Advertisement

ಹೊರಗುತ್ತಿಗೆ ಕಾರ್ಮಿಕರ ಸೇವೆ ಮುಂದುವರಿಸಿ

02:34 PM May 09, 2020 | Suhan S |

ಹಾವೇರಿ: ಅಕ್ಷ‌ರ ದಾಸೋಹ ಕಾರ್ಯಕ್ರಮದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಸೇವೆಯನ್ನು ಮುಂದುವರಿಸಲು ಆಗ್ರಹಿಸಿ ಹತ್ತಾರುನೌಕರರು ಶುಕ್ರವಾರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಇಲ್ಲಿಯ ಹುಕ್ಕೇರಿಮಠದಲ್ಲಿ ಸಭೆ ಸೇರಿದ ಅನ್ಯಾಯಕ್ಕೊಳಗಾದ ಹೊರಗುತ್ತಿಗೆ ನೌಕರರು, ಯೋಜನೆಯಲ್ಲಿ ಮಾನವ  ಸಂಪನ್ಮೂಲ ಪಡೆಯಲು ಎಂಎಚ್‌ ಆರ್‌ಡಿ ಮಾರ್ಗಸೂಚಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಅಕ್ಷ‌ರ ದಾಸೋಹದ ವಿವಿಧ ಹಂತಗಳ ಕಚೇರಿಗಳಲ್ಲಿ 416 ನೌಕರರು ಕಳೆದ 10-12 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಸೇವಾವಧಿ ಮಾರ್ಚ್‌ಗೆ ಅಂತ್ಯಗೊಂಡಿದ್ದು, ಅದರಂತೆ ಕಚೇರಿ ಕರ್ತವ್ಯದಂತೆ ಬಿಡುಗಡೆಗೊಳಿಸಲಾಗಿದೆ. ಪ್ರತಿ ವರ್ಷದಂತೆ ಈ ಸಾಲಿನಲ್ಲಿ ಸೇವೆ ಮುಂದುವರಿಸಬಹುದು ಎಂಬ ನಿರೀಕ್ಷೆಯಲ್ಲಿ ವೇತನವಿಲ್ಲದೇ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ಯಾವುದೇ ಮುನ್ಸೂಚನೆಯಿಲ್ಲದೇ ದಿನಗೂಲಿ ನೌಕರರಿಗೆ ಸರ್ಕಾರ ಅನ್ಯಾಯ ಮಾಡಿದೆ ಎಂದು ನೌಕರರು ಆರೋಪಿಸಿದರು.

ಇಲ್ಲಿಯವರೆಗೂ ಮಾನವ ಸಂಪನ್ಮೂಲ ಸೇವೆಯನ್ನು ಮುಂದುವರಿಸುವ ಕುರಿತು ಯಾವುದೇ ಆದೇಶ ಹೊರಡಿಸಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಸೇವೆ ಮುಂದುವರಿಸುವ ಯಾವುದೇ ಸಾಧ್ಯತೆಗಳಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ಕಳೆದ ಅನೇಕ ವರ್ಷಗಳಿಂದ ಅಕ್ಷ‌ರ ದಾಸೋಹ ಕಚೇರಿಗಳಲ್ಲಿ ಸೇವೆ ಸಲ್ಲಿಸಿ ತಮ್ಮ ಬದುಕು ಕಟ್ಟಿಕೊಂಡಿದ್ದ ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದಾರೆ. ಕೆಲಸವಿಲ್ಲದೇ ಇವರ ಬದುಕು ಅತಂತ್ರವಾಗುವುದಲ್ಲದೇ ಅವಲಂಬಿಸಿರುವ ಕುಟುಂಬವೂ ಬೀದಿಗೆ ಬೀಳಲಿದೆ. ಆದ್ದರಿಂದ ಸರ್ಕಾರ ಸೇವೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ರೂಪಾ ದಾಮೋದರ, ಇಸ್ಮಾಯಿಲ್‌ ಮುಲ್ಲಾ, ಸುಧಾ ಅರಳಿಕಟ್ಟಿ, ಷರೀಫ್‌ ಗೊಣ್ಣೆಮ್ಮನವರ, ಮಂಜುನಾಥ ದೊಡ್ಮನಿ, ವಿನುತಾ ಬತ್ತಿ, ಚಂದ್ರಕಲಾ ಚಿಂದಿ, ಲಲಿತಾ ಸಂಕ್ರಣ್ಣನವರ ಇತರರು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next