Advertisement
ಖಾನಾಪುರ, ಹುಕ್ಕೇರಿ, ಬೆಳಗಾವಿ, ಚಿಕ್ಕೋಡಿ, ಗೋಕಾಕ ಸೇರಿದಂತೆ ಅನೇಕ ಕಡೆಗಳಲ್ಲಿ ಮಳೆ ಸುರಿಯುತ್ತಿದೆ. ಬೆಳಗಾವಿ ನಗರದಲ್ಲಿ ಧಾರಾಕಾರ ಮಳೆ ಆಗುತ್ತಿರುವುದರಿಂದ ಜನರು ಪರದಾಡುವಂತಾಯಿತು. ಇತ್ತ ಜೋರಾಗಿ ಮಳೆ ಆಗುತ್ತಿರುವುದರಿಂದ ರೈತರು ಸಂತಸಗೊಂಡಿದ್ದು, ಮುಂಗಾರು ಪೂರ್ವವೇ ಜಿಟಿಜಿಟಿ ವರ್ಷಧಾರೆಯಿಂದ ಸಂತಸಗೊಂಡಿದ್ದಾರೆ. ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ಭಾರೀ ಮಳೆ ಆಗುತ್ತಿದೆ. ಇಲ್ಲಿ ಎಲ್ಲ ಕಡೆಗಳಲ್ಲೂ ಹೆ„ ಅಲರ್ಟ್ ಘೋಷಿಸಿ ಸಂಪೂರ್ಣ ಬಂದ್ ಮಾಡಲಾಗಿದೆ. ಎಲ್ಲ ಬಸ್, ಖಾಸಗಿ ವಾಹನ ಸಂಚಾರ ನಿಷೇಧಗೊಳಿಸಲಾಗಿದೆ. ಸರ್ಕಾರಿ ರಜೆ ನೀಡಲಾಗಿದ್ದು, ಜನರು ಹೊರಗೆ ಬಾರದಂತೆ ಸೂಚಿಸಲಾಗಿದೆ.
ಚಿಕ್ಕೋಡಿ: ನಿಸರ್ಗ ಚಂಡಮಾರುತ ಪರಿಣಾಮ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಕೃಷ್ಣಾ ನದಿ ಮಟ್ಟದಲ್ಲಿ ಮೂರು ಅಡಿಯಷ್ಟು ಹೆಚ್ಚಳವಾಗಿದೆ. ದೂಧಗಂಗಾ ಮತ್ತು ವೇಧಗಂಗಾ ನದಿಗಳ ಮಟ್ಟ ಕೂಡ ಏರುತ್ತಿದೆ. ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ ಹತ್ತಿರ ಬುಧವಾರ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಮೂರು ಅಡಿಯಷ್ಟು ನೀರು ಹೆಚ್ಚಳವಾಗಿದೆ. ಹೀಗಾಗಿ ಬ್ಯಾರೇಜದ ಎಲ್ಲ ಗೇಟ್‌ಗಳನ್ನು ಮಹಾರಾಷ್ಟ್ರದ ನೀರಾವರಿ ಇಲಾಖೆ ತೆರೆದಿದೆ. ಇದರಿಂದ ಅಪಾರ ಪ್ರಮಾಣದ ನೀರು ರಾಜ್ಯಕ್ಕೆ ಹರಿದು ಬರುವ ಸಾಧ್ಯತೆ ಇದೆ. ಇದೇ ರೀತಿ ಮಳೆ ಮುಂದುವರೆದರೆ ಮಹಾರಾಷ್ಟ್ರದ ಕೋಯ್ನಾ, ಕಾಳಮ್ಮವಾಡಿ, ಧೂಮ್ ಮುಂತಾದ ಜಲಾಶಯಗಳಿಂದ ನೀರು ಹೊರಬಿಡುವ
ಸಾಧ್ಯತೆ ದಟ್ಟವಾಗಿದೆ. ವಿಪತ್ತು ನಿರ್ವಹಣಾ ತಂಡ ಯಡೂರು ಗ್ರಾಮ ತಲುಪಿದೆ. ಕಳೆದ ವರ್ಷ ಭಾರಿ ಮಳೆಯಿಂದ ಭೀಕರ ಪ್ರವಾಹ ಎದುರಾಗಿ ನದಿ ತೀರದ ಜನರನ್ನು ಸಂಕಷ್ಟಕ್ಕೆ ಈಡು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.