Advertisement

ಟರ್ಫ್ ಕ್ಲಬ್‌ ಮೇಲೆ ಮುಂದುವರಿದ ಸಿಸಿಬಿ ದಾಳಿ

12:41 AM Dec 08, 2019 | Lakshmi GovindaRaj |

ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ (ಬಿಟಿಸಿ) ನಡೆಯುವ ಕುದುರೆ ರೇಸ್‌ನಲ್ಲೂ ಬೆಟ್ಟಿಂಗ್‌, ರೇಸ್‌ ಫಿಕ್ಸಿಂಗ್‌ ನಡೆಸುವ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರೂ. ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಸಿಸಿಬಿ ಅಧಿಕಾರಿಗಳು ಶನಿವಾರವೂ ದಾಳಿ ನಡೆಸಿ ಪರಿಶೀಲಿಸಿದ್ದು, ಇಬ್ಬರು ನೌಕರರನ್ನು ವಶಕ್ಕೆ ಪಡೆದಿದ್ದಾರೆ.

Advertisement

ಟರ್ಫ್ ಕ್ಲಬ್‌ನಲ್ಲಿದ್ದ 20 ಖಾಸಗಿ ಕೌಂಟರ್‌ಗಳ ಮೇಲೆ ಶುಕ್ರವಾರ ದಾಳಿ ನಡೆಸಿ, ಕೌಂಟರ್‌ ತೆಗೆಯದಂತೆ ಸೂಚಿಸಲಾಗಿತ್ತು. ಆದರೂ ಶನಿವಾರ ಕೌಂಟರ್‌ ತೆರೆದಿದ್ದಾರೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಹಾಗೂ ಡಿಸಿಪಿ ಕುಲದೀಪ್‌ ಕುಮಾರ್‌ ಜೈನ್‌ ನೇತೃತ್ವದಲ್ಲಿ ಹಠತ್ತಾಗಿ ಭೇಟಿ ನೀಡಿ ಪರಿಶೀಲಿಸಿದಾಗ ಒಂದು ಕೌಂಟರ್‌ ತೆರೆದು ಕಾರ್ಯ ನಿರ್ವಹಿಸುತ್ತಿದ್ದರು.

ಈ ವೇಳೆ ಇಬ್ಬರು ನೌಕರರನ್ನು ವಶಕ್ಕೆ ಪಡೆದುಕೊಂಡು ಹೈಗ್ರೌಂಡ್ಸ್‌ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು. ರೇಸ್‌ಕೋರ್ಸ್‌ನಲ್ಲಿರುವ ಖಾಸಗಿ ಬುಕ್ಕಿಗಳು, ಪಂಟರ್(ಬೆಟ್ಟಿಂಗ್‌ ಕಟ್ಟುವವರು)ಗಳಿಂದ ಕೌಂಟರ್‌ನಲ್ಲಿ ಬೆಟ್ಟಿಂಗ್‌ ಕಟ್ಟಿಸಿಕೊಳ್ಳುತ್ತಾರೆ. ಪಂಟರ್ ಒಂದು ಸಾವಿರ ಕಟ್ಟಿದರೆ ಅದಕ್ಕೆ ಬದಲಾಗಿ 100 ರೂ. ಎಂದು, ಹತ್ತು ಸಾವಿರ ಬೆಟ್ಟಿಂಗ್‌ ಕಟ್ಟಿದರೆ, ಒಂದು ಸಾವಿರ ರೂ. ಎಂದು ಬರೆದು ಚೀಟಿ ಕೊಡುತ್ತಿದ್ದರು.

ಒಂದು ವೇಳೆ ಪಂಟರ್ ಗೆದ್ದರೆ ಅವರಿಗೆ ಸಂಪೂರ್ಣ ಹಣ ಕೊಡುತ್ತಾರೆ. ಸೋತರೆ ಆ ಹಣವನ್ನು ಇಟ್ಟುಕೊಳ್ಳುವ ಮೂಲಕ ವಂಚನೆ ಮಾಡುತ್ತಿದ್ದರು. ಈ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರೂ. ತೆರಿಗೆ ವಂಚನೆ ಮಾಡುತ್ತಿದ್ದರು. ಜಿಎಸ್‌ಟಿಯೂ ಪಾವತಿ ಮಾಡುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಿಸಿಬಿ ತಂಡ ದಾಳಿ ನಡೆಸಿದೆ ಎಂದು ಸಿಸಿಬಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

40 ಬುಕ್ಕಿಗಳು ನ್ಯಾಯಾಂಗ ವಶಕ್ಕೆ: ಬೆಟ್ಟಿಂಗ್‌ ಹಣದ ಲೆಕ್ಕ ನೀಡದೆ ಅವ್ಯವಹಾರ ನಡೆಸುತ್ತಿದ್ದ ಆರೋಪದ ಮೇಲೆ ಶುಕ್ರವಾರ ದಾಳಿ ನಡೆಸಿದ ವೇಳೆ ವಶಕ್ಕೆ ಪಡೆದುಕೊಂಡಿದ್ದ 40 ಮಂದಿ ಬುಕ್ಕಿಗಳನ್ನು ಬಂಧಿಸಿ, ಶನಿವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಾಳಿ ವೇಳೆ ಬುಕ್ಕಿಗಳಿಂದ ಸುಮಾರು 96 ಲಕ್ಷ ನಗದು ಹಾಗೂ ಕೆಲವು ದಾಖಲೆಗಳನ್ನು ಜಪ್ತಿ ಮಾಡಲಾಗಿತ್ತು ಎಂದು ಸಿಸಿಬಿ ಪೊಲೀಸರು ಹೇಳಿದರು.

Advertisement

ಸಿಸಿಬಿ ದಾಳಿ ಬಗ್ಗೆ ಮಾಹಿತಿಯಿಲ್ಲ: ಬೆಂಗಳೂರು ಟರ್ಫ್ ಕ್ಲಬ್‌ (ಬಿಟಿಸಿ) ಮೇಲೆ ಶುಕ್ರವಾರ ನಡೆದ ದಾಳಿಯ ಬಗ್ಗೆ ಸಿಸಿಬಿಯವರು ಈವರೆಗೂ ಮಾಹಿತಿ ನೀಡಿಲ್ಲ. ಜಿಎಸ್‌ಟಿ ವಂಚನೆ ಬಗ್ಗೆ ಸಿಸಿಬಿ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗುವುದು. ಆ ಮಾಹಿತಿ ಆಧಾರಿಸಿ ತನಿಖೆ ನಡೆಸಲಾಗುವುದು ಎಂದು ಜಿಎಸ್‌ಟಿ ವಲಯದ ಪ್ರಧಾನ ಮುಖ್ಯ ಆಯುಕ್ತ ನಾಗೇಂದ್ರ ಕುಮಾರ್‌ ಸ್ಪಷ್ಟಪಡಿಸಿದರು.

ಕ್ಲಬ್‌, ಜಿಎಸ್‌ಟಿ ಪಾವತಿಸದೆ ವಂಚಿಸಿರುವುದು ಇಲಾಖೆಯ ಗುಪ್ತಚರ ಅಧಿಕಾರಿಗಳಿಂದ ಮಾಹಿತಿ ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. “ಟರ್ಫ್‌ ಕ್ಲಬ್‌ನಲ್ಲಿ ಬುಕ್ಕಿಗಳು ಅವ್ಯವಹಾರ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಬುಕ್ಕಿಗಳು ನಗದು ವ್ಯವಹಾರ ನಡಸುವ ಮೂಲಕ ಜಿಎಸ್‌ಟಿ ವಂಚನೆ ಮಾಡಲಾಗುತ್ತಿದೆ.

ಸರ್ಕಾರ ನಿಗದಿಪಡಿಸಿದ ದರಕ್ಕಿಂತ ದುಪ್ಪಟ್ಟು ಹಣ ನೀಡಿ ಬುಕ್ಕಿಗಳು ಪಂಟರ್ಸ್‌ಗಳನ್ನು ಸೆಳೆಯುತ್ತಿದ್ದಾರೆ. ಒಂದೂವರೆ ವರ್ಷ ಜಿಎಸ್‌ಟಿ ಪಾವತಿಸಿದ ಟರ್ಫ್‌ ಕ್ಲಬ್‌, ಹೈಕೋರ್ಟ್‌ ಮೆಟ್ಟಿಲು ಕೂಡ ಏರಿತ್ತು. ಆದರೆ, ಕೊನೆಗೆ ಕೋರ್ಟ್‌ ನಮ್ಮ ಪರ ತೀರ್ಪು ನೀಡಿತು. ಬಳಿಕ 140 ಕೋಟಿ ಜಿಎಸ್‌ಟಿ ಪಾವತಿಸಿದ್ದಾರೆ’ ಎಂದು ಇದೇ ವೇಳೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next