Advertisement

ಬಿಜೆಪಿಯನ್ನೇ ಬೆಂಬಲಿಸಿ: ವೀರಶೈವ-ಲಿಂಗಾಯತರಿಗೆ ಯಡಿಯೂರಪ್ಪ ಮನವಿ

05:19 PM Feb 25, 2023 | Team Udayavani |

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ತಮ್ಮ ಬೆಂಬಲವನ್ನು ಮುಂದುವರೆಸಿ ಪಕ್ಷದ ಗೆಲುವನ್ನು ಖಚಿತಪಡಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶನಿವಾರ ಪ್ರಬಲ ವೀರಶೈವ-ಲಿಂಗಾಯತ ಸಮುದಾಯಕ್ಕೆ ಮನವಿ ಮಾಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ 79ರ ಹರೆಯದ ಲಿಂಗಾಯತ ಸಮುದಾಯದ ಪ್ರಬಲ ನಾಯಕರಾದ ನೀವು ಚುನಾವಣಾ ರಾಜಕೀಯದಿಂದ ನಿವೃತ್ತರಾದ ನಂತರವೂ ಸಮುದಾಯ ಬಿಜೆಪಿಯನ್ನು ಬೆಂಬಲಿಸುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ,  ಮನೆಯಲ್ಲಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಮತ ಯಾಚಿಸುವುದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ಹೇಳಿದರು.

”ವೀರಶೈವ-ಲಿಂಗಾಯತ ಸಮುದಾಯಕ್ಕೆ ನಾನು ಕೈ ಜೋಡಿಸಿ ಪ್ರಾರ್ಥಿಸುತ್ತೇನೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನನಗೆ ಇಲ್ಲಿಯವರೆಗೆ ಎಲ್ಲಾ ರೀತಿಯ ಅವಕಾಶಗಳನ್ನು ನೀಡಿದ್ದಾರೆ. ಫೆಬ್ರವರಿ 27 ರಂದು ನನಗೆ 80 ವರ್ಷ ತುಂಬುವ ಕಾರಣ ನಾನು ಸ್ವಯಂಪ್ರೇರಿತವಾಗಿ (ಚುನಾವಣಾ ರಾಜಕೀಯದಿಂದ) ನಿವೃತ್ತಿ ಹೊಂದುತ್ತಿದ್ದೇನೆ.ವೀರಶೈವ-ಲಿಂಗಾಯತ ಬಂಧುಗಳು ಯಾವುದೇ ಅಪಾರ್ಥ ಮಾಡಿಕೊಳ್ಳದೆ ಹಿಂದಿನಂತೆ ನನಗೆ ಬೆಂಬಲ ನೀಡಿ ಬಿಜೆಪಿ ಗೆಲ್ಲಿಸುವಂತೆ ಮಾಡಬೇಕು. ಇದು ಅವರಲ್ಲಿ ನನ್ನ ವಿನಂತಿ” ಎಂದರು.

ಯಡಿಯೂರಪ್ಪ ಅವರನ್ನು ಬಿಜೆಪಿ ಕಡೆಗಣಿಸುತ್ತಿದೆ ಮತ್ತು ಆ ಮೂಲಕ ಸಂಖ್ಯಾಬಲ ಮತ್ತು ರಾಜಕೀಯವಾಗಿ ಪ್ರಬಲ ಸಮುದಾಯದ ಮತಗಳನ್ನು ತಮ್ಮ ಪರವಾಗಿ ಸೆಳೆಯಲು ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿ ಎಸ್ ಪ್ರಯತ್ನಗಳ ನಡುವೆ ಈ ಹೇಳಿಕೆ ಬಂದಿದೆ.

ವೀರಶೈವ-ಲಿಂಗಾಯತರು ರಾಜ್ಯದ ಜನಸಂಖ್ಯೆಯ ಶೇಕಡಾ 17 ರಷ್ಟಿದ್ದಾರೆ ಎಂದು ಅಂದಾಜಿಸಲಾಗಿದ್ದು, ಅವರು ಬಿಜೆಪಿಯ ಪ್ರಬಲ ಮತ ಬ್ಯಾಂಕ್ ಆಗಿದ್ದಾರೆ. ಯಡಿಯೂರಪ್ಪ ಈಗಲೂ ಪ್ರಬಲ ವೀರಶೈವ-ಲಿಂಗಾಯತ ನಾಯಕ ಎಂದು ಪರಿಗಣಿಸಲ್ಪಟ್ಟಿದ್ದಾರೆ ಮತ್ತು ಸಮುದಾಯದ ಮೇಲೆ ಬಲವಾದ ಹಿಡಿತ ಉಳಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next