Advertisement

Ram Mandir Case: ಮುಂದುವರಿದ “ನನ್ನನ್ನೂ ಬಂಧಿಸಿ” ಹೋರಾಟ

11:11 PM Jan 05, 2024 | Team Udayavani |

ಬೆಂಗಳೂರು: ಹುಬ್ಬಳ್ಳಿಯ ಕರಸೇವಕ ಶ್ರೀಕಾಂತ್‌ ಪೂಜಾರಿ ಬಂಧನ ವಿರೋಧಿಸಿ “ನಾನೂ ಕರಸೇವಕ, ನನ್ನನ್ನೂ ಬಂಧಿಸಿ” ಅಭಿಯಾನವನ್ನು ರಾಜ್ಯಾದ್ಯಂತ ತೀವ್ರಗೊಳಿಸಿರುವ ಬಿಜೆಪಿ ನಾಯಕರು, ವಿವಿಧ ಠಾಣೆಗಳೆದುರು ಒಂಟಿ ಹೋರಾಟಕ್ಕಿಳಿದಿದ್ದು, “ತಾಕತ್ತಿದ್ದರೆ ನಮ್ಮನ್ನೂ ಬಂಧಿಸಿ” ಎಂದು ರಾಜ್ಯ ಸರಕಾರಕ್ಕೆ ಸವಾಲು ಹಾಕಿದ್ದಾರೆ.

Advertisement

ಶುಕ್ರವಾರ ಬೆಂಗಳೂರಿನ ವಿವಿಧ ಠಾಣೆಗಳ ಮುಂದೆ ಫ‌ಲಕ ಹಿಡಿದು ಪ್ರತ್ಯೇಕವಾಗಿ ಪ್ರತಿಭಟಿಸಿದ ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌, ಮಾಜಿ ಸಚಿವರಾದ ಸುರೇಶ ಕುಮಾರ್‌, ರಾಮಚಂದ್ರೇ ಗೌಡ, ಸಂಸದ ಪಿ.ಸಿ. ಮೋಹನ್‌, ಮೇಲ್ಮನೆ ಸದಸ್ಯ ರವಿಕುಮಾರ್‌ ಸಹಿತ ಹಲವರನ್ನು ವಶಕ್ಕೆ ಪಡೆದ ಪೊಲೀಸರು, ಕೆಲವು ಸಮಯದ ಬಳಿಕ ಬಿಡುಗಡೆಗೊಳಿಸಿದರು.
ಮಲ್ಲೇಶ್ವರ ಪೊಲೀಸ್‌ ಠಾಣೆ ಮುಂದೆ ಫ‌ಲಕ ಹಿಡಿದು ಮೌನ ಪ್ರತಿಭಟನೆ ನಡೆಸಿದ ಮಾಜಿ ಸಚಿವ ಎಸ್‌.ಸುರೇಶ ಕುಮಾರ್‌ಗೆ ಮಾಜಿ ಸಚಿವ ರಾಮಚಂದ್ರೇ ಗೌಡ ಸಾಥ್‌ ನೀಡಿದರು. ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆಯುವ ವೇಳೆ ಜಮಾಯಿಸಿದ ಕಾರ್ಯಕರ್ತರು, “ಜೈ ಶ್ರೀರಾಮ್‌’ ಘೋಷಣೆ ಕೂಗಿ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿದರು.

ಇತ್ತ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ಕುಳಿತ ವಿಪಕ್ಷ ನಾಯಕ ಆರ್‌.ಅಶೋಕ್‌ ಅವರಿಗೆ ಸಂಸದ ಪಿ.ಸಿ. ಮೋಹನ್‌, ಮೇಲ್ಮನೆ ಸದಸ್ಯ ಎನ್‌.ರವಿಕುಮಾರ್‌ ಸಹಿತ ಹಲವರು ಕೈಜೋಡಿಸಿದರು. ಧರಣಿನಿರತನ್ನು ಪೊಲೀಸರು ವಶಕ್ಕೆ ಪಡೆದು, ಬಿಡುಗಡೆ ಮಾಡಿದರು.

ಸಿಎಂರಿಂದ ಹಸಿ ಸುಳ್ಳು
ಇದಕ್ಕೂ ಮುನ್ನ ಮಾತನಾಡಿದ ಆರ್‌.ಅಶೋಕ್‌, ಕರಸೇವಕ ಶ್ರೀಕಾಂತ್‌ ಪೂಜಾರಿ ವಿರುದ್ಧ ಇದ್ದ 16 ಪ್ರಕರಣಗಳ ಪೈಕಿ 15 ಪ್ರಕರಣಗಳು ತಾರ್ಕಿಕ ಅಂತ್ಯ ಕಂಡಿದ್ದರೂ 16 ಪ್ರಕರಣಗಳಿವೆ ಎಂಬ ಹಸಿ ಸುಳ್ಳನ್ನು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅವರಿಗೆ ಆಡಳಿತದ ಮೇಲೆ ನಿಯಂತ್ರಣ ತಪ್ಪುತ್ತಿದೆ ಅಥವಾ ಕಾಣದ ಕೈಗಳು ದಿಕ್ಕು ತಪ್ಪಿಸುತ್ತಿವೆ. ಹುಬ್ಬಳ್ಳಿಯಂತೆ ಚಿಕ್ಕಮಗಳೂರು, ಕಲಬುರಗಿ ಮೊದಲಾದ ಕಡೆ ಇಂತಹುದೇ ವಾತಾವರಣ ಸೃಷ್ಟಿಸುತ್ತಿದ್ದಾರೆ. ತುರ್ತು ಪರಿಸ್ಥಿತಿ ಹೇರುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿರಲು ಅವರು ನೈತಿಕತೆ ಕಳೆದುಕೊಂಡಿದ್ದಾರೆ. ಶ್ರೀಕಾಂತ್‌ ಪೂಜಾರಿ ಅವರನ್ನು ಬಿಡುಗಡೆ ಮಾಡಬೇಕು. ಹುಬ್ಬಳ್ಳಿ ಪೊಲೀಸ್‌ ಇನ್‌ಸ್ಪೆಕ್ಟರ್‌ನನ್ನು ಅಮಾನತು ಮಾಡಬೇಕು. ಸುಳ್ಳು ಹೇಳಿದ ಸಿಎಂ ರಾಜ್ಯದ ಜನರ ಕ್ಷಮೆ ಕೇಳಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸಿಎಂ ವಿರುದ್ಧ ಅವಾಚ್ಯ ಶಬ್ದ ಬಳಸಿಲ್ಲ: ಮಹೇಶ
ಹುಬ್ಬಳ್ಳಿ: ಕರಸೇವಕ ಶ್ರೀಕಾಂತ್‌ ಪೂಜಾರಿ ಪರ ಪ್ರತಿಭಟನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಆದಿಯಾಗಿ ಯಾರೂ ಅವಾಚ್ಯ ಶಬ್ದಗಳಿಂದ ನಿಂದಿಸಿಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಸ್ಪಷ್ಟಪಡಿಸಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ| ಜಿ. ಪರಮೇಶ್ವರ ಅವರು ಶ್ರೀಕಾಂತ್‌ ಪೂಜಾರಿ ಮೇಲೆ 16 ಪ್ರಕರಣಗಳಿವೆ ಎಂದು ಬಿಂಬಿಸಿ ಪ್ರಚಾರ ಮಾಡಿದ್ದಾರೆ. ಶ್ರೀಕಾಂತ ಮೇಲಿರುವ 16 ಕೇಸ್‌ಗಳಲ್ಲಿ 15ರಲ್ಲಿ ಬಿಡುಗಡೆಯಾಗಿರುವ ಮಾಹಿತಿ ಇದೆ. ಈಗ ಅವರು ಸಿಎಂ, ಗೃಹ ಸಚಿವರ ಮೇಲೆ ಪ್ರಕರಣ ದಾಖಲಿಸಬೇಕೆ ಎಂದು ಪ್ರಶ್ನಿಸಿದರು. ಜವಾಬ್ದಾರಿ ಸ್ಥಾನದಲ್ಲಿರುವವರು ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ಒಂದು ಸುಳ್ಳು ನೂರು ಬಾರಿ ಹೇಳಿ ಸತ್ಯ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

ರಾಜಕೀಯ ಉದ್ದೇಶದ ಹೋರಾಟ: ಪರಮೇಶ್ವರ್‌
ಮಾಗಡಿ(ಬೆಂಗಳೂರು ಗ್ರಾ.): ಕರಸೇವಕ ಶ್ರೀಕಾಂತ್‌ ಪೂಜಾರಿ 16 ಪ್ರಕರಣಗಳಲ್ಲಿ ಭಾಗಿಯಾಗಿದ್ದು ಸತ್ಯ. ಅದರ ಬಗ್ಗೆ ದಾಖಲೆಗಳಿವೆ. ಇಂತಹ ವ್ಯಕ್ತಿ ಪರವಾಗಿ ಬಿಜೆಪಿಯವರು ಇಷ್ಟೊಂದು ಹೋರಾಟ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರ ಜತೆ ಮಾತನಾಡಿ, ಹಳೆಯ 26 ಕೇಸ್‌ಗಳನ್ನೂ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಅದರಲ್ಲಿ ಬೇರೆ ಹಿಂದೂಗಳೂ ಇದ್ದಾರೆ. ಅವರ ಬಗ್ಗೆ ಯಾಕೆ ಬಿಜೆಪಿಯವರು ಹೋರಾಟ ಮಾಡುತ್ತಿಲ್ಲ? ಶ್ರೀಕಾಂತ್‌ ಪೂಜಾರಿ ಎಂಬ ವ್ಯಕ್ತಿ ಬಗ್ಗೆ ಮಾತ್ರ ಇಷ್ಟೊಂದು ಹೋರಾಟ ಯಾಕೆ? ಇದು ರಾಜಕೀಯ ಉದ್ದೇಶದಿಂದ ಮಾಡುತ್ತಿರುವ ಹೋರಾಟ ಎಂದು ಹೇಳಿದರು.

ರಾಮಭಕ್ತರ ಉತ್ಸಾಹ, ಮೆರವಣಿಗೆ, ಮಂತ್ರಾಕ್ಷತೆ ವಿತರಣೆ ಮೊದಲಾದವು ಕಾಂಗ್ರೆಸ್‌ ನಾಯಕರ ತಲೆ ಕೆಡುವಂತೆ ಮಾಡಿವೆ. ಕರಸೇವಕರನ್ನು ಬಂಧಿಸುವ ನೀಚತನವನ್ನು ಸರಕಾರ ತೋರುತ್ತಿದೆ. ಪ್ರಧಾನಿ ಮೋದಿ, ಮಾಜಿ ಸಿಎಂ ಯಡಿಯೂರಪ್ಪ ಸಹಿತ ನಾವೆಲ್ಲರೂ ಕರಸೇವಕರೇ ಆಗಿದ್ದೇವೆ. ಎಲ್ಲ ಜೈಲುಗಳನ್ನು ತೆರೆದು ತಾಕತ್ತಿದ್ದರೆ ನಮ್ಮನ್ನು ಬಂಧಿಸಲಿ.
ಆರ್‌.ಅಶೋಕ್‌, ವಿಪಕ್ಷ ನಾಯಕ

ಅಯೋಧ್ಯಾ ಚಳವಳಿ ನಡೆದು 3 ದಶಕ ಕಳೆದಿದೆ. ಕರಸೇವಕರ ಮೇಲಿದ್ದ ಪ್ರಕರಣಗಳನ್ನು ಕೆದಕಿ ಬಂಧಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ತಮಗೆ ಸಿಕ್ಕಿದ ಪ್ರತಿಯೊಂದು ಅವಕಾಶದಲ್ಲೂ ಹಿಂದೂ ವಿರೋಧಿ ಎಂಬುದನ್ನು ರುಜುವಾತು ಮಾಡಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಹಿಂದೂ ವಿರೋಧಿ ಮನಸ್ಥಿತಿ ಇರುವ ರಾಜಕೀಯ ನಾಯಕರ ಆಡಳಿತವಿದೆ.
ಎಸ್‌.ಸುರೇಶಕುಮಾರ್‌, ಮಾಜಿ ಸಚಿವ

ನಾನು 10 ತಿಂಗಳು ಸಿಎಂ ಆಗಿದ್ದಾಗ ಕರಸೇವಕರ ಮೇಲಿದ್ದ ಪ್ರಕರಣಗಳನ್ನು ಹಿಂಪಡೆಯಲು ಪ್ರಯತ್ನಿಸಿದ್ದೆ. ಉಳಿದಂತೆ ಸದಾನಂದ ಗೌಡರು, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಇದ್ದರು. ಇಷ್ಟೆಲ್ಲ ಹೋರಾಟ ಮಾಡುತ್ತಿರುವ ಆರ್‌.ಅಶೋಕ್‌ 5 ವರ್ಷ ಗೃಹಮಂತ್ರಿ ಆಗಿದ್ದರು. ಎಷ್ಟು ಪ್ರಕರಣ ಹಿಂಪಡೆದಿದ್ದರು?
-ಜಗದೀಶ್‌ ಶೆಟ್ಟರ್‌, ಮಾಜಿ ಸಿಎಂ

 

Advertisement

Udayavani is now on Telegram. Click here to join our channel and stay updated with the latest news.

Next