ಮುಂಬಯಿ: ಷೇರು ಮಾರುಕಟ್ಟೆಯಲ್ಲಿ ಬಜೆಟ್ ಅನಂತರದ ಆಘಾತ ಮುಂದುವರಿದಿದ್ದು, ಸೋಮವಾರ ಕೂಡ ಸೆನ್ಸೆಕ್ಸ್ 310 ಅಂಕ ಕುಸಿತ ಕಂಡಿದೆ. ಒಂದೆಡೆ ಬಜೆಟ್ ಘೋಷಣೆಗಳ ಹಿನ್ನಡೆಯಾದರೆ, ಇತರ ದೇಶಗಳ ಷೇರು ಮಾರುಕಟ್ಟೆಯಲ್ಲೂ ಕುಸಿತ ಕಂಡಿರುವುದು ಷೇರುದಾರರಲ್ಲಿ ಆತಂಕ ಮೂಡಿಸಿದೆ. ಹೀಗಾಗಿ ಷೇರುಗಳನ್ನು ಮಾರಾಟ ಮುಂಬಯಿ ಮಾರುಕಟ್ಟೆಯಲ್ಲೂ ವಿಪರೀತವಾಗಿ ಸಾಗಿದೆ. ದಿನದ ಕೊನೆಯಲ್ಲಿ ಸೆನ್ಸೆಕ್ಸ್ 309.59 ಅಂಕ ಕುಸಿದು 34,757.16 ಆಗಿದ್ದರೆ, ನಿಫ್ಟಿ 94.05 ಅಂಕ ಕುಸಿದು, 10666.55 ಆಗಿದೆ. ಕಳೆದ 2 ಸೆಷನ್‌ನಲ್ಲಿ 5 ಲಕ್ಷ ಕೋಟಿ ನಷ್ಟವುಂಟಾಗಿದೆ. ಷೇರು ಮಾರುಕಟ್ಟೆಯಲ್ಲಿ ದೀರ್ಘಾವಧಿ ಬಂಡವಾಳ ಹೂಡಿಕೆಯಿಂದ ಗಳಿಸಿದ ಲಾಭದ ಮೇಲೆ ಶೇ. 10ರಷ್ಟು ತೆರಿಗೆ ವಿಧಿಸಿರುವುದು, ಮಾರುಕಟ್ಟೆ ಕುಸಿತಕ್ಕೆ ಕಾರಣ. ಇನ್ನೊಂದೆಡೆ ರೆಪೋ ದರವನ್ನು ಆರ್‌ಬಿಐ ಹೆಚ್ಚಿಸುವ ಭೀತಿಯಿಂದ ಷೇರುದಾರರು ಎಚ್ಚರಿಕೆಯ ಹೆಜ್ಜೆ ಇರಿಸುತ್ತಿದ್ದಾರೆ.