Advertisement

ಮುಂದುವರಿದ ಮಾರ್ಕೆಟ್ ಒತ್ತುವರಿ ತೆರವು

12:23 PM Mar 31, 2019 | Lakshmi GovindaRaju |

ಬೆಂಗಳೂರು: ನಗರದ ಕೃಷ್ಣರಾಜೇಂದ್ರ ಮಾರುಕಟ್ಟೆ (ಕೆ.ಆರ್‌.ಮಾರುಕಟ್ಟೆ) ವ್ಯಾಪ್ತಿಯ ರಸ್ತೆ, ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿ ನಡೆಸುತ್ತಿದ್ದ ಅಂಗಡಿ, ಮಳಿಗೆಗಳ ತೆರವು ಕಾರ್ಯಾಚರಣೆ ಶನಿವಾರವೂ ಮುಂದುವರಿಯಿತು.

Advertisement

ಹೈಕೋರ್ಟ್‌ ಸೂಚನೆಯಂತೆ ಬಿಬಿಎಂಪಿ ಆಯುಕ್ತರು ಮಾರುಕಟ್ಟೆಯ ಪಾದಚಾರಿ ಮಾರ್ಗ, ವಾಹನ ಪಾರ್ಕಿಂಗ್‌, ರಸ್ತೆ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದ ಮಳಿಗೆಗಳನ್ನು ತೆರವುಗೊಳಿಸುವುದಕ್ಕೆ ಆದೇಶಿಸಿದ್ದರು.

ಅದರಂತೆ ಶುಕ್ರವಾರ ಮತ್ತು ಶನಿವಾರ ಕಾರ್ಯಾಚರಣೆ ನಡೆಸಿ ಒಟ್ಟು 271 ಅನಧಿಕೃತ ವ್ಯಾಪಾರಿ ಮಳಿಗೆ ಹಾಗೂ ಸಾವಿರಕ್ಕೂ ಒತ್ತುವರಿ ಮಳಿಗೆಗಳನ್ನು ತೆರವುಗೊಳಿಸಿದರು. ಈ ವರೆಗೆ ಶೇ.90 ರಷ್ಟು ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ ಎಂಟು ಗಂಟೆಗೆ ವಿಶೇಷ ಆಯಕ್ತ ರವೀಂದ್ರ ಮತ್ತು ಜಂಟಿ ಆಯುಕ್ತ ಸಫ‌ರಾಜ್‌ ಖಾನ್‌ ನೇತೃತ್ವದಲ್ಲಿ ಆರಂಭವಾದ ತೆರವು ಕಾರ್ಯಾಚರಣೆಗೆ 28 ಲಾರಿ ಮತ್ತು ಟ್ಯಾಕ್ಟರ್‌, 4 ಕಾಂಪ್ಯಾಕ್ಟರ್‌, 4 ಜೆಸಿಬಿ, 8 ಗ್ರಾಸ್‌ ಕಟರ್‌ಗಳನ್ನು ಬಳಸಲಾಯಿತು.

ಬಿಬಿಎಂಪಿಯ ಅರಣ್ಯ ವಿಭಾಗದ 12 ತಂಡ, 30 ಮಾರ್ಷಲ್ಸ್‌, ಒಟ್ಟು 350 ಬಿಬಿಎಂಪಿ ಸಿಬ್ಬಂದಿ ತೆರವು ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು. 110 ಪೊಲೀಸ್‌ ಸಿಬ್ಬಂದಿ ಕಾರ್ಯಾಚರಣೆಗೆ ಭದ್ರತೆ ನೀಡಿದರು. ಮಧ್ಯಾಹ್ನ ಎರಡು ಗಂಟೆಯ ವರೆಗೆ ಕಾರ್ಯಾಚರಣೆ ನಡೆಸಲಾಯಿತು. ಒಟ್ಟು 78 ಲೋಡ್‌ ತ್ಯಾಜ್ಯವನ್ನು ವಿಲೇವಾರಿ ಮಾಡಲಾಯಿತು.

Advertisement

ಶುಕ್ರವಾರ ಮಾರುಕಟ್ಟೆಯ ಸುತ್ತದ ರಸ್ತೆಯಲ್ಲಿ ವ್ಯಾಪಾರಿಗಳನ್ನು ತೆರವು ಮಾಡಿ ಡ್ರೈ ವೇ (ಸಂಚಾರ ಮುಕ್ತ) ನಿರ್ಮಿಸಲಾಯಿತು. ಶನಿವಾರ ಮೆಟ್ರೋ ನಿಲ್ದಾಣದಿಂದ ಕೆ.ಆರ್‌. ಮಾರುಕಟ್ಟೆ ಆಗಮಿಸುವ ರಸ್ತೆ ಹಾಗೂ ಹಣ್ಣಿನ ಮಾರುಕಟ್ಟೆಯ ರಸ್ತೆ, ಎತ್ತರಿಸಿದ ನೆಲ ಮಹಡಿ (ಅಪರ್‌ ಬೇಸ್‌ಮೆಂಟ್‌), ಒಂದನೇ ಮಹಡಿ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೋಮವಾರವೂ ಕಾರ್ಯಾಚರಣೆ: ಒತ್ತುವರಿ ತೆರವು ಕಾರ್ಯ ಭಾನುವಾರ ಸ್ಥಗಿತಗೊಳಿಸಲಾಗುವುದು ಮತ್ತೆ ಸೋಮವಾರ ಆರಂಭಿಸಲಾಗುವುದು. ತೆರವು ಕಾರ್ಯಾಚರಣೆ ಪೂರ್ಣಗೊಂಡ ನಂತರ, ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು.

ಹೈಕೋರ್ಟ್‌ ಆದೇಶ ಹಾಗೂ ಬಿಬಿಎಂಪಿ ನಿಯಮದ ಅನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೆ ಮತ್ತೆ ವ್ಯಾಪಾರಿಗಳಿಗೆ ತೆರವು ಕಾರ್ಯಾಚರಣೆ ಬಗ್ಗೆ ಎಚ್ಚರಿಕೆ ನೀಡುವುದಕ್ಕೆ ಸಾಧ್ಯವಿಲ್ಲ. ಒಂದು ವೇಳೆ ಒತ್ತುವರಿ ಮಾಡಿಕೊಂಡಿದ್ದು ಕಂಡುಬಂದರೆ ತೆರವುಗೊಳಿಸಲಾಗುವುದು ಎಂದು ಹೇಳಿದಾರೆ.

ರಸ್ತೆಯಲ್ಲೇ ವ್ಯಾಪಾರ ಶುರು: ಬಿಬಿಎಂಪಿ ಅಧಿಕಾರಿಗಳು ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ತೆರವು ಕಾರ್ಯಾಚರಣೇ ನಡೆಸಿದರು. ತದ ನಂತರ ವ್ಯಾಪಾರಿಗಳು ರಸ್ತೆ ಉದ್ದಕ್ಕೂ ನಿಲ್ಲಿಸಲಾಗಿದ್ದ ಪೊಲೀಸ್‌ ವ್ಯಾನ್‌, ಬಿಬಿಎಂಪಿಯ ಜೆಸಿಬಿ, ಲಾರಿಗಳ ನೆರಳಿನಲ್ಲಿ ಕುಳಿತು ವ್ಯಾಪಾರ ಆರಂಭಿಸಿದರು.

ನೋಡ ನೋಡುತ್ತಿದಂತೆ ಕೆ.ಆರ್‌.ಮಾರುಕಟ್ಟೆ ಮತ್ತೆ ಯಥಾ ಸ್ಥಿತಿಗೆ ಮರಳಿತು. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ, ಏನು ಮಾಡೋಕಾಗುತ್ತೆ? ಮತ್ತೆ ವ್ಯಾಪಾರ ಮಾಡುತ್ತಿದ್ದಾರೆ. ಅವರನ್ನು ಅರೆಸ್ಟ್‌ ಮಾಡಿಸುವುದಕ್ಕೆ ಸಾಧ್ಯವೇ ಎಂದು ಮರುಪ್ರಶ್ನಿಸಿದರು.

ಒತ್ತುವರಿ ತೆರವು ವಿವರ
-ಮಹಡಿ ಪ್ರಕರಣಗಳು
-ನೆಲ ಮಹಡಿ 494
-ಅಪ್ಪರ್‌ ಬೇಸ್‌ಮೆಂಟ್‌ 528
-ಮೊದಲ ಮಹಡಿ 256 (ಚದರ ಅಡಿ)

Advertisement

Udayavani is now on Telegram. Click here to join our channel and stay updated with the latest news.

Next