Advertisement
ಹಿರಿಯೂರು ನಗರಸಭೆಯ 31, ಮೊಳಕಾಲ್ಮೂರು ಮತ್ತು ಹೊಳಲ್ಕೆರೆ ಪಟ್ಟಣ ಪಂಚಾಯತ್‌ಗಳ ತಲಾ 16 ವಾರ್ಡ್‌ಗಳಿಗೆ ಚುನಾವಣೆ ನಿಗದಿಯಾಗಿದೆ. ಈ ಮೂರು ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಜಿಲ್ಲಾ ಮಟ್ಟದಲ್ಲಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
Related Articles
Advertisement
ಹಾಗೆ ನೋಡಿದರೆ ಜೆಡಿಎಸ್ ಪಕ್ಷಕ್ಕೆ ಹಿರಿಯೂರು ಹೊರತುಪಡಿಸಿ ಮೊಳಕಾಲ್ಮೂರು ಮತ್ತು ಹೊಳಲ್ಕೆರೆಯಲ್ಲಿ ನೆಲೆ ಇಲ್ಲ. ಆದರೂ ಮೊಳಕಾಲ್ಮೂರು ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರ ಶ್ರಮದಿಂದಾಗಿ ಕಳೆದ 2013ರಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಒಂದು ಸ್ಥಾನ ಗಳಿಸಿತ್ತು. ಹೊಳಲ್ಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಹಾಗಾಗಿ ಈ ಎರಡು ಪಟ್ಟಣ ಪಂಚಾಯತ್‌ಗಳಲ್ಲಿ ಜೆಡಿಎಸ್ ಹೆಚ್ಚಿನ ಸೀಟು ಬೇಕೆಂದು ತಕರಾರು ಮಾಡುವುದಿಲ್ಲ, ಒಂದು ವೇಳೆ ತಕರಾರು ಮಾಡಿ ಹೆಚ್ಚಿನ ಸೀಟು ಪಡೆದರೂ ಆ ಪಕ್ಷದ ವತಿಯಿಂದ ಸ್ಪರ್ಧಿಸಲು ಹೇಳಿಕೊಳ್ಳುವಂತಹ ಅಭ್ಯರ್ಥಿಗಳೂ ಇಲ್ಲ. ಕೊನೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಜೆಡಿಎಸ್ ಚಿನ್ಹೆ ಅಡಿ ಸ್ಪರ್ಧಿಸಿದರೂ ಅಚ್ಚರಿ ಇಲ್ಲ. ಈ ಎರಡು ಪಪಂಗಳಿಗೆ ಜೆಡಿಎಸ್ ಪಕ್ಷಕ್ಕೆ ತಲಾ 2 ಅಥವಾ 3 ಸೀಟು ನೀಡಿದರೂ ಜೆಡಿಎಸ್ ಖುಷಿಯಿಂದ ಒಪ್ಪಿಕೊಳ್ಳುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಆದರೆ ಇದೇ ಮಾತನ್ನ ಹಿರಿಯೂರು ನಗರಸಭೆ ಸೀಟು ಹಂಚಿಕೆಗೆ ಹೇಳುವಂತಿಲ್ಲ. ಏಕೆಂದರೆ ಹಿರಿಯೂರು ನಗರಸಭೆಯ 31 ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ನಿಲ್ಲಿಸುವ ಸಾಮರ್ಥ್ಯ ಜೆಡಿಎಸ್‌ಗಿದ್ದು, ಕಾರ್ಯಕರ್ತರ ಪಡೆಯನ್ನೂ ಹೊಂದಿದೆ. ಹಾಗಾಗಿ ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಸೀಟು ಹಂಚಿಕೆಗೆ ಪೈಪೋಟಿ ಏರ್ಪಡುವ ಲಕ್ಷಣಗಳಿವೆ. ಎರಡೂ ಪಕ್ಷಗಳಿಗೆ ಹಿರಿಯೂರು ಕ್ಷೇತ್ರದಲ್ಲಿ ಗಟ್ಟಿ ನೆಲೆ ಇರುವುದರಿಂದ ಸೀಟು ಹಂಚಿಕೆ ಕಗ್ಗಂಟಾಗಲಿದೆ.
ಈ ಹಿಂದಿನ ಸ್ಥಳೀಯ ಚುನಾವಣೆಗಳನ್ನು ಅವಲೋಕಿಸಿದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೇ ಎದುರಾಳಿಗಳಾಗಿ ಹೋರಾಟ ಮಾಡಿ ಅಧಿಕಾರ ಹಿಡಿದಿವೆ. ಬಿಜೆಪಿಗೆ ಇಂದಿಗೂ ನಗರಸಭೆಯಲ್ಲಿ ಒಂದು ಸ್ಥಾನ ಗಳಿಸಲೂ ಸಾಧ್ಯವಾಗಿಲ್ಲ. ಆದರೆ ಈ ಸಲ ಬಿಜೆಪಿ ಶಾಸಕರು ಇರುವುದರಿಂದ ಸ್ಥಳೀಯ ಸಂಸ್ಥೆಯಲ್ಲಿ ಅಧಿಕಾರ ಹಿಡಿಯಲು ಶತಪ್ರಯತ್ನ ಮಾಡುವುದು ಖಚಿತ. ಬಿಜೆಪಿಯನ್ನು ಕಟ್ಟಿ ಹಾಕಬೇಕಾದರೆ ಹಿರಿಯೂರಿನಲ್ಲಿ ಜೆಡಿಎಸ್‌ನೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಎರಡು ಪಕ್ಷಗಳ ಮುಖಂಡರು ಮೈತ್ರಿ ಮಾಡಿಕೊಳ್ಳಲು ತೆರೆಮರೆಯಲ್ಲಿ ಮಾತುಕತೆ ಆರಂಭಿಸಿದ್ದಾರೆ ಎನ್ನಲಾಗಿದೆ. ಮಂಗಳವಾರ ಕಾಂಗ್ರೆಸ್ ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷರು, ಮುಖಂಡರು, ಮಾಜಿ ಶಾಸಕರು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಸೀಟು ಹಂಚಿಕೆಯೂ ಫೈನಲ್ ಆಗಲಿದೆ ಎಂದು ತಿಳಿದು ಬಂದಿದೆ.
•ಹರಿಯಬ್ಬೆ ಹೆಂಜಾರಪ್ಪ