ವಿಶೇಷ ವರದಿ- ಮಂಗಳೂರು: ಕೋವಿಡ್-19 ಮಹಾಮಾರಿ ಹಿನ್ನೆಲೆ ಮಾ. 24ರಂದು ಘೋಷಿಸಿರುವ ದೇಶವ್ಯಾಪಿ ಲಾಕ್‌ಡೌನ್ ಎ. 24ಕ್ಕೆ ಒಂದು ತಿಂಗಳು ಪೂರೈಸಿದೆ. ಆದರೆ, ಜಿಲ್ಲೆಯ ಸದ್ಯದ ಪರಿಸ್ಥಿತಿಯಲ್ಲಿ ಲಾಕ್‌ಡೌನ್ ಮುಗಿಯುವ ಗಡುವು ಆಗಿರುವ ಮೇ 3ರ ನಂತರ ಮುಂದೇನು ಎಂಬ ಅನಿಶ್ಚಿತತೆ ಜನತೆಯನ್ನು ಕಾಡಲಾರಂಭಿಸಿದೆ.
ದ.ಕ. ಜಿಲ್ಲೆಯಲ್ಲಿ ಕೋವಿಡ್-19 ರೋಗ ನಿಯಂತ್ರಣಕ್ಕೆ ಬಂತು ಎನ್ನುವಷ್ಟರಲ್ಲೇ ಮತ್ತೆ ಸೋಂಕು ಪ್ರಕರಣಗಳು ಜಾಸ್ತಿಯಾಗಿ ಜಿಲ್ಲೆಯ ಜನರನ್ನು ಕೂಡ ಆತಂಕ್ಕೀಡು ಮಾಡಿದೆ. ಒಂದು ತಿಂಗಳಿನಿಂದ ಕೋವಿಡ್-19 ಜಿಲ್ಲೆಯಲ್ಲಿ ಜನಜೀವನವನ್ನು ಸ್ತಬ್ಧಗೊಳಿಸಿದ್ದು ಇದರ ನಿಯಂತ್ರಣಕ್ಕೆ ಲಾಕ್‌ಡೌನ್ ಬಿಟ್ಟರೆ ಸದ್ಯಕ್ಕೆ ಬೇರೆ ದಾರಿ ಇಲ್ಲವಾಗಿದೆ.
ತಿಂಗಳ ಲಾಕ್‌ಡೌನ್ ಅವಧಿಯಲ್ಲಿ ದ.ಕ. ಜಿಲ್ಲೆಯ ಆರ್ಥಿಕತೆ, ಔದ್ಯೋಗಿಕ ಸಹಿತ ಹಲವಾರು ಕ್ಷೇತ್ರಗಳು ಭಾರೀ ಹಿನ್ನಡೆ ಅನುಭವಿಸುತ್ತಿವೆ. ಜಿಲ್ಲೆಯಲ್ಲಿ ಕಿರು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು(ಎಸ್‌ಎಂಇ) ಆರ್ಥಿಕತೆ ಜೀವಾಳ. ಸುಮಾರು 12,000 ಎಸ್‌ಎಂಇಗಳು ನೋಂದಣಿಯಾಗಿವೆ. ಇದರಲ್ಲಿ ಸುಮಾರು 4,000 ವರೆಗಿನವು ಕೈಗಾರಿಕೆ ಸ್ವರೂಪದ್ದಾಗಿದೆ. ಎಸ್‌ಎಂಇ ರಂಗದಲ್ಲಿ ಸುಮಾರು 90,000 ಮಂದಿ ದುಡಿಯುತ್ತಿದ್ದಾರೆ.
ಕೆನರಾ ಸಣ್ಣ ಕೈಗಾರಿಕೆ ಸಂಘದ ನಿಕಟಪೂರ್ವ ಅಧ್ಯಕ್ಷ ಗೌರವ ಹೆಗ್ಡೆ ಅವರ ಪ್ರಕಾರ ದಿನಕ್ಕೆ ಸುಮಾರು 50 ಕೋ.ರೂ. ವರೆಗಿನ ವ್ಯವಹಾರ ನಡೆಯುತ್ತಿದ್ದು ಇದು ಒಂದು ತಿಂಗಳಿನಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಪ್ರಸ್ತುತ ಜಿಲ್ಲೆಯಲ್ಲಿ ಸುಮಾರು 75 ಯೋಜನೆಗಳು ನಿರ್ಮಾಣ ಹಂತದಲ್ಲಿವೆ. ಸುಮಾರು 6,000 ಮಂದಿ ಇದರಲ್ಲಿ ದುಡಿಯುತ್ತಿದ್ದಾರೆ. ನಿರ್ಮಾಣ ಇದೀಗ ಸಂಪೂರ್ಣ ನಿಂತಿದ್ದು ಸುಮಾರು 400 ಕೋ.ರೂ.ವರೆಗೆ ಸದ್ಯಕ್ಕೆ ಹಿನ್ನಡೆ ಅನುಭವಿಸಿದೆ ಎನ್ನುತ್ತಾರೆ ಕ್ರೈಡೈ ಅಧ್ಯಕ್ಷ ನವೀನ್ ಕಾರ್ಡೊಜಾ.
ಮಂಗಳೂರು ಟ್ರಾಲ್‌ಬೋಟು ಮೀನುಗಾರರ ಸಂಘದ ಅಧ್ಯಕ್ಷ ನಿತಿನ್ ಕುಮಾರ್ ಅಭಿಪ್ರಾಯದಂತೆ ಮಂಗಳೂರಿನಲ್ಲಿ ಸುಮಾರು 1,200 ಯಾಂತ್ರೀಕೃತ ದೋಣಿಗಳು ಮೀನುಗಾರಿಕೆಯಲ್ಲಿ ನಿರತವಾಗಿವೆ. ಇದು ಸುಮಾರು 10,000 ಮಂದಿಗೆ ನೇರ, ಸುಮಾರು 50,000 ಮಂದಿಗೆ ಪರೋಕ್ಷವಾಗಿ ಉದ್ಯೋಗ ಕಲ್ಪಿಸಿದೆ. ಮಾರ್ಚ್ 26 ರಿಂದ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡು ನಾಡದೋಣಿ ಮೀನುಗಾರಿಕೆ ಆರಂಭಗೊಂಡಿದೆ.
ಪ್ರತಿ ದಿನ 110 ಕೋಟಿ ರೂಪಾಯಿ ವ್ಯವಹಾರ
ಬೃಹತ್ ಉದ್ಯಮ ಹೊರತು ಪಡಿಸಿ ಜಿಲ್ಲೆಯಲ್ಲಿ ಎಸ್‌ಎಂಇ ಹಾಗೂ ವಾಣಿಜ್ಯ ಕ್ಷೇತ್ರಗಳಿಂದ ದಿನವೊಂದಕ್ಕೆ 110 ಕೋ.ರೂ. ವ್ಯವಹಾರ ನಡೆಯುತ್ತದೆ ಎಂದು ಅಂದಾಜಿಸಲಾಗಿದೆ. ಬೇಸಗೆಯಲ್ಲಿ ಅವಶ್ಯಕ ಹಾಗೂ ಆಹಾರ ಸಾಮಗ್ರಿಗಳ ಮಾರಾಟಕ್ಕೆ ಅವ ಕಾಶ ನೀಡಿದ್ದು ಉಳಿದಂತೆ ದಿನಕ್ಕೆ ಸುಮಾರು 90 ಕೋ.ರೂ. ವ್ಯವಹಾರ ಕುಸಿತ ಕಂಡಿದೆ ಎಂದು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಐಸಾಕ್ ವಾಜ್ ಅಭಿಪ್ರಾಯಪಟ್ಟಿದ್ದಾರೆ.
ವ್ಯವಹಾರ ಸ್ಥಗಿತ
ದಿನಬಳಕೆ ಸಾಮಗ್ರಿಗಳು ಹೊರತುಪಡಿಸಿ ಇತರ ವಾಣಿಜ್ಯ ಮಳಿಗೆಗಳ, ಸಂಸ್ಥೆಗಳ ವ್ಯವಹಾರ ಸಂಪೂರ್ಣ ಸ್ತಬ್ಧವಾಗಿವೆ.ಪ್ರಸ್ತುತ ಚಿನ್ನಾಭರಣ, ಜವುಳಿಗಳ ವ್ಯಾಪಾರ ಶೇ. 90ರಷ್ಟು ಸ್ಥಗಿತ ಗೊಂಡಿದ್ದು, ಅಲ್ಪ ಪ್ರಮಾಣದಲ್ಲಿ ಆನ್‌ಲೈನ್‌ನಲ್ಲಿ ಚಾಲ್ತಿಯಲ್ಲಿದೆ. ಇದಲ್ಲದೆ ಕ್ಯಾಟರಿಂಗ್, ಬೀದಿ ಬದಿ ವ್ಯಾಪಾರ ಸಂಪೂರ್ಣವಾಗಿ ಬಂದ್ ಆಗಿವೆ.