Advertisement

ಮುಂದುವರಿದ ಮಳೆ, ಪ್ರವಾಹ: ಮೂವರ ಸಾವು

02:08 AM Aug 09, 2019 | sudhir |

ಮಂಗಳೂರು/ಉಡುಪಿ/ಮಡಿಕೇರಿ/ಕಾಸರಗೋಡು: ಕರಾವಳಿ, ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಗುರುವಾರ ಮೂರು ಸಾವು ಸಂಭವಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಕಾಸರಗೋಡು ಜಿಲ್ಲೆ ಗಳ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿದೆ.

Advertisement

ಚೇರ್ಕಾಡಿಯ ಬೆನಗಲ್‌ ಹಾಡಿಮನೆ ಯಲ್ಲಿ ಗೋಡೆ ಕುಸಿದು ಮಹಿಳೆ ಮೃತಪಟ್ಟರೆ, ಮಂಗಳೂರು ಜಪ್ಪಿನಮೊಗರುವಿನಲ್ಲಿ ನೆರೆನೀರಿಗೆ ಬಿದ್ದು 18 ತಿಂಗಳ ಹಸುಳೆ ಸಾವಿಗೀಡಾಗಿದೆ. ಕೊಕ್ಕಡದಲ್ಲಿ ಪ್ರವಾಹದ ನಡುವೆಯೂ ಮರಳುಗಾರಿಕೆಗೆ ಇಳಿದ ಯುವಕ ಮುಳುಗಿ ಮೃತಪಟ್ಟಿದ್ದಾನೆ.

ಮಂಗಳೂರು, ಪುತ್ತೂರು ತಾಲೂಕಿ ನಲ್ಲಿ ಗುರುವಾರ ಮಳೆ ಪ್ರಮಾಣ ತುಸು ಕಡಿಮೆಯಿತ್ತು. ಆದರೆ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗಿರುವ ಕಾರಣ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು ಉಕ್ಕಿ ಹರಿಯುತ್ತಿವೆ.

ಕುಮಾರಧಾರಾ ನದಿ ಪಾತ್ರದ ಕುಲ್ಕುಂದ ಕಾಲನಿಯ ಹಲವು ಮನೆಗಳು
ಜಲಾವೃತಗೊಂಡಿವೆೆ. ಚೆಲ್ಯಡ್ಕ ಮುಳುಗು ಸೇತುವೆ ಮೂರನೇ ಬಾರಿಗೆ ಮುಳುಗಡೆ ಗೊಂಡಿದೆ. ಕಡಬದ ಹೊಸಮಠ ಹಳೆಯ ಮುಳುಗು ಸೇತುವೆ ಮುಳುಗಡೆಗೊಂಡಿತ್ತು.

ಕೊಯ್ನಾಡು ಹಾಗೂ ದೇವರಕೊಲ್ಲಿ ಮಧ್ಯೆ ಮರ ರಸ್ತೆಗೆ ಬಿದ್ದು 1 ತಾಸು ಸಂಚಾರ ವ್ಯತ್ಯಯಗೊಂಡಿತು.

Advertisement

ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಮುಂದಿನ ಎರಡು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಅರಬಿ ಸಮುದ್ರದಲ್ಲಿ ಅಲೆಗಳ ಅಬ್ಬರ 3.2 ರಿಂದ 3.9 ಮೀಟರ್‌ಗಳಷ್ಟು ಹೆಚ್ಚಾಗಿದ್ದು, ಮೀನುಗಾರರು ಸಮುದ್ರಕ್ಕೆ ತೆರಳುವುದನ್ನು ನಿಷೇಧಿಸಲಾಗಿದೆ. ಚಾರ್ಮಾಡಿ ಘಾಟಿ ರಸ್ತೆ ಮುಚ್ಚಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಎನ್‌ಡಿಆರ್‌ಎಫ್‌ ತಂಡ ಸಜ್ಜುಗೊಂಡಿದ್ದು, ಮಂಗಳೂರು, ಸುಬ್ರಹ್ಮಣ್ಯದಲ್ಲಿ ತಲಾ 13 ಜನರ ತಂಡ ಸನ್ನದ್ಧಗೊಂಡಿದೆ.

ಪರಿಹಾರ ಕೇಂದ್ರ ಆರಂಭ
ಈಗಾಗಲೇ ಸುಳ್ಯ ಜಿಲ್ಲೆಯ ಕಲ್ಮಕಾರು ಶಾಲಾ ರಂಗ ಮಂದಿರದಲ್ಲಿ ಪರಿಹಾರ ಕೇಂದ್ರ ಆರಂಭಿಸಲಾಗಿದ್ದು, 8 ಕುಟುಂಬದ 25 ಮಂದಿ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆರಂಭಿಸಿದ ಪರಿಹಾರ ಕೇಂದ್ರದಲ್ಲಿ 6 ಕುಟುಂಬದ 18 ಮಂದಿ ಇದ್ದಾರೆ.

ಉಡುಪಿ ಜಿಲ್ಲೆಯಲ್ಲೂ ಗುರುವಾರ ಉತ್ತಮ ಮಳೆ ಸುರಿದಿದೆ. ಬ್ರಹ್ಮಾವರ, ಕೊಲ್ಲೂರು, ಕೋಟೇಶ್ವರ, ತೆಕ್ಕಟ್ಟೆ, ಸಿದ್ದಾಪುರ, ಪಡುಬಿದ್ರಿ, ಕಾಪು, ಕಟಪಾಡಿ, ಶಿರ್ವ ಭಾಗ ಗಳಲ್ಲಿ ಉತ್ತಮ ಮಳೆಯಾಯಿತು.

ಅಪಾಯದ ಮಟ್ಟದಲ್ಲಿ ನೇತ್ರಾವತಿ
ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳಗೊಂಡ ಪರಿಣಾಮ ಬಂಟ್ವಾಳ ನಗರ, ಪಾಣೆಮಂಗಳೂರು ಸೇರಿದಂತೆ ಗ್ರಾಮೀಣ ಪ್ರದೇಶಗಳು ಗುರುವಾರ ಜಲಾವೃತಗೊಂಡಿದ್ದವು.

ಗುರುವಾರ ಬಂಟ್ವಾಳದಲ್ಲಿ ನದಿ ನೀರು ಅಪಾಯದ ಮಟ್ಟ ಮೀರಿ ಹರಿದಿದ್ದು, 8.9 ಮೀ. ದಾಟಿತ್ತು. ಪಾಣೆಮಂಗಳೂರು ಸಮೀಪದ ಆಲಡ್ಕದಲ್ಲಿ ಸುಮಾರು 10 ಮನೆಗಳು ಪ್ರವಾಹದ ನೀರಿಗೆ ಮುಳುಗಡೆಯಾಗಿದೆ. ಮನೆಯವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.

ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿ, ಮಾಜಿ ಸಚಿವ ಬಿ. ರಮಾನಾಥ ರೈ, ಜಿಲ್ಲಾಧಿ ಕಾರಿ ಶಶಿಕಾಂತ ಸೆಂಥಿಲ್‌ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಗುರುವಾರ ತಾಲೂಕಿನ 36 ಮನೆಗಳು ಸೇರಿದಂತೆ ಒಟ್ಟು 53 ಹಾನಿ ಪ್ರಕರಣಗಳು ವರದಿಯಾಗಿವೆೆ.

ಮುಟ್ಲುಪಾಡಿ: 1.50 ಕೋ.ರೂ. ನಷ್ಟ
ಅಜೆಕಾರು: ಅಂಡಾರು ಕಂದಾಯ ಗ್ರಾಮದ ಮುಟ್ಲುಪಾಡಿಯಲ್ಲಿ ಆ. 7ರಂದು ಸಂಜೆ ಬೀಸಿದ ಭಾರೀ ಬಿರುಗಾಳಿಯಿಂದ 1.50 ಕೋಟಿ ನಷ್ಟ ಉಂಟಾಗಿದೆ.
ಮುಟ್ಲುಪಾಡಿಯ ದೇವಸ್ಥಾನಬೆಟ್ಟು, ನವಗ್ರಾಮ ಕಾಲನಿ, 5 ಸೆಂಟ್ಸ್‌ ಕಾಲನಿಯ ಮನೆಗಳ ಮೇಲ್ಛಾವಣಿ ಭಾರೀ ಗಾಳಿಗೆ ಸಂಪೂರ್ಣ ಹಾನಿಗೊಂಡಿದ್ದರೆ ಈ ಭಾಗದ ಕೃಷಿಯೂ ನಾಶಗೊಂಡಿದೆ.

ಸಹಾಯಕ್ಕೆ ಸಿದ್ಧ: ರಘುಪತಿ ಭಟ್‌
ಮಳೆಯಿಂದಾಗಿ ಯಾವುದೇ ಅನಾಹುತ ಸಂಭವಿಸಿದರೂ ಸರಕಾರ ನಿಮ್ಮ ಜತೆಗೆ ಇರುತ್ತದೆ. ಕ್ಷೇತ್ರದಲ್ಲಿ ಯಾವುದೇ ಘಟನೆಗಳು ಸಂಭವಿಸಿದರೂ ಸಹಾಯಕ್ಕಾಗಿ ದೂ.ಸಂ. 9980431566 ಸಂಪರ್ಕಿಸಬಹುದು ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್‌ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇಂದು ಡಿ.ವಿ. ಭೇಟಿ
ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ ಅವರು ಮಳೆ ಬಾಧಿತವಾಗಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಶುಕ್ರವಾರ ಸಂಚರಿಸಿ ಹಾನಿಯನ್ನು ವೀಕ್ಷಿಸುವರು.

ಜಾಲತಾಣಗಳಲ್ಲಿ ಸುಳ್ಳು ಸುದ್ದಿ
ದ.ಕ. ಜಿಲ್ಲಾಧಿಕಾರಿಗಳು ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಆ. 9ರಂದು ರಜೆ ಘೋಷಣೆ ಮಾಡುವ ಮುನ್ನವೇ “ರಜೆ ಸಾರಲಾಗಿದೆ’ ಎಂಬ ನಕಲಿ ಪೋಸ್ಟ್‌ ಗುರುವಾರ ಸಂಜೆಯವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಗೊಂದಲ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆದರೆ ರಾತ್ರಿ 8 ಗಂಟೆ ವೇಳೆಗೆ ಜಿಲ್ಲಾಧಿಕಾರಿಗಳು ಅಧಿಕೃತವಾಗಿ ರಜೆ ಘೋಷಿಸಿದ್ದಾರೆ. ಅದೇ ರೀತಿ ಕಟೀಲು ದೇಗುಲಕ್ಕೂ ಪ್ರವಾಹ ನುಗ್ಗಿರುವುದಾಗಿ ವದಂತಿ ಹಬ್ಬಿತ್ತು.

ಇನ್ನೂ 3 ದಿನ ರೈಲಿಲ್ಲ
ಮಂಗಳೂರು: ಶಿರಾಡಿ ಘಾಟಿ ರೈಲುಮಾರ್ಗದಲ್ಲಿ ಸಿರಿಬಾಗಿಲು-ಸುಬ್ರಹ್ಮಣ್ಯ ರೋಡ್‌ ಮಧ್ಯೆ ಗುರುವಾರವೂ ಭೂಕುಸಿತ ಮುಂದುವರಿದಿದ್ದು ಈ ಮಾರ್ಗದ ಎಲ್ಲ ರೈಲುಗಳ ಸಂಚಾರವನ್ನು ಆ. 11ರ ವರೆಗೆ ರದ್ದುಗೊಳಿಸಲಾಗಿದೆ.
ರೈಲು ಹಳಿಗಳ ಮೇಲೆ ಗುರುವಾರ ಬೆಳಗ್ಗೆ ಕಲ್ಲು, ಮರಗಳೊಂದಿಗೆ 25,000 ಕ್ಯುಬಿಕ್‌ ಮೀ. ಅಧಿಕ ಮಣ್ಣು ಕುಸಿದು ಬಿದ್ದಿದೆ. ತೆರವು ಕಾರ್ಯ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next