ಕೊಲ್ಲೂರು/ ಸುಬ್ರಹ್ಮಣ್ಯ/ ಬೆಳ್ತಂಗಡಿ / ಮಲ್ಪೆ: ಬೇಸಗೆ ರಜೆ ಮುಗಿಯುತ್ತಿದ್ದಂತೆ ಕರಾವಳಿಯ ದೇವಸ್ಥಾನಗಳು, ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಭೇಟಿ ಹೆಚ್ಚಾಗಿದ್ದು, ವಾರಾಂತ್ಯದ ಶನಿವಾರ ಮತ್ತು ರವಿವಾರಗಳಲ್ಲಿ ಎಲ್ಲೆಡೆ ಯಾತ್ರಿಕರ ದಟ್ಟಣೆ ಕಂಡು ಬಂದಿತು.
ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ರವಿವಾರ ಮಧ್ಯಾಹ್ನ 15 ಸಾವಿರಕ್ಕೂ ಅಧಿಕ ಭಕ್ತರು ಕಂಡುಬಂದರು. ಭಕ್ತರ ಸಾಲು ಮುಖ್ಯರಸ್ತೆಯ ವರೆಗೆ ವಿಸ್ತರಿಸಿತ್ತು. ನೂಕುನುಗ್ಗಲು ತಪ್ಪಿಸಲು ಕ್ಷೇತ್ರದ ಸಿಬಂದಿ ಹರಸಾಹಸ ಪಡಬೇಕಾಯಿತು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರವಿವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಶನಿವಾರವೂ ಹೆಚ್ಚಿನ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ದೇವರ ದರ್ಶನ ಹಾಗೂ ಭೋಜನ ಪ್ರಸಾದ ಶಾಲೆಯಲ್ಲಿ ಭಕ್ತರು ತುಂಬಿದ್ದರು. ದೇವಸ್ಥಾನದ ವತಿಯಿಂದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ಪೇಟೆಯ ರಸ್ತೆ, ಪಾರ್ಕಿಂಗ್ ಪ್ರದೇಶಗಳಲ್ಲೂ ವಾಹನಗಳ ದಟ್ಟಣೆ ಕಾಣಿಸಿತ್ತು.
ಶ್ರೀ ಕ್ಷೇತ್ರ ಧರ್ಮಸ್ಥಳ, ಉಡುಪಿ ಶ್ರೀಕೃಷ್ಣ ಮಠ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮೊದಲಾದೆಡೆಗಳಲ್ಲೂ ಹೆಚ್ಚಿನ ಸಂಖ್ಯೆಯ ಭಕ್ತರು ಕಂಡುಬಂದರು.
ರಾತ್ರಿವರೆಗೂ ಮಲ್ಪೆ ಬೀಚ್‌ನಲ್ಲಿ ಜನ
ಮಲ್ಪೆ: ವಾರಾಂತ್ಯ ಹಿನ್ನೆಲೆಯಲ್ಲಿ ಪ್ರವಾಸಿಗರು ಮಲ್ಪೆಗೆ ಆಗಮಿಸಿದ್ದು ಬೀಚ್‌ನಲ್ಲಿ ಜನಸಂದಣಿ ಕಂಡು ಬಂದಿದೆ. ಆದರೆ ಜಲಸಾಹಸ ಕ್ರೀಡೆಗಳು ಮತ್ತು ಸೈಂಟ್ ಮೇರೀಸ್ ಯಾತ್ರೆ ಮಳೆಗಾಲದ ಮುನ್ನೆಚ್ಚರಿಕೆಯಾಗಿ ಸೆ. 15ರ ವರೆಗೆ ಸ್ಥಗಿತವಾಗಿದ್ದು, ಪ್ರವಾಸಿಗರಿಗೆ ನಿರಾಸೆಯಾಯಿತು. ಬಹುತೇಕ ಮಂದಿ ರಾತ್ರಿ 11ರ ವರೆಗೂ ಸಮುದ್ರತೀರದಲ್ಲಿ ಗಾಳಿಗೆ ಮೈಯೊಡ್ಡಿ ಕುಳಿತಿರುತ್ತಾರೆ. ಕೆಲವು ದಿನಗಳಿಂದ ರಜೆ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಮೈಸೂರಿನಿಂದ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದು, ಪ್ರಸ್ತುತ ಸಮುದ್ರ ಶಾಂತವಾಗಿರುವ ಕಾರಣ ನೀರಿಗಿಳಿಯಲು ಬಿಡಲಾಗುತ್ತಿದೆ.
Related Articles
ಪಣಂಬೂರು ಬೀಚ್
ಸುರತ್ಕಲ್: ಪಣಂಬೂರು ಬೀಚ್ ಮತ್ತು ತಣ್ಣೀರು ಬಾವಿ ಬೀಚ್‌ಗಳಿಗೂ ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಬೇಸಗೆ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಬೀಚ್‌ಗಳಿಗೆ ಬಂದಿದ್ದರು.