ಬಂಟ್ವಾಳ: ಸಜೀಪನಡು ಗ್ರಾಮದ ಬಿಜೆಪಿ ಮುಂದಾಳು, ಹಿಂದೂ ಸಂಘಟನೆ ಕಾರ್ಯಕರ್ತನ ಮೃತದೇಹ ಪಾಣೆಮಂಗಳೂರು ಬಳಿ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ತನಿಖೆ ಮುಂದುವರಿದಿದ್ದು, ಮರಣೋತ್ತರ ಪರೀಕ್ಷೆಯ ವರದಿ ಕೈ ಸೇರಿದ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.
ಸಜೀಪನಡು ಗ್ರಾಮದ ಸಾನದ ಮನೆ ನಿವಾಸಿ ನಾಗೇಶ ಪೂಜಾರಿ ಅವರ ಪುತ್ರ ರಾಜೇಶ್ ಪೂಜಾರಿ(38) ಮೃತದೇಹವು ಜ. 12ರಂದು ನದಿಯಲ್ಲಿ ಪತ್ತೆಯಾಗಿದ್ದು, ಅವರ ದ್ವಿಚಕ್ರ ವಾಹನ ಪಾಣೆಮಂಗಳೂರು ಹಳೆ ಸೇತುವೆಯ ಮೇಲೆ ಬಿದ್ದಿರುವ ಹಿನ್ನೆಲೆಯಲ್ಲಿ ಸಂಶಯದಿಂದ ನದಿಯಲ್ಲಿ ಹುಡುಕಾಡಿದಾಗ ಮೃತದೇಹ ಸಿಕ್ಕಿತ್ತು.
ಈಗಾಗಲೇ ವಿಧಿ ವಿಜ್ಞಾನ ತಂಡ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಕೂಡ ಸ್ಪಷ್ಟಗೊಂಡಿಲ್ಲ. ಪೊಲೀಸ್ ಪ್ರಾಥಮಿಕ ಮಾಹಿತಿಯ ಪ್ರಕಾರ ರಾಜೇಶ್ ಪೂಜಾರಿ ಮೃತದೇಹದಲ್ಲಿ ಯಾವುದೇ ಗಾಯ ಕಲೆಗಳು ಕಂಡಿಲ್ಲ. ಹೀಗಾಗಿ ಯಾವ ರೀತಿ ಸಾವನ್ನಪ್ಪಿದ್ದಾರೆ ಎಂದು ಅನುಮಾನಗಳಿಗೆ ಉತ್ತರ ಸಿಕ್ಕಿಲ್ಲ.
ಅವರ ಕಿಸೆಯಲ್ಲಿ ಮೊಬೈಲ್ ಹಾಗೂ ಪರ್ಸ್ ಪತ್ತೆಯಾಗಿದ್ದು, ಮೊಬೈಲ್ ಕರೆಗಳ ಕುರಿತು ಕೂಡ ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಜತೆಗೆ ಸ್ಥಳೀಯ ಸಿಸಿ ಕೆಮರಾಗಳ ಪರಿಶೀಲನೆಯೂ ಮುಂದುವರಿದಿದ್ದು, ಹೀಗೆ ಎಲ್ಲ ಆಯಾಮಗಳ ತನಿಖೆೆಯ ಬಳಿಕ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬರುವ ಸಾಧ್ಯತೆ ಇದೆ.