ಜಮಖಂಡಿ: ನಗರದಲ್ಲಿ ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ತಾಲೂಕುಮಟ್ಟದ ವಿವಿಧ ಸರಕಾರಿ ಇಲಾಖೆಗಳ 684 ಕೋವಿಡ್ 19 ಯೋಧರು ದಿನದ 16 ಗಂಟೆಗಳ ಸೇವೆ ಸಲ್ಲಿಸುತ್ತಿದ್ದಾರೆ.
ತಾಲೂಕಿನ ಪೊಲೀಸ್ ಇಲಾಖೆ, ಕಂದಾಯ. ನಗರಸಭೆ,ತಾಪಂ, ಆರೋಗ್ಯ ಇಲಾಖೆ, ಬಿಸಿಎಂ ಇಲಾಖೆ ಸಹಿತ 6 ರಿಂದ 8 ಇಲಾಖೆಗಳ ಕಾರ್ಮಿಕರು, ಆರಕ್ಷಕರು, ಆಶಾ ಕಾರ್ಯಕರ್ತೆಯರು, ಸರಕಾರಿ ನೌಕರರು ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಸಕ ಆನಂದ ನ್ಯಾಮಗೌಡ ಅಧಿಕಾರಿಗಳೊಂದಿಗೆ ನಿರಂತರ ಸಭೆ ಮಾಡುವ ಮೂಲಕ ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಆತ್ಮಸ್ಥೈರ್ಯ ತುಂಬಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಪೊಲೀಸ್ ಇಲಾಖೆ: ಶಹರ ಠಾಣೆಯ 2 ಪಿಎಸ್‌ಐ, 4 ಎಎಸ್‌ಐ, 76 ಆರಕ್ಷಕರು, ಗ್ರಾಮೀಣ ಠಾಣೆಯಲ್ಲಿ ಓರ್ವ ಪಿಎಸ್‌ಐ, 3 ಎಎಸ್‌ಐ, 42 ಆರಕ್ಷಕರು, ಸಾವಳಗಿ ಠಾಣೆಯಲ್ಲಿ ಪಿಎಸ್‌ಐ, 3 ಎಎಸ್‌ಐ, 22 ಆರಕ್ಷಕರು ಮತ್ತು ಓರ್ವ ಸಿಪಿಐ, ಡಿವೈಎಸ್‌ಪಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಲಾಕ್‌ಡೌನ್ ಮತ್ತು ಸೀಲ್ ಡೌನ್ ಪ್ರದೇಶದಲ್ಲಿ ಬಿಗಿ ಭದ್ರತೆ ವ್ಯವಸ್ಥೆ ಮಾಡುವ ಮೂಲಕ ಜನರಲ್ಲಿ ರೋಗದ ಕುರಿತು ಮನವರಿಕೆ ಮಾಡುತ್ತಿದ್ದಾರೆ.
35 ವಿವಿಧ ರೋಗಗಳ ತಜ್ಞ ವೈದ್ಯರು, 30 ಮೇಲ್ವಿಚಾರಕರು, 25 ಕಿರಿಯ ಆರೋಗ್ಯ ಸಹಾಯಕರು, 52 ಕಿರಿಯ ಮಹಿಳಾ ಆರೋಗ್ಯ ಸಹಾಯಕರು, 323 ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಕೊರೊನಾ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೊರಜಿಲ್ಲೆ, ರಾಜ್ಯ ಮತ್ತು ವಿದೇಶದಿಂದ ಆಗಮಿಸಿದ 7341 ಜನರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ನಗರದಲ್ಲಿ ನಾಲ್ವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ನಗರಸಭೆ ಸಿಬ್ಬಂದಿ, ಪೌರಕಾರ್ಮಿಕರು ತುರ್ತು ಪರಿಸ್ಥಿತಿಯಲ್ಲಿ ದಿನದ 24 ಗಂಟೆ ಕೆಲಸ ಮಾಡುತ್ತಿದ್ದಾರೆ. ಪೌರಾಯುಕ್ತ, ವ್ಯವಸ್ಥಾಪಕ, ಇಬ್ಬರು ಅಧಿಕಾರಿಗಳು, 99 ಜನ ಪೌರಕಾರ್ಮಿಕರು, 21 ಚಾಲಕರು, 15 ಹಾಲು ವಿತರಕರು, ಸೀಲ್‌ಡೌನ್ ಪ್ರದೇಶದಲ್ಲಿ ಆಹಾರ ವಿತರಣೆಗೆ 5 ಜನ ಸೇರಿದಂತೆ ಅಂದಾಜು 150 ಕಾರ್ಮಿಕರು ಕೋವಿಡ್ 19 ತಡೆಗಟ್ಟುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.
ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಸಹಾಯಕರು, ಕಂದಾಯ ನಿರೀಕ್ಷಕರು, ಉಪ ತಹಶೀಲ್ದಾರ್, ಶಿರಸ್ತೆದಾರರು ಸಹಿತ 141 ಸಿಬ್ಬಂದಿ ಕೊರೊನಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.