Advertisement

ವಿವಿಧ ಸಂಘಟನೆಗಳಿಂದ ಮುಂದುವರಿದ ಹೋರಾಟ

02:46 PM Dec 23, 2017 | Team Udayavani |

ಚಾಮರಾಜನಗರ: ವಿಜಯಪುರದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಘಟನೆ ಖಂಡಿಸಿ ಮತ್ತು ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಜಿಲ್ಲಾ ಯುವ ಕಾಂಗ್ರೆಸ್‌, ಎನ್‌ಎಸ್‌ಯುಐ ಹಾಗೂ ಬಿಜೆಪಿಯಿಂದ ಪ್ರತ್ಯೇಕ ಪ್ರತಿಭಟನೆ ನಡೆಸಲಾಯಿತು.

Advertisement

ಜಿಲ್ಲಾ ಯುವ ಕಾಂಗ್ರೆಸ್‌ ಹಾಗೂ ಎನ್‌ಎಸ್‌ಐಯು ವತಿಯಿಂದ ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಆರೋಪಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ, ಕೆಲಕಾಲ ಧರಣಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಚೇತನ್‌ ದೊರೈರಾಜ್‌, ದಲಿತ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಕೊಲೆಗೈದಿರುವ ಆರು ಮಂದಿ ಆರೋಪಿಗಳನ್ನು ತಕ್ಷಣ ಬಂಧಿಸಿ, ಅವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಮಾಡಬೇಕು. 

ಈ ರೀತಿಯ ಕೃತ್ಯಗಳು ನಡೆಯದಂತೆ ಪೊಲೀಸ್‌ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಹಿಂದುತ್ವದ ಗುತ್ತಿಗೆ ಹಿಡಿದವರಂತೆ ಮಾತನಾಡುವ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ, ಸಿ.ಟಿ.ರವಿ, ಸಂಸದ ಪ್ರತಾಪಸಿಂಹ ಇತರ ಬಿಜೆಪಿ ಜನಪ್ರತಿನಿಧಿಗಳು ಈಗ ಎಲ್ಲಿಗೆ ಹೋಗಿದ್ದಾರೆ, ವಿಜಯಪುರದ ಬಾಲಕಿ ಕೂಡ ಹಿಂದೂ ಅಲ್ಲವೆ ಎಂದು ಪ್ರಶ್ನಿಸಿದರು. ಬಳಿಕ ತಹಶೀಲ್ದಾರ್‌ ಪುರಂದರಗೆ ಮನವಿ ಸಲ್ಲಿಸಲಾಯಿತು. 

ಯುವ ಕಾಂಗ್ರೆಸ್‌ನ ಶಿವಶಂಕರ್‌, ಶ್ರೀಕಾಂತ್‌, ಸೈಯದ್‌ ಮುಸ್ತಫಾ, ಹಬೀಬ್‌, ರಾಜೇಂದ್ರ, ಲೋಕೇಶ್‌, ಅಶೋಕ್‌
ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Advertisement

ಬಿಜೆಪಿ ಪ್ರತಿಭಟನೆ: ಮತ್ತೂಂದು ಪ್ರತಿಭಟನೆಯಲ್ಲಿ ಚಾ.ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಜಿಲ್ಲಾ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರಮುಖ ಬೀದಿಗಳಲ್ಲಿ ಸಾಗಿ ಜಿಲ್ಲಾಡಳಿತ ಭವನದ ಮುಂಭಾಗ ಧರಣಿ ನಡೆಸಿದರು.

ಘಟನೆಯನ್ನು ಖಂಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ರಾಮಲಿಂಗಾರೆಡ್ಡಿ ವಿರುದ್ಧ ಧಿಕ್ಕಾರವನ್ನು ಕೂಗಿದರು. ತಹಶೀಲ್ದಾರ್‌ ಪುರಂದರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ವಿಜಯಪುರದ ದಲಿತಾ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ ಹೇಯಕೃತ್ಯವಾಗಿದೆ. ಇದರಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ರಾಜ್ಯದಲ್ಲಿ ಡ್ರಗ್ಸ್‌ ಮಾಪಿಯಾ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿರುವುದು ಈ ಪ್ರಕರಣದಿಂದ ಸಾಬೀತಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ ಕೊಲೆ ಸುಲಿಗೆಗಳಿಗೆ ಕಡಿವಾಣ ಹಾಕುವಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ವಿಫ‌ಲವಾಗಿದೆ. ಹದಗೆಟ್ಟಿರುವ ಕಾನೂನು ಸುವ್ಯಸ್ಥೆಯನ್ನು ಸರಿಯಾದ ದಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡರು ಕಾರ್ಯಕರ್ತರಾದ ಜಿ.ಎಂ. ಮರಿಸ್ವಾಮಿ, ಸುಂದ್ರಪ್ಪ, ಪಿ.ಬಿ.ಶಾಂತಮೂರ್ತಿ, ನಾಗೇಂದ್ರಸ್ವಾಮಿ, ಆರ್‌.ಪುರುಷೋತ್ತಮ, ಕವಿತಾ, ಎಂ.ಎಸ್‌. ಪೃಥ್ವಿರಾಜ್‌, ಸುಂದರರಾಜು, ಎಂ.ಎಸ್‌. ಚಂದ್ರಶೇಖರ್‌, ದಾಕ್ಷಾಯಿಣಿ, ಕುಮಾರ್‌ ಎನ್‌. ಮಂಜುನಾಥ್‌, ಆರ್‌.ಎಂ.ಪುಟ್ಟಣ್ಣ, ಮಹೇಶ್‌, ಪಿ.ರಂಗಸ್ವಾಮಿ, ವನಜಾಕ್ಷಿ, ಪುಷ್ಪಮಾಲಾ, ನಾಗರಾಜಶರ್ಮ, ಎಸ್‌,ರಾಘವೇಂದ್ರ, ವೀರೇಂದ್ರ, ಶಿವಣ್ಣ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next