Advertisement

ಮುಂದುವರಿದ ಕಾಡಾನೆ ದಾಂದಲೆ

12:47 PM Jun 16, 2018 | |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಗ್ರಾಮಗಳಲ್ಲಿ ಕಾಡಾನೆಗಳ ದಾಂದಲೆ ಮುಂದುವರೆದಿದ್ದು, ಶುಕ್ರವಾರ ಬೆಳಗಿನ ಜಾವ ತಾಲೂಕಿನ ನೇರಳಕುಪ್ಪೆ ಗ್ರಾಮದಲ್ಲಿ ತೋಟದ ಬೆಳೆಗಳನ್ನು ತಿಂದು-ತುಳಿದು ತೆಂಗಿನ ಮರ ಸಿಗಿದು ಹಾಕಿರುವ ಘಟನೆ ನಡೆದಿದೆ.

Advertisement

ಹುಣಸೂರು ತಾಲೂಕಿನ  ಹನಗೋಡು ಹೋಬಳಿಯ ನೇರಳಕುಪ್ಪೆ ಗ್ರಾಮದ ಗುರುರಾಜ್‌ ಮತ್ತು ಕೃಷ್ಣಮೂರ್ತಿ ಇತರರ ತೋಟಕ್ಕೆ ನುಗ್ಗಿದ ಒಂಟಿ ಸಲಗ ಮನೆ ಮಂದಿಯನ್ನು ಗಾಬರಿಗೊಳಿಸಿ ನಂತರ ಮನೆ ಬಳಿ ಇದ್ದ ಮಾವಿನ ಮರವನ್ನು ಬುಡ ಸಮೇತ ಉರುಳಿಸಿದೆ. ಒಂದು ಸಸಿ ಸೇರಿದಂತೆ ಮೂರು ತೆಂಗಿನ ಮರವನ್ನು ತಿಂದು, ಸುಳಿಯನ್ನು ಸಿಗಿದು ಹಾಕಿದೆ.

ಇದೇ ಗ್ರಾಮದ ಹಲಗೇಗೌಡರಿಗೆ ಸೇರಿದ ಶುಂಠಿ ಮತ್ತು ಜೋಳದ ಬೆಳೆಯನ್ನು ತುಳಿದು ನಾಶಪಡಿಸಿದೆ. ಉದ್ಯಾನವನದ ವೀರನಹೊಸಹಳ್ಳಿ ವಲಯದಿಂದ ಚಂದನಗಿರಿ ವರೆಗೆ ರೈಲ್ವೆ ಕಂಬಿಯ ತಡೆಗೋಡೆ ನಿರ್ಮಿಸಲಾಗಿದೆ. ಇದೀಗ ಹುಣಸೂರು ವಲಯದ ನೇರಳಕುಪ್ಪೆ-ಕಾಳಬೂಚನಹಳ್ಳಿ ಭಾಗದಿಂದ ಕಾಡಾನೆಗಳು ಟ್ರಂಚ್‌(ಆನೆಕಂದಕ)ದಾಟಿ ಹೊರಬರಲಾರಂಭಿಸಿದ್ದು,

ಮುಂದೆ ಜೋಳ,ರಾಗಿ ಮತ್ತಿತರ ದ್ವಿಧಳ ಧಾನ್ಯ ಬೆಳೆಗಳು ಕಾಡಾನೆಗಳ ಪಾಲಾಗಿರುವುದರಿಂದ ತಕ್ಷಣವೇ ತಡೆಗೋಡೆ ನಿರ್ಮಿಸಬೇಕು ಇಲ್ಲವೇ ಆನೆ ಕಾಯಲು ಹೆಚ್ಚಿನ ಸಿಬ್ಬಂದಿ ನೇಮಿಸಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು  ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next