Advertisement

ಮುಂದುವರಿದ ಕರ ನಿರಾಕರಣೆ ಸತ್ಯಾಗ್ರಹ

10:53 AM Oct 16, 2017 | |

ಬೆಂಗಳೂರು: ಕೈ ಉತ್ಪನ್ನಗಳ ಮೇಲಿನ ಸುಂಕ ರದ್ದು ಮಾಡಲು ಪಕ್ಷಾತೀತವಾಗಿ ಜನಪ್ರತಿನಿಧಿಗಳು ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿ ಹಿರಿಯ ರಂಗಕರ್ಮಿ ಕೆ.ಪ್ರಸನ್ನ ನೇತೃತ್ವದಲ್ಲಿ ನಿಡುಮಾಮಿಡಿ ಮಠದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಭಾನುವಾರವೂ ಮುಂದುವರಿದಿತ್ತು. ರಾಜ್ಯದಲ್ಲಿ ಶೇ.60ರಷ್ಟು ಮಂದಿ ಗಾಣಿಗರು, ಕುರುಬರು, ಕುಂಬಾರರು ಸೇರಿದಂತೆ ಹಲವು ಉಪಜಾತಿಗಳ ಜನರು ಕೈ ಉತ್ಪನ್ನಗಳನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್‌ಟಿ ನೀತಿಯು ಈ ಉಪಜಾತಿಗಳನ್ನು ಬೀದಿಗೆ ತರಲಿದೆ.

Advertisement

ಆದ್ದರಿಂದ ರಾಜಕೀಯ ಪಕ್ಷಗಳು, ಮುಖಂಡರು ಪಕ್ಷಾತೀತವಾಗಿ ಕೈಉತ್ಪನ್ನಗಳ ಮೇಲಿನ ಸುಂಕ ರದ್ದು ಮಾಡಲು ಜಿಎಸ್‌ಟಿ ಕೌನ್ಸಿಲ್‌ಗೆ ಪತ್ರ ಬರೆಯಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದ್ದಾರೆ. ಕೈ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಿರುವ ವಿಚಾರ ವನ್ನು ಕಾಂಗ್ರೆಸ್‌ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಗಮನಕ್ಕೆ ತರಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದ್ದು, ರಾಜ್ಯವನ್ನು ಪ್ರತಿನಿಧಿಸುತ್ತಿರುವ ಜಿಎಸ್‌ಟಿ ಕೌನ್ಸಿಲ್‌ನ ಸದಸ್ಯರು ಮೊದಲು ಈ ಹೋರಾಟಕ್ಕೆ ಸ್ಪಂದಿಸಬೇಕು. ಆದರೆ, ಇದುವರೆಗೂ ಯಾವ ಸದಸ್ಯರು ಭೇಟಿ ನೀಡಿ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದರು.

ಭಾನುವಾರ ಹಿರಿಯ ಚಿಂತಕ ಕೆ.ಮರುಳಸಿದ್ದಪ್ಪ, ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಮಾಧ್ಯಮ ವಕ್ತಾರ ಪ್ರೊ. ರಾಜೀವ್‌ಗೌಡ, ಲೇಖಕ ಮುಡ್ನಾಕೊಡು ಚಿನ್ನಸ್ವಾಮಿ, ರಂಗಕರ್ಮಿ ಮಲ್ಲಿಕಾ ಗಣೇಶ್‌, ಹೋರಾಟಗಾರ ಎಸ್‌. ಆರ್‌.ಹಿರೇಮಠ, ಬ್ರಿಜೇಶ್‌ ಕಾಳಪ್ಪ, ಆಂಜನೇಯರೆಡ್ಡಿ, ಮಾಜಿ ಸಚಿವ ಎಂ.ಚಂದ್ರಶೇಖರ್‌ ಅವರ ಪತ್ನಿ ಸರೋಜಾ ಚಂದ್ರಶೇಖರ್‌ ಸೇರಿದಂತೆ ಹಲವರು ಪ್ರತಿ ಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಗ್ರಾಮಸೇವಾ ಸಂಘದಿಂದ ನಡೆಯುತ್ತಿರುವ ಹೋರಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಸಂಬಂಧಪಟ್ಟ ಜಿಎಸ್‌ಟಿ ಕೌನ್ಸಿಲ್‌ ಸದಸ್ಯರು, ಕೇಂದ್ರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next