Advertisement

ಸರಕಾರದ ಅಸ್ಥಿರತೆಗೆ ಬಿಜೆಪಿಯಿಂದ ನಿರಂತರ ಯತ್ನ: ಡಿಕೆಶಿ

01:29 AM Feb 24, 2019 | Team Udayavani |

 ಶಿವಮೊಗ್ಗ /ರಾಮನಗರ: ರಾಜ್ಯದ ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯಿಂದ ನಿರಂತರ ಯತ್ನ ನಡೆಯುತ್ತಲೇ ಇದೆ ಎಂದು ಆರೋಪಿಸಿರುವ ಸಚಿವ ಡಿ.ಕೆ.ಶಿವಕುಮಾರ್‌, ಮೈತ್ರಿ ಸರಕಾರ ಉರುಳಿಸಲು ಸಾಧ್ಯವಿಲ್ಲ. ನಾವು ರೆಡಿಮೇಡ್‌ ಗಂಡುಗಳು ಇಲ್ಲಿದ್ದೇವೆ. ಇನ್ಯಾವ ಗಂಡೂ ಇಲ್ಲಿಲ್ಲ ಎಂದು ಕುಟುಕಿದ್ದಾರೆ. ಈ ಮಧ್ಯೆ ಶಿವಮೊಗ್ಗದಲ್ಲಿ ಮಾತನಾಡಿದ ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ, ಮೈತ್ರಿ ಸರಕಾರ ಅಸ್ಥಿರಗೊಳಿಸಲು ನಾವು ಯತ್ನಿಸುತ್ತಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಕಾಂಗ್ರೆಸ್‌ನಿಂದ ಋಣಮುಕ್ತರಾದರೆ ಸಾಕು ಎನ್ನುತ್ತಿದ್ದಾರೆ ಎಂದು ಹೇಳುವ ಮೂಲಕ ಹೊಸ ಬಾಂಬ್‌ ಸಿಡಿಸಿದ್ದಾರೆ.

Advertisement

ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಿಕೆಶಿ, ರಾಜ್ಯದ ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ರಾಜ್ಯಾದ್ಯಕ್ಷ ಯಡಿಯೂರಪ್ಪ ನಿರಂತರ ಯತ್ನ ನಡೆಸಿದ್ದಾರೆ. ಆದರೆ ಎಚ್‌.ಡಿ.ಕುಮಾರಸ್ವಾಮಿ ಸಹಿತ  ನಾವು ನಮ್ಮ ವಿದ್ಯೆ ಖರ್ಚು ಮಾಡಿಲ್ಲ. ಕೊನೆವರೆಗೂ ಕಾದು ನಮ್ಮ ವಿದ್ಯೆ ಖರ್ಚು ಮಾಡಲು ತೀರ್ಮಾನಿಸಿದ್ದೇವೆ. ಮೈತ್ರಿ ಸರಕಾರ ಉರುಳಿಸಲು ಸಾಧ್ಯವಿಲ್ಲ. ನಾವು ರೆಡಿಮೇಡ್‌ ಗಂಡುಗಳು ಇಲ್ಲಿದ್ದೇವೆ. ಇನ್ಯಾವ ಗಂಡೂ ಇಲ್ಲಿಲ್ಲ ಎಂದು ಕುಟುಕಿದರು.
ಸರಕಾರದ ಅಸ್ಥಿರತೆ ವಿಚಾರದಲ್ಲಿ ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ರನ್ನು ತರಾಟೆಗೆ ತೆಗೆದುಕೊಂಡ ಡಿ.ಕೆ.ಶಿವಕುಮಾರ್‌, ಇಲ್ಲಿಯವರೊಬ್ಬರು ಬೆಂಗ ಳೂರಿನಲ್ಲಿ ಕುಳಿತು ನಮ್ಮನ್ನು ಕೆಳಗಿಳಿಸಿ ಅಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸುತ್ತಲೇ ಇದ್ದಾರೆ. ಇದೇ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆಪರೇಷನ್‌ ಕಮಲ ನಡೆಸಿ ನಮ್ಮವರೊಬ್ಬರನ್ನು ಸೆಳೆದುಕೊಂಡಿದ್ದರು. ಆದರೆ ಬಿಜೆಪಿಗೆ ಹೋದವರು ಅವರ ಸಹವಾಸ ಸಾಕು ಅಂತ ಡಿ.ಕೆ.ಸುರೇಶ್‌ ಮತ್ತು ಎಚ್‌. ಡಿ.ಕುಮಾರಸ್ವಾಮಿಗೆ ತಿಳಿಸಿ ವಾಪಸ್‌ ಬಂದಿದ್ದಾರೆ ಎಂದು ಹರಿಹಾಯ್ದರು.

ಬಿಜೆಪಿ ಜತೆ ಮೈತ್ರಿಗೆ ಉತ್ಸುಕ
ಶಿವಮೊಗ್ಗದಲ್ಲಿ ಪತ್ರಕರ್ತರ ಜತೆ ಮಾತ ನಾಡಿದ ಬಿಜೆಪಿಯ ಕೆ.ಎಸ್‌.ಈಶ್ವರಪ್ಪ, ಮುಖ್ಯ ಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್‌ನಿಂದ ಋಣ ಮುಕ್ತರಾದರೆ ಸಾಕು ಎನ್ನುತ್ತಿದ್ದಾರೆ. ಕುಮಾರ ಸ್ವಾಮಿಯವರಿಗೆ ಕಾಂಗ್ರೆಸ್‌ ಜತೆಗಿನ ದೋಸ್ತಿ ಬಿಸಿತುಪ್ಪವಾಗಿದೆ. ಸ್ವತಃ ಕುಮಾರಸ್ವಾಮಿಯವರೇ ಈ ಬಗ್ಗೆ ಹೇಳಿಕೊಂಡಿದ್ದಾರೆ. ನಾಳೆ ಕೇಳಿದರೆ ಅವರು ಇಲ್ಲ ಎನ್ನಬಹುದು. ಆದರೆ ನಾನು ಹೇಳಿದ್ದು ಸುಳ್ಳು ಅಂತ ಆತ್ಮಸಾಕ್ಷಿಗೆ ಅನುಗುಣವಾಗಿ ಅವರು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು. ಬಿಜೆಪಿ ಬಗ್ಗೆ ಸುಳ್ಳು ಆರೋಪ ಹೊರಿಸುತ್ತಿರುವ ಸಿದ್ದರಾಮಯ್ಯನವರು ರಾಜ್ಯದ ಜನರಲ್ಲಿ  ಕ್ಷಮೆ ಕೇಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next