ಮಂಗಳೂರು: ಲೈಟ್ ಫಿಶಿಂಗ್, ಬುಲ್‌ಟ್ರಾಲ್ ಸೇರಿದಂತೆ ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿರುವ ಬೋಟ್‌ಗಳ ವಿರುದ್ಧ ಮೀನುಗಾರಿಕೆ ಇಲಾಖೆ ಕಾರ್ಯಾ ಚರಣೆಯನ್ನು ಮುಂದುವರಿಸಿದೆ. ಗುರುವಾರ ಕಸಬಾ ಬೆಂಗ್ರೆ ಸೇರಿದಂತೆ ವಿವಿಧೆಡೆ ಪೊಲೀಸರ ನೆರವಿನೊಂದಿಗೆ ಕಡಲಿಗಿಳಿದ ಇಲಾಖಾಧಿಕಾರಿಗಳು, ಸಿಬಂದಿ ಯನ್ನೊಳಗೊಂಡ ತಂಡ 30ಕ್ಕೂ ಅಧಿಕ ಬೋಟ್‌ಗಳು ಒಂದಿಲ್ಲೊಂದು ಅಕ್ರಮ ಮೀನುಗಾರಿಕೆ ನಡೆಸುತ್ತಿರುವುದನ್ನು ಪತ್ತೆ ಹಚ್ಚಿದೆ. ಸೋಮವಾರದಿಂದ ತಪಾಸಣೆ ಆರಂಭಗೊಂಡಿದ್ದು, ಇದುವರೆಗೆ 60ಕ್ಕೂ ಅಧಿಕ ಬೋಟ್‌ಗಳು ನಿಯಮ ಉಲ್ಲಂ ಸಿರುವುದು ಕಂಡುಬಂದಿದೆ.
ಮತ್ತೆ ಉಲ್ಲಂಘನೆ ಪತ್ತೆ
ಗುರುವಾರವೂ ಕೆಲವು ಬೋಟ್‌ಗಳಲ್ಲಿ ಎಲ್‌ಇಡಿ ಲೈಟ್, ಜನರೇಟರ್, ಮರಿ ಮೀನುಗಳು ಪತ್ತೆಯಾಗಿವೆ. ಈ ಬೋಟ್ ಮಾಲಕರಿಗೆ ಮೊದಲು ನೋಟಿಸ್ ನೀಡಿ ವಿಚಾರಣೆಯ ಅನಂತರ ದಂಡ ವಿಧಿಸಲಾಗುವುದು. ದೋಣಿಯಲ್ಲಿ ಅಕ್ರಮ ಮೀನುಗಾರಿಕೆ ನಡೆಸಿರುವುದಕ್ಕೆ ಸಾಕ್ಷಿಯಾಗಿ ಪರಿಕರಗಳು ದೊರೆತರೆ ಆ ದೋಣಿಯಲ್ಲಿರುವ ಮೀನಿನ ಮೌಲ್ಯದ 5 ಪಟ್ಟು ದಂಡ ವಿಧಿಸಲಾಗುತ್ತದೆ.
ಅಲ್ಲದೆ ಒಂದೊಂದು ನಿಯಮ ಉಲ್ಲಂಘನೆಗೂ ತಲಾ 5 ಸಾವಿರ ರೂ. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಪುನರಾವರ್ತನೆಯಾದರೆ ಪರವಾನಿಗೆ ರದ್ದು ಮಾಡಲಾಗುವುದು. ಮಂಗಳೂರು ಮೀನುಗಾರಿಕೆ ಬಂದರು ಮತ್ತು ಸುತ್ತಲಿನ ಸುಮಾರು 1,400 ಬೋಟ್‌ಗಳನ್ನು ಕೂಡ ತಪಾಸಣೆಗೆ ಒಳ ಪಡಿಸಲಾಗುವುದು. ಅಗತ್ಯ ಬಿದ್ದರೆ ಈ ತಿಂಗಳಿಡೀ ಕಾರ್ಯಾ ಚರಣೆ ಮುಂದುವರಿಸ ಲಾಗುವುದು ಎಂದು ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಡಿ. ತಿಪ್ಪೇಸ್ವಾಮಿ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.