ. ನೆರವು ಸಿಗುವುದು ಖಾತ್ರಿಯಾಗುತ್ತಿದ್ದಂತೆ ಎನ್‌ಡಿಆರ್‌ಎಫ್ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದೆ.

ಮತ್ತೂಂದೆಡೆ ಬಿಬಿಎಂಪಿ, ಅಗ್ನಿಶಾಮಕ ಮತ್ತು ತುರ್ತುಸೇವೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಂಯುಕ್ತವಾಗಿ ತಂಡಗಳಲ್ಲಿನ ಸಿಬ್ಬಂದಿಯನ್ನು ದ್ವಿಗುಣಗೊಳಿಸಲಾಗುವುದು ಎಂದು ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ “ಉದಯವಾಣಿ’ಗೆ ತಿಳಿಸಿದ್ದಾರೆ.  ಈ ಮಧ್ಯೆ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌, ಮೇಯರ್‌ ಮತ್ತು ಪಾಲಿಕೆ ಸದಸ್ಯರು ಜೆ.ಸಿ. ನಗರ, ಕುರುಬರಹಳ್ಳಿ, ನಲ್ವತ್ಕಣ್ಣು ಬ್ರಿಡ್ಜ್ಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು.

ರಾಜಕುಮಾರ್‌ ಆಲ್ಲ ಶಾಂತಕುಮಾರ್‌ 
ಶನಿವಾರ ರಾತ್ರಿ ಮಾಧ್ಯಮಗಳಿಗೆ ಸಿಕ್ಕಿದ್ದ ಪ್ರಾಥಮಿಕ ಮಾಹಿತಿ ಪ್ರಕಾರ ಕೊಚ್ಚಿ ಹೋದ ಯುವಕನನ್ನು ರಾಜಕುಮಾರ್‌ ಎಂದು ಹೇಳಲಾಗಿತ್ತು. ಆದರೆ, ಭಾನುವಾರ ಯುವಕನ ಸಂಪೂರ್ಣ ಮಾಹಿತಿ ಲಭ್ಯವಾಗಿದ್ದು, ಅವರ ಹೆಸರು ಶಾಂತಕುಮಾರ್‌ ಎಂದು ಗುರುತಿಸಲಾಗಿದೆ.  

Advertisement

ಕಳೆದೊಂದು ದಶಕದಲ್ಲಿ ಬಿಬಿಎಂಪಿ ವ್ಯಾಪ್ತಿಯ ಮೋರಿಹಾಗೂ ಕಾಲುವೆಯಲ್ಲಿ ಕೊಚ್ಚಿ ಹೋದವರ ವಿವರ
* 2005ರ ಅ. 25- ಮಣಿವಣ್ಣನ್‌ (28) ಮೋರಿಗೆ ಬಿದ್ದು ಸಾವು.
* 2009ರ ಮೇ 23- ಫ್ರೆಜರ್‌ಟೌನ್‌­ನಲ್ಲಿ ಬೈಕ್‌ನಿಂದ ಮೋರಿಗೆ ಬಿದ್ದ ವೆಂಕಟೇಶ್ವರುಲು (60) ಸಾವು.
* 2009ರ ಜೂ. 2- ಲಿಂಗರಾಜಪುರದಲ್ಲಿ ಮೋರಿಯಲ್ಲಿ ಕೊಚ್ಚಿಹೋಗಿ ಅಭಿಷೇಕ್‌ (6) ಸಾವು.
* 2009ರ ಸೆ. 17- ಒಂದೂವರೆ ವರ್ಷದ ಮಗು ವಿಜಯ್‌ ಮೋರಿಯಲ್ಲಿ ಕೊಚ್ಚಿ ಹೋಗಿ ಸಾವು.
* 2011ರ ಏ. 23-ನಾಯಂಡಹಳ್ಳಿ ಅಂಬೇಡ್ಕರ್‌ ಕಾಲೋನಿಯ ಕಿವುಡ ಮಣಿಕಂಠ (16) ಕಾಲುವೆಯಲ್ಲಿ ಕೊಚ್ಚಿ ಹೋಗಿ ಸಾವು.
* 2013ರ ಸೆ. 13- ಡೇರಿ ವೃತ್ತದ ಬಳಿ ಸಂಪಂಗಿರಾಮರೆಡ್ಡಿ (52) ಮೋರಿಯಲ್ಲಿ ಬಿದ್ದು ಮೃತ.
* 2013ರ ಡಿ. 15- ಸುಂಕೇನಹಳ್ಳಿ ಬಳಿ ಬಿಬಿಎಂಪಿ ಗುಂಡಿಗೆ ಬಿದ್ದು ಚಲನಚಿತ್ರ ಸಹನಟ ಅಶೋಕ್‌ ಸಾವು.
* 2014ರ ಅ. 6- ಗೀತಾಲಕ್ಷಿ (9) ಬಿಳೆಕಹಳ್ಳಿಯಲ್ಲಿ ಮೋರಿಗೆ ಬಿದ್ದು ಮಡಿವಾಳ ಕೆರೆಯಲ್ಲಿ ಶವವಾಗಿ ಪತ್ತೆ.
* 2015ರ ಅ.8- ಮಾನ್ಯತಾ ಟೆಕ್‌ಪಾರ್ಕ್‌ ಹಿಂಭಾಗದ ಕಾಲುವೆಯಲ್ಲಿ ಈಜಲು ಹೋಗಿ ಪ್ರಕಾಶ್‌ (15) ಸಾವು.
* 2017 ಮಾ. 1 – ಉಲ್ಲಾಳ ಬಳಿ ಆಯತಪ್ಪಿ ರಾಜಕಾಲುವೆಗೆ ಬಿದ್ದು ರಾಕೇಶ್‌ (7) ಮೃತ.

Advertisement

Udayavani is now on Telegram. Click here to join our channel and stay updated with the latest news.

Next