Advertisement

ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

06:15 PM Feb 28, 2022 | Team Udayavani |

ಸವಣೂರು: ಕ್ಷೇತ್ರದ ಜನತೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರ ಆಶೀರ್ವಾದದಿಂದ ನಾನೆಂದೂ ಎಣಿಸಿರದ ಮುಖ್ಯಮಂತ್ರಿಯಾಗುವ ಭಾಗ್ಯ ಸಿಕ್ಕಿದೆ. ಇದರೊಂದಿಗೆ ನಾಡಿನ ಜನತೆ ನಂಬಿಕೆಯಿಟ್ಟು ನನ್ನ ಹೆಗಲ ಮೇಲೆ ಹೆಚ್ಚಿನ ಜವಾಬ್ದಾರಿ ಹಾಕಿದ್ದಾರೆ ಎಂದು ನಾನು ಭಾವಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಪಟ್ಟಣದ ದೊಡ್ಡ ಹುಣಸೆ ಕಲ್ಮಠದಲ್ಲಿ ರವಿವಾರ ನಡೆದ ಗುರು ರಾಚೋಟೇಶ್ವರ ಮಹಾಸ್ವಾಮಿಗಳ 45ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಅಭಿವೃದ್ಧಿ ನಿರಂತರ ಪ್ರಕ್ರಿಯೆ. ನನ್ನ ಕ್ಷೇತ್ರದ ಅಭಿವೃದ್ಧಿಯನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದೇನೆ. ಬಡವರಿಗೆ, ಮಹಿಳೆಯರಿಗೆ, ಯುವಕರಿಗೆ ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಸಹಾಯ ಮಾಡಲು ಬದ್ಧನಾಗಿದ್ದೇನೆ ಎಂದರು.

ರಾಜ್ಯ ಕಟ್ಟಲು ನಿಮ್ಮ ಮನೆ ಮಗನನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿಸಿ ಕಳುಹಿಸಿದ್ದೀರಿ. ಆದ್ದರಿಂದ, ತಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ ಎಂದು ಕ್ಷೇತ್ರದ ಮತದಾರರಲ್ಲಿ ಕೇಳಿಕೊಂಡರು.

ಪರಮ ಪೂಜ್ಯರ ಆಶೀರ್ವಾದದಿಂದ ನಾನು ಶಾಸಕನಾಗಿ, ಮಂತ್ರಿಯಾಗಿ ಇದೀಗ ಮುಖ್ಯಮಂತ್ರಿಯಾಗಿ ಭಾಗವಹಿಸುವ ಸೌಭಾಗ್ಯ ನನ್ನದಾಗಿದೆ. ಪ್ರತಿ ವರ್ಷದ ಶರಣ ಸಂಸ್ಕೃತಿಯಿಂದ ನಾನು ಪ್ರೇರಣೆ ಪಡೆಯುತ್ತಾ ಬಂದಿದ್ದೇನೆ. ಶರಣರ ಮಾತುಗಳಲ್ಲಿ ಆತ್ಮ ಶೋಧನೆಯ ಅಂಶಗಳಿರುತ್ತವೆ. ಆತ್ಮ ಶೋಧನೆ ಆತ್ಮ ಶುದ್ಧೀಕರಣಕ್ಕೆ ಮುಖ್ಯವಾಗಿದೆ.

ಸರಿ ತಪ್ಪಿನ ಶೋಧನೆ ಮಾಡದೇ ಮನಸ್ಸಿನ ಶುದ್ಧೀಕರಣವಾಗುವುದಿಲ್ಲ. ಅದಕ್ಕಾಗಿ ಯೋಗ್ಯ ಮನಸ್ಥಿತಿ, ಆತ್ಮದ ಅರಿವು, ಬಾಹ್ಯದ ಅನುಭವ ಹಾಗೂ ಮುಖ್ಯವಾಗಿ ಶಿವಶರಣರ ಧಾರ್ಮಿಕ ಸಂಸ್ಕೃತಿ ಅವಶ್ಯವಾಗಿದೆ ಎಂದರು. ಚಿತ್ರದುರ್ಗ ಮುರಘಾಮಠದ ಜಗದ್ಗುರು ಡಾ|ಶಿವಮೂರ್ತಿ ಮುರಘಾ ಶರಣರು ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಗಂಗಾವತಿ ಕಲ್ಮಠದ ಡಾ|ಕೊಟ್ಟೂರ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು.

Advertisement

ಸಮಾರಂಭದಲ್ಲಿ ಅಥಣಿಯ ಮೋಟಗಿಮಠದ ಪ್ರಭು ಚನ್ನಬಸವ ಮಹಾಸ್ವಾಮಿಗಳಿಗೆ ಶ್ರೀಮಠದಿಂದ ನೀಡಲಾಗುವ ಕಲ್ಪವೃಕ್ಷ ಶ್ರೀ ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರದಾನ ಮಾಡಿ ಗೌರವಿಸಿದರು.ಸಮಾರಂಭದ ನೇತೃತ್ವ ವಹಿಸಿದ್ದ ಚನ್ನಬಸವ ಮಹಾಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಚಲನಚಿತ್ರ ನಿರ್ಮಾಪಕ ಡಾ| ಗಂಡಸಿ ಸದಾನಂದ ಸ್ವಾಮಿ, ರಾಷ್ಟ್ರೀಯ ಪಂಚಮಸಾಲಿ ಯುವ ಘಟಕದ ಅಧ್ಯಕ್ಷ ರಾಜಶೇಖರ ಮೆಣಸಿನಕಾಯಿ ಮಾತನಾಡಿದರು.

ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪೂರ ವಚನಗಳ ಮೌಲ್ಯಗಳ ಕುರಿತು ಉಪನ್ಯಾಸ ನೀಡಿದರು. ಪುರಸಭೆ ಸದಸ್ಯ ಸದಾನಂದ ಕೆಮ್ಮಣ್ಣಕೇರಿ, ದೇವರಗುಡ್ಡದ ಪ್ರಧಾನ ಅರ್ಚಕ ಸಂತೋಷ ಗುರೂಜಿ, ಡಾ|ಹರಿಪ್ರಸಾದ, ನಿವೃತ್ತ ಎಸಿಪಿ ಪೀರಪ್ಪ ಎಸ್‌. ಗಚ್ಚಿನಕಟ್ಟಿ, ಎನ್‌.ಜಿ.ಶ್ರೀನಿವಾಸ, ಯೋಗೇಂದ್ರ ಜಂಬಗಿ ಉಪಸ್ಥಿತರಿದ್ದರು. ವನಿತಾ ಪರಮೇಶ್ವರ ಕೆ. ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಡಿ.ಎಫ್‌.ಬಿಂದಲಗಿ ನಿರೂಪಿಸಿದರು.

ತತ್ವಜ್ಞಾನಿ ರಾಜನಾಗಿರಬೇಕು
ರಾಜ ತತ್ವಜ್ಞಾನಿಯಾದಾಗ ಮಾತ್ರ ರಾಜ್ಯ ಅಭಿವೃದ್ಧಿಯಾಗಲು ಸಾಧ್ಯ. ತತ್ವಾಧಾರಿತ ಆಡಳಿತದಿಂದ ಜನಕಲ್ಯಾಣವಾಗುತ್ತದೆ. ಆದ್ದರಿಂದ ಶರಣರ ಮಾತುಗಳು ಪ್ರೇರಣೆ ಮಾತ್ರವಲ್ಲ ಆತ್ಮಶೋಧನೆಗೆ ದಾರಿ ಮಾಡಿಕೊಡುತ್ತದೆ. ತತ್ವಾದರ್ಶಗಳಿಂದ ಬಾಳಿದ ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪನವರನ್ನು ಮುಖ್ಯಮಂತ್ರಿಯನ್ನಾಗಿಸಿದ ಕ್ಷೇತ್ರವಿದು. ಅಂತಹವರನ್ನು ಈ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆ ಮಾಡುವ ಸಂದರ್ಭದಲ್ಲಿ ಎದುರಾಗಿದ್ದ ಸಮಸ್ಯೆಗಳನ್ನು ನಿವಾರಿಸಿ ಆಯ್ಕೆಯನ್ನು ಸರಳಗೊಳಿಸುವಲ್ಲಿ ನಮ್ಮ ತಂದೆ ಮಾಜಿ ಮುಖ್ಯಮಂತ್ರಿ ಎಸ್‌.ಆರ್‌.ಬೊಮ್ಮಾಯಿ ಅವರ ಶ್ರಮವೂ ಇತ್ತು ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಮರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next