Advertisement

ಮರಗಳು ಉರುಳಿ ರಸ್ತೆ ಸಂಚಾರ, ವಿದ್ಯುತ್‌ ಸಂಪರ್ಕ ನಿರಂತರ ಕಡಿತ

12:17 AM Aug 08, 2019 | Sriram |

ಅಜೆಕಾರು: ಕಾರ್ಕಳ ತಾಲೂಕಿನಾದ್ಯಂತ ರಸ್ತೆಯಂಚಿನ ಅಪಾಯಕಾರಿ ಮರಗಳು ಕಳೆದ ಒಂದು ವಾರದಿಂದ ನಿರಂತರವಾಗಿ ಉರುಳಿ ಬೀಳುತ್ತಿದ್ದು ರಸ್ತೆ ಸಂಚಾರ ಸ್ಥಗಿತಗೊಳ್ಳುವ ಜತೆಗೆ ವಿದ್ಯುತ್‌ ಸಂಪರ್ಕವು ನಿರಂತರವಾಗಿ ಕಡಿತಗೊಳ್ಳುತ್ತಿದೆ.

Advertisement

ತಾಲೂಕಿನ ವಿವಿಧೆಡೆ ರಸ್ತೆ ವಿಸ್ತರಣೆ ಸಂದರ್ಭ ರಸ್ತೆಯ ಅಂಚಿನ ಮರಗಳನ್ನು ಹಾಗೆಯೇ ಬಿಟ್ಟು ಮರದ ಸುತ್ತಲಿನ ಮಣ್ಣನ್ನು ತೆಗೆದಿರುವುದರಿಂದ ಮಳೆಗಾಲಕ್ಕೆ ಮರಗಳು ಉರುಳಿ ಬೀಳುವ ಸಂಭವದ ಬಗ್ಗೆ ಪತ್ರಿಕೆಯು ಮೇ 30ರಂದು ಚಿತ್ರ ಸಹಿತ ವರದಿ ಪ್ರಕಟಿಸಿತ್ತು. ಆದರೆ ಅರಣ್ಯ ಇಲಾಖೆ ಹಾಗೂ ಸ್ಥಳೀಯಾಡಳಿತ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಲ್ಲಿ ವಿಳಂಬ ಧೋರಣೆ ತೋರಿಸಿರುವುದರಿಂದ ಇದೀಗ ಜನತೆ ಸಂಕಷ್ಟಪಡುವಂತಾಗಿದೆ.

ಕಾರ್ಕಳದಿಂದ ಉಡುಪಿ ಸಂಪರ್ಕಿಸುವ ಮುಖ್ಯ ರಸ್ತೆಯನ್ನು ಜೋಡುರಸ್ತೆಯಿಂದ ಬೈಲೂರುವರೆಗೆ ವಿಸ್ತರಣೆಗೊಳಿಸಿ ಡಾಮಾರೀಕರಣಗೊಳಿಸುವ ಕಾಮ ಗಾರಿ ಪ್ರಾರಂಭಗೊಳ್ಳುವ ಮೊದಲೇ ರಸ್ತೆ ಯಂಚಿನ ಮರಗಳನ್ನು ಹಾಗೂ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಅರಣ್ಯ ಇಲಾಖೆಯ ನಿಧಾನ ಗತಿಯ ಪ್ರಕ್ರಿಯೆಯಿಂದಾಗಿ ಇದೀಗ ಮರಗಳು ರಸ್ತೆಯ ಮೇಲೆಯೇ ಉರುಳಿ ಬೀಳುತ್ತಿವೆ.

ರಸ್ತೆ ವಿಸ್ತರಣೆ ಸಂದರ್ಭ ಮರದ ಬುಡದ ಮಣ್ಣನ್ನು ತೆಗೆದಿರುವುದರಿಂದ ಮರದ ಬೇರುಗಳು ಕಡಿತಗೊಂಡಿದ್ದವು. ಇದರಿಂದಾಗಿ ಮಳೆ ಸಹಿತ ಗಾಳಿ ಸಂದರ್ಭ ಮರಗಳು ರಸ್ತೆಗೆ ಬೀಳುತ್ತಿವೆ. ಇದರ ಜತೆಗೆ ವಿದ್ಯುತ್‌ ಕಂಬಗಳು ಹಾಗೂ ತಂತಿಗಳು ನಿರಂತರವಾಗಿ ನೆಲಕ್ಕುರುಳುತ್ತಿದ್ದು ಕಳೆದ 4-5 ದಿನಗಳಿಂದ ವಿದ್ಯುತ್‌ ಸಂಪರ್ಕವೇ ಇಲ್ಲದಂತಾಗಿದೆ.

ಅಲ್ಲದೆ ತಾಲೂಕಿನ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಬೇಸಗೆಯಲ್ಲಿ ಖಾಸಗಿ ದೂರವಾಣಿ ಕಂಪೆನಿಯವರು ರಸ್ತೆಯ ಅಂಚಿನಲ್ಲಿಯೇ ಬೃಹತ್‌ ಗಾತ್ರದ ಗುಂಡಿಗಳನ್ನು ನಿರ್ಮಾಣ ಮಾಡಿದ್ದು ಈ ಗುಂಡಿ ಸಮೀಪದ ಮರಗಳ ಬೇರು ಕಡಿತಗೊಂಡಿರುವುದರಿಂದ ಈಗ ಮಳೆ ಬರುವ ಸಂದರ್ಭ ಮರಗಳು ಉರುಳಿ ಬೀಳುತ್ತಿವೆ.

Advertisement

ಕಳೆದ ಎಪ್ರಿಲ್‌ನಲ್ಲಿಯೇ ಬೀಸಿದ ಸಾಧಾರಣ ಗಾಳಿಗೆ ಮುನಿಯಾಲಿನಲ್ಲಿ ಬೃಹತ್‌ ಮರಗಳು ಉರುಳಿಬಿದ್ದು ಸುಮಾರು 3ರಿಂದ 4 ಗಂಟೆಗಳ ಕಾಲ ರಾಜ್ಯ ಹೆದ್ದಾರಿಯ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಆಗಲೇ ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳಿಯಾಡಳಿತ ಎಚ್ಚೆತ್ತುಕೊಂಡಿದ್ದರೆ ಮಳೆಗಾಲದ ತೀವ್ರ ಸಮಸ್ಯೆಯನ್ನು ತಡೆಯಬಹುದಾಗಿತ್ತು ಎನ್ನುತ್ತಾರೆ ಸ್ಥಳೀಯರು.

ಧರೆಗುರುಳಿದ ವಿದ್ಯುತ್‌ ಕಂಬಗಳು
ರಸ್ತೆಯಂಚಿನ ಮರಗಳು ಉರುಳಿ ಬಿದ್ದ ಪರಿಣಾಮ ಕಾರ್ಕಳ ತಾಲೂಕಿನಾದ್ಯಂತ ಸುಮಾರು 100ಕ್ಕೂ ಹೆಚ್ಚಿನ ವಿದ್ಯುತ್‌ ಕಂಬಗಳು ಧರೆಗುರುಳಿ ಆ. 4ರಿಂದ 7ರ ವರೆಗೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್‌ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಅಲ್ಲದೆ ಮೆಸ್ಕಾಂಗೆ ಅಪಾರ ನಷ್ಟ ಸಂಭವಿಸಿದೆ. ಕಳೆದ ಒಂದೆರಡು ದಿನಗಳಲ್ಲಿ ಕಾರ್ಕಳ ಪೇಟೆಯ ಪೆರ್ವಾಜೆ, ಅಜೆಕಾರು ಕೈಕಂಬ, ಜೋಡುರಸ್ತೆ ಬೈಲೂರು ಮುಖ್ಯ ರಸ್ತೆ, ಪಳ್ಳಿ ರಸ್ತೆ, ಅಜೆಕಾರು ಅಂಡಾರು ರಸ್ತೆ, ಕೆರ್ವಾಶೆ ಮುಡಾರು ರಸ್ತೆಗಳಲ್ಲಿ ಮರಗಳು ಉರುಳಿ ಬಿದ್ದು ಸಂಚಾರ ಸ್ಥಗಿತಗೊಂಡು ವಿದ್ಯುತ್‌ ಸಂಪರ್ಕ ಇಲ್ಲದಂತಾಗಿದೆ.

ಇಲಾಖೆಗಳ ನಡುವಿನ ಭಿನ್ನಾಭಿಪ್ರಾಯ
ಇಲಾಖೆಗಳ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಅಪಾಯಕಾರಿ ಮರಗಳು ತೆರವುಗೊಳ್ಳದೆ ಸಾರ್ವ ಜನಿಕರು ಸಂಕಷ್ಟಪಡಬೇಕಾಗಿದೆ. ಮುಂದಿನ ದಿನ ಗಳಲ್ಲಾದರೂ ಅರಣ್ಯ ಇಲಾಖೆ, ಲೋಕೋಪ ಯೋಗಿ ಇಲಾಖೆ, ಸ್ಥಳಿಯಾಡಳಿತ, ಮೆಸ್ಕಾಂ ಜನರ ಹಿತದೃಷ್ಠಿಯನ್ನು ಗಮನದಲ್ಲಿ ಟ್ಟುಕೊಂಡು ಕಾರ್ಯ ನಿರ್ವಹಿಸಬೇಕಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಖರ್ಚು ಪಾವತಿಸಿದಲ್ಲಿ ಶೀಘ್ರ ತೆರವು
ಅಪಾಯಕಾರಿ ಮರಗಳ ಬಗ್ಗೆ ಸ್ಥಳಿಯಾಡಳಿತ ಅಥವಾ ಯಾವುದೇ ಇಲಾಖೆ ಮನವಿ ಮಾಡಿ ಕಟಾವಿನ ಖರ್ಚು ವೆಚ್ಚದ ಹಣ ಪಾವತಿ ಮಾಡಿದಲ್ಲಿ ಶೀಘ್ರ ತನಿಖೆ ನಡೆಸಿ ಕಟಾವಿಗೆ ಅನುಮತಿ ನೀಡಲಾಗುವುದು. ಅಥವಾ ನಾಟಾ ಸಂಗ್ರಹಾಲಯಕ್ಕೆ ಸ್ಥಳಿಯಾಡಳಿತವೇ ಮರವನ್ನು ಸಾಗಿಸಲು ಬದ್ಧವಾಗಿದ್ದಲ್ಲಿ ಅರಣ್ಯ ಇಲಾಖೆಯಿಂದ ಕಾನೂನು ರೀತಿಯ ಅನುಮತಿ ನೀಡಲಾಗುತ್ತದೆ.
-ದಿನೇಶ್‌, ವಲಯ ಅರಣ್ಯಾಧಿಕಾರಿ ಕಾರ್ಕಳ

ಅರಣ್ಯಇಲಾಖೆಗೆ ಮನವಿ ಮಾಡುತ್ತೇವೆ
ರಸ್ತೆ ವಿಸ್ತರಣೆ ಸಂದರ್ಭ ಅಭಿವೃದ್ಧಿಗೆ ಅಡಚಣೆಯಾಗುವ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಲಾಗುವುದು. ತೆರವುಗೊಳ್ಳುವ ಮರಗಳ ಸಂಖ್ಯೆ ಜಾಸ್ತಿ ಇದ್ದಲ್ಲಿ ಅರಣ್ಯ ಇಲಾಖೆಯಿಂದ ಕಾನೂನು ಪ್ರಕಾರ ಪರವಾನಗೆ ದೊರೆಯುವಲ್ಲಿ ವಿಳಂಬವಾಗುತ್ತಿದೆ.
-ಸುಂದರ್‌,
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next