ಬೆಂಗಳೂರು: ರಾಜ್ಯದ ಪ್ರತಿ ಲೋಕಸಭೆ ಹಾಗೂ ವಿಧಾನಸಭೆ ಕ್ಷೇತ್ರದ ತಲಾ ಐದು ಗ್ರಾಮಗಳನ್ನು ದಿನದ 24 ಗಂಟೆ ನಿರಂತರ ವಿದ್ಯುತ್ ಪೂರೈಕೆ ಸಹಿತ ‘ವಿದ್ಯುತ್ ಅಚಡಣೆ ರಹಿತ ಗ್ರಾಮ’ಗಳನ್ನಾಗಿ ಪರಿವರ್ತಿಸುವ ಯೋಜನೆಯನ್ನು ರಾಜ್ಯ ಸರಕಾರ ರೂಪಿಸಿದೆ. ಪ್ರತಿ ಗ್ರಾಮಕ್ಕೆ ಗರಿಷ್ಠ 40 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಅಗತ್ಯ ಇರುವ ಎಲ್ಲ ಕ್ರಮಗಳನ್ನು ಕೈಗೊಂಡು ಮಾದರಿ ಗ್ರಾಮಗಳನ್ನಾಗಿ ಮಾಡುವುದು ಇದರ ಉದ್ದೇಶ. ಜತೆಗೆ ಐದು ಎಸ್ಕಾಂ ವ್ಯಾಪ್ತಿಯ ಆಯ್ದ ನಗರ ಪ್ರದೇಶ ಒಳಗೊಂಡ ಹದಿನೇಳು ಉಪವಿಭಾಗಗಳನ್ನೂ ಇದೇ ರೀತಿ ಮಾದರಿಯಾಗಿ ರೂಪಿಸಲು ತೀರ್ಮಾನ ಕೈಗೊಳ್ಳಲಾಗಿದ್ದು, ಇದಕ್ಕೆ 3,675 ಕೋಟಿ ರೂ. ಮೀಸಲಿಡಲಾಗಿದೆ.
ರಾಜ್ಯದ ಐದು ಎಸ್ಕಾಂ ವ್ಯಾಪ್ತಿಯ ಆಯ್ದ 17 ಉಪ ವಿಭಾಗಗಳನ್ನು ಒಟ್ಟು 3,675 ಕೋಟಿ ರೂ. ವೆಚ್ಚದಲ್ಲಿ ಮಾದರಿ ಉಪವಿಭಾಗ ಯೋಜನೆಯಡಿ ಅಭಿವೃದ್ಧಿ ಹಾಗೂ ಪ್ರತಿ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ತಲಾ ಐದು ಗ್ರಾಮಗಳನ್ನು ಮಾದರಿ ವಿದ್ಯುತ್ ಗ್ರಾಮಗಳನ್ನಾಗಿ ರೂಪಿಸಲು ನಿರ್ಧರಿಸಲಾಗಿದೆ. ನಿರಂತರ ಗುಣಮಟ್ಟದ ವಿದ್ಯುತ್ ಪೂರೈಕೆ, ತಾಂತ್ರಿಕ ಹಾಗೂ ವಾಣಿಜ್ಯ ವಿದ್ಯುತ್ ಸೋರಿಕೆ ಪ್ರಮಾಣ ಶೇ.6ಕ್ಕೆ ಇಳಿಕೆ, ಶೇ.100ರಷ್ಟು ಬಿಲ್ಲಿಂಗ್ – ವಸೂಲಿ, ಐದು ಸ್ಟಾರ್‌ಗಳಿರುವ ಗುಣಮಟ್ಟದ ಟ್ರಾನ್ಸ್‌ಫಾರ್ಮರ್ ಅಳವಡಿಕೆ ಹಾಗೂ ಗ್ರಾಹಕರ ಸಂತೃಪ್ತಿಗೆ ಆದ್ಯತೆ ನೀಡುವುದು ಯೋಜನೆಯ ಉದ್ದೇಶ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮಾದರಿ ವಿದ್ಯುತ್ ಗ್ರಾಮ: ಕನಿಷ್ಠ 2,000 ಜನರಿರುವ ಗ್ರಾಮಗಳನ್ನು ಶಾಸಕರು, ಸಂಸದರು ಮಾದರಿ ವಿದ್ಯುತ್ ಗ್ರಾಮಗಳನ್ನಾಗಿ ಆಯ್ಕೆ ಮಾಡಲಿದ್ದು, ಅಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು 25 ಲಕ್ಷ ರೂ.ನಿಂದ 40 ಲಕ್ಷ ರೂ.ವರೆಗೆ ವೆಚ್ಚ ಮಾಡಲಾಗುವುದು. ಈ ಕಾರ್ಯಕ್ರಮ ಅನುಷ್ಠಾನಕ್ಕೆ ಅಗತ್ಯವಿರುವ ಹಣವನ್ನು ಎಸ್ಕಾಂಗಳು ತಮ್ಮ ಬಂಡವಾಳ ಕಾಮಗಾರಿ ಯೋಜನೆಯಡಿ ಭರಿಸಬೇಕಾಗುತ್ತದೆ. ಒಂದೂವರೆ ವರ್ಷದೊಳಗೆ ಮಾದರಿ ವಿದ್ಯುತ್ ಗ್ರಾಮಗಳು ರೂಪುಗೊಳ್ಳಲಿವೆ ಎಂದು ಹೇಳಿದರು.
ಮಂಗಳೂರು, ಶಿವಮೊಗ್ಗ ಆಯ್ಕೆ: ಮೆಸ್ಕಾಂ ವ್ಯಾಪ್ತಿಯಲ್ಲಿ ಮಂಗಳೂರು ನಗರ, ಶಿವಮೊಗ್ಗ ವಿದ್ಯುತ್ ಅಡಚಣೆ ರಹಿತ ಗ್ರಾಮಕ್ಕೆ ಆಯ್ಕೆ ಮಾಡಲಾಗಿದ್ದು, 350 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ ಎಂದರು.
ಪರಿಹಾರ ಮೊತ್ತ ಹೆಚ್ಚಳ: ರಾಜ್ಯದಲ್ಲಿ ವಿದ್ಯುತ್ ಅವಘಡದ ವೇಳೆ ಮೃತಪಡುವ ನೌಕರ, ಸಿಬಂದಿ, ಸಾರ್ವಜನಿಕರಿಗೆ ಪರಿಹಾರ ಮೊತ್ತವನ್ನು 2 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಕೆ ಮಾಡಲು ನಿರ್ಧರಿಸಲಾಗಿದ್ದು, ಸದ್ಯದಲ್ಲೇ ಆದೇಶ ಹೊರಡಿಸಲಾಗುವುದು. ಹಸು, ಎತ್ತು, ಕುರಿ, ಮೇಕೆಯಂತಹ ಜಾನುವಾರುಗಳು ಮೃತಪಟ್ಟರೆ ಪಶುಸಂಗೋಪನ ಇಲಾಖೆ ವರದಿ ಆಧರಿಸಿ 50,000 ರೂ. ವರೆಗೆ ಪರಿಹಾರ ನೀಡಲು ತೀರ್ಮಾನಿಸಲಾಗಿದೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ಈವರೆಗೆ ಪ್ರೊಬೆಷನರಿ ಲೈನ್‌ಮನ್‌ಗಳು ಕಂಬ ಹತ್ತುವಂತಿರಲಿಲ್ಲ. ಆದರೆ ಇನ್ನು ಮುಂದೆ ಪ್ರೊಬೆಷನರಿ ಲೈನ್‌ಮನ್‌ಗಳು ಕಂಬ ಹತ್ತುವುದನ್ನು ಕಡ್ಡಾಯಗೊಳಿಸಲಾಗುವುದು. ಪ್ರೊಬೆಷನರಿ ಲೈನ್‌ಮನ್‌ಗಳು ಕರ್ತವ್ಯ ನಿರ್ವಹಿಸುವಾಗ ಅವಘಡ ಸಂಭವಿಸಿ ಸಾವು ಸಂಭವಿಸಿದರೆ ಕಾಯಂ ನೌಕರರಿಗಿರುವ ಸೌಲಭ್ಯದಂತೆ ಕುಟುಂಬದ ಸದಸ್ಯರಿಗೆ ನೌಕರಿ ನೀಡಲಾಗುವುದು ಎಂದು ತಿಳಿಸಿದರು.