Advertisement

ಡಿಕೆಶಿ ವಿರುದ್ಧ ಮುಂದುವರಿದ ವಾಗ್ಧಾಳಿ

10:46 PM Dec 28, 2019 | Lakshmi GovindaRaj |

ಬೆಂಗಳೂರು: ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ನಲ್ಲಹಳ್ಳಿ ಗ್ರಾಮದ ಕಪಾಲ ಬೆಟ್ಟದಲ್ಲಿ ಜಗತ್ತಿನ ಎತ್ತರದ ಯೇಸುಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಹಿಂದಿನ ಸರ್ಕಾರದ ಅವಧಿಯಲ್ಲಿ ಗೋಮಾಳ ಭೂಮಿ ಮಂಜೂರು ಮಾಡಿಸಿರುವುದನ್ನು ಖಂಡಿಸಿ ಬಿಜೆಪಿ ನಾಯಕರು ಶನಿವಾರವೂ ಆರೋಪ ಮುಂದುವರಿಸಿದರು.

Advertisement

ಈ ನಡುವೆ, ಹಾರೋಬೆಲೆ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್‌ಗೆ ಮಂಜೂರಾಗಿರುವ ಗೋಮಾಳ ಜಾಗವನ್ನು ಹಿಂಪಡೆಯಲು ಸರ್ಕಾರ ಗಂಭೀರ ಚಿಂತನೆ ನಡೆಸಿದಂತಿದೆ. ಅದಕ್ಕೆ ಪೂರಕವಾಗಿ ಎಂಬಂತೆ ಉಪಮುಖ್ಯ ಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರು ಗೋಮಾಳ ಭೂಮಿ ಹಂಚಿಕೆ ಕುರಿತು ವರದಿ ಪಡೆದ ಬಳಿಕ ಜಾಗವನ್ನು ವಶಕ್ಕೆ ಪಡೆಯುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.

ಸಚಿವ ಸಿ.ಟಿ.ರವಿ, ಇಸ್ಕಾನ್‌ನ “ಕೃಷ್ಣಲೀಲಾ ಥೀಮ್‌ ಪಾರ್ಕ್‌’ ಯೋಜನೆ ವಿರೋಧಿಸಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌, ಇದೀಗ ಏಕಾಏಕಿ ಕಪಾಲ ಬೆಟ್ಟದಲ್ಲಿ ಯೇಸುಕ್ರಿಸ್ತನ ಬೃಹತ್‌ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿ ರುವುದರ ಹಿಂದಿನ ಮರ್ಮವೇನು ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ನಾಯಕರ ಟೀಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕೆಪಿಸಿಸಿ ಕಾರ್ಯಾ ಧ್ಯಕ್ಷ ಈಶ್ವರ ಖಂಡ್ರೆ, ಬಿಜೆಪಿ ಪ್ರತಿಯೊಂದು ವಿಚಾರದಲ್ಲೂ ರಾಜಕೀಯ ಮಾಡಿ, ಕೋಮು ಭಾವನೆಗಳನ್ನು ಕೆರಳಿಸುತ್ತದೆ ಎಂದು ಕಿಡಿ ಕಾರಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಪ್ರತಿಕ್ರಿ ಯಿಸಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಕನಕಪುರದ ಕಪಾಲಬೆಟ್ಟ ಸಾಧು- ಸಂತರು ಧ್ಯಾನ ಮಾಡಿದ ಪವಿತ್ರ ಸ್ಥಳವಾಗಿದೆ. ಇಂತಹ ಸ್ಥಳದಲ್ಲಿ ಬೇರೊಂದು ಧರ್ಮಕ್ಕೆ ಸೇರಿದವರ ಪ್ರತಿಮೆ ಪ್ರತಿಷ್ಠಾಪಿ ಸುವುದು ಸರಿಯಲ್ಲ ಎಂಬುದು ಸಾರ್ವ ಜನಿಕರ ಆಗ್ರಹವಾಗಿದೆ. ಪ್ರತಿಮೆ ಸ್ಥಾಪಿಸಲು ಉದ್ದೇಶಿಸಿರುವ ಜಾಗ ಗೋಮಾಳಕ್ಕೆ ಸೇರಿದ್ದು ಎನ್ನಲಾಗಿದ್ದು, ಈ ಕುರಿತು ವರದಿ ಬಂದ ನಂತರ ಜಾಗವನ್ನು ವಶಕ್ಕೆ ಪಡೆಯುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಚಿವ ಸಿ.ಟಿ.ರವಿ, ಈ ಹಿಂದೆ ಇಸ್ಕಾನ್‌ ಸಂಸ್ಥೆ ರೂಪಿಸಿದ “ಕೃಷ್ಣ ಲೀಲಾ ಥೀಮ್‌ ಪಾರ್ಕ್‌’ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದ ಡಿ.ಕೆ.ಶಿವಕುಮಾರ್‌ ಅವರು, ಈಗ ಏಕಾಏಕಿ ರಾಮನಗರದ ಕಪಾಲ ಬೆಟ್ಟದಲ್ಲಿ ಯೇಸು ಕ್ರಿಸ್ತನ ಬೃಹತ್‌ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿರುವುದರ ಹಿಂದಿನ ಮರ್ಮ ಏನು? ಎಂದು ಪ್ರಶ್ನಿಸಿದರು.

Advertisement

ಯೇಸುಕ್ರಿಸ್ತನ ಪ್ರತಿಮೆ ನಿರ್ಮಾಣದ ಹಿಂದೆ ರಾಜಕೀಯ ಲಾಭ ಅಡಗಿದೆ. ತಮ್ಮ ಮೇಲಿನ ವಕ್ರದೃಷ್ಟಿ ದೂರವಾಗಿ ಮೇಲಿನವರ ಕೃಪಾಕಟಾಕ್ಷ ತಮ್ಮ ಮೇಲೆ ಬೀಳಲಿ ಎಂಬ ಉದ್ದೇಶ ಕೂಡ ಇದರಲ್ಲಿದೆ. ಅವರು ಕ್ರಿಸ್ತನಿಗೆ ಪರವಾಗಿರುವುದು ಸರಿ. ಆದರೆ, ಕೃಷ್ಣನನ್ನು ವಿರೋಧಿಸಿದ್ದು ಏಕೆ?ಎಂದು ಪ್ರಶ್ನಿಸಿದರು.

ಕಪಾಲ ಬೆಟ್ಟದಲ್ಲಿ ಯೇಸು ಕ್ರಿಸ್ತನ ಬೃಹತ್‌ ಪ್ರತಿಮೆ ಸ್ಥಾಪನೆಗೆ ನಿಗದಿಯಾಗಿರುವ ಭೂಮಿ, ಸರ್ಕಾರದಿಂದ ಮಂಜೂರಾದ ಭೂಮಿಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಕಾನೂನು ಚೌಕಟ್ಟಿನೊಳಗೆ ಪ್ರತಿಮೆ ಸ್ಥಾಪನೆಗೆ ನಮ್ಮ ವಿರೋಧವಿಲ್ಲ. ನ್ಯಾಯಾಲಯದ ನಿರ್ದೇಶನ, ಹಿಂದಿನ ಸರ್ಕಾರದ ಸಚಿವ ಸಂಪುಟದ ನಿರ್ಣಯ ಮತ್ತಿತರ ವಿಷಯಗಳ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಗೋಮಾಳ, ಕಾಯ್ದಿರಿಸಿದ ಭೂಮಿಯಾಗಿದ್ದರೆ ಸರ್ಕಾರ ಭೂಮಿಯನ್ನು ವಾಪಸ್‌ ಪಡೆಯಲಿದೆ.
-ಜೆ.ಸಿ.ಮಾಧುಸ್ವಾಮಿ, ಸಚಿವ

ಜೈಲಿಗೆ ಹೋಗುವಾಗ ಯಾವ ದೇವಸ್ಥಾನಕ್ಕೆ ಹೋಗಬೇಕು. ಜೈಲಿನಿಂದ ಬಿಡುಗಡೆ ಆದ ಮೇಲೆ ಯಾವ ದೇವಾಲಯಕ್ಕೆ ಹೋಗಬೇಕು. ಹಾಗೆಯೇ ರಾಜಕೀಯದಲ್ಲಿ ಅಧಿಕಾರ ಹಿಡಿಯಬೇಕು ಎಂದಾದರೆ ಯಾವ ದೇವರನ್ನು ಪ್ರತಿಷ್ಠಾಪನೆ ಮಾಡಬೇಕು ಎಂಬುವುದನ್ನು ಡಿ.ಕೆ.ಶಿವಕುಮಾರ್‌ ಅವರು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ.
-ಸಿ.ಟಿ.ರವಿ, ಸಚಿವ

ಸಂಸದ ಅನಂತ ಕುಮಾರ್‌ ಹೆಗಡೆ ರಾಜಕೀಯದಲ್ಲಿ ಇರುವುದಕ್ಕೆ ನಾಲಾಯಕ್‌. ಇಂಥವರು ದೇಶಕ್ಕೇ ಮಾರಕ. ಸಿ.ಟಿ.ರವಿಯಂತಹವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ದೇಶದ ಏಕತೆಗೆ ಇವರ ಹೇಳಿಕೆಗಳು ಮಾರಕ. ದೇಶದಲ್ಲಿ ಎಲ್ಲ ಧರ್ಮದವರಿಗೂ ಬಾಳುವ ಹಕ್ಕಿದೆ. ಆದರೆ, ಧರ್ಮದ ಆಧಾರದ ಮೇಲೆ ಟೀಕೆ ಮಾಡುವುದು ಖಂಡನೀಯ. ಕೋಮು ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ.
-ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next