ಬಳ್ಳಾರಿ: ಹಿಂದುಳಿದ ವರ್ಗ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಹೆಚ್ಚುವರಿ ಸಿಬ್ಬಂದಿಗಳನ್ನು ಸೇವೆಯಲ್ಲಿ ಮುಂದುವರಿಸಬೇಕು. ಬಾಕಿ ವೇತನ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ನೂರಾರು ಪದಾಧಿಕಾರಿಗಳು ನಗರ ಹೊರವಲಯದ ಆರೋಗ್ಯ ಮತ್ತು ಹಿಂದುಳಿದ ವರ್ಗಗಳ ಸಚಿವ ಬಿ. ಶ್ರೀರಾಮುಲು ನಿವಾಸದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯ ಹಾಸ್ಟೆಲ್, ವಸತಿ ಶಾಲೆಗಳಲ್ಲಿ ಹೆಚ್ಚುವರಿ ಸಿಬ್ಬಂದಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಇತ್ತೀಚೆಗೆ ನೇಮಕಾತಿ ಮಾಡಿಕೊಂಡ ಹಿನ್ನೆಲೆಯಲ್ಲಿ ಕಾಯಂ ಸಿಬ್ಬಂದಿ ನಿಯೋಜಿಸಲಾಗಿದ್ದು, ಇದರಿಂದ ಹೊರಗುತ್ತಿಗೆ ಆಧಾರದ ಹೆಚ್ಚುವರಿ ಸಿಬ್ಬಂದಿ ಕೆಲಸದಿಂದ ತೆಗೆಯುವಂತೆ ಸೂಚಿಸಿದೆ. ಪರಿಣಾಮ ರಾಜ್ಯಾದ್ಯಂತ ಸುಮಾರು 3 ಸಾವಿರಕ್ಕೂ ಹೆಚ್ಚು, ಬಳ್ಳಾರಿ ಜಿಲ್ಲೆಯಲ್ಲಿ 128ಕ್ಕೂ ಹೆಚ್ಚು ಸಿಬ್ಬಂದಿ ಕೆಲಸವಿಲ್ಲದೇ ಬೀದಿಗೆ ಬಂದಿದ್ದಾರೆ. ಹಾಗಾಗಿ ಕಾರಣ ನೀಡದೆ ಕೆಲಸದಿಂದ ತೆಗೆಯದೆ ಎಲ್ಲರನ್ನೂ ಮುಂದುವರೆಸಬೇಕು. ಬಾಕಿ ವೇತನವನ್ನು ಕೂಡಲೇ ಮಂಜೂರು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಹಾಸ್ಟೆಲ್, ವಸತಿ ಶಾಲೆಗಳಲ್ಲಿ ಹಲವು ವರ್ಷಗಳಿಂದ ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿರುವ ಹೆಚ್ಚುವರಿ ಸಿಬ್ಬಂದಿಗೆ ಭವಿಷ್ಯನಿಧಿ (ಪಿಎಫ್), ಇಎಸ್‌ಐ ಸೇರಿಹಲವು ಸೌಲಭ್ಯಗಳಿಲ್ಲದೇ ವಂಚಿತರಾಗಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ಮುಂಬರುವ ದಿನಗಳಲ್ಲಿ ಎಲ್ಲ ಸೌಲಭ್ಯಗಳೂ ದೊರೆಯಲಿವೆ ಎಂದು ಇಲ್ಲಿವರೆಗೆ ಕೆಲಸ ನಿರ್ವಹಿಸಲಾಗುತ್ತಿದೆ. ಆದರೇ, ಸರ್ಕಾರ ನಾನಾ ನೆಪವೊಡ್ಡಿ ನಮ್ಮ ನೌಕರರನ್ನು ಕೆಲಸದಿಂದ ಕೈಬಿಟ್ಟಿದ್ದು, ಇದರಿಂದ ಇದೇ ವೃತ್ತಿಯನ್ನೇ ಆಶ್ರಯಿಸಿದ ನಮ್ಮ ಸಿಬ್ಬಂದಿ ಬದುಕು ಮೂರಾಬಟ್ಟೆಯಾಗಿದೆ. ಸರ್ಕಾರದ ಈ ನಿರ್ಧಾರ ಅಮಾನವೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಕೂಡಲೇ ಈ ಕುರಿತು ಚರ್ಚಿಸಲು ಸರ್ಕಾರ ಜಂಟಿ ಸಭೆಯನ್ನು ಆಯೋಜಿಸಬೇಕು ಎಂದು ಒತ್ತಾಯಿಸಿದರು.
ಕಳೆದ 5-6 ತಿಂಗಳಿಂದ ನಮ್ಮ ಸಿಬ್ಬಂದಿ ಕನಿಷ್ಠ ವೇತನವನ್ನೂ ಪಾವತಿಸಿಲ್ಲ, ಕೆಲಸದಲ್ಲಿದ್ದರೂ ಹಾಜರಾತಿ ನೀಡುತ್ತಿಲ್ಲ. ಅವರಿಗೆ ವೇತನ ನೀಡದೇ ಪರದಾಡುವಂತೆ ಮಾಡಿದೆ. ಈ ಕುರಿತು ಕೂಡಲೇ ಸರ್ಕಾರ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ್, ಸಚಿವರಾದ ಬಿ. ಶ್ರೀರಾಮುಲು, ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರತಿನಿಧಿಗಳ ಸಭೆಯನ್ನು ಆಯೋಜಿಸಿ, ನಮ್ಮ ಸಮಸ್ಯೆಯನ್ನು ಆಲಿಸಿ ನ್ಯಾಯ ಕಲ್ಪಿಸಬೇಕು. ನಿರ್ಲಕ್ಷಿಸಿದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬಳಿಕ ಆರೋಗ್ಯ ಸಚಿವ ಬಿ. ಶ್ರೀರಾಮುಲು ಆಪ್ತ ಸಹಾಯಕರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಜಂಬಯ್ಯ ನಾಯಕ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜೆ.ಸತ್ಯಬಾಬು, ಜಿಲ್ಲಾಧ್ಯಕ್ಷ ಇ.ಆರ್. ಮಲ್ಲಪ್ಪ, ತಿರುಪತಿ, ಹನುಮಂತಪ್ಪ, ಚಿತ್ರದುರ್ಗ ಜಿಲ್ಲೆಯ ಡಿ.ಮಂಜುನಾಥ್, ತಿಮ್ಮೇಶ, ಉಚ್ಚೆಂಗಪ್ಪ, ಗೋವಿಂದರಾಜು, ಮಹಾಂತೇಶ್, ಶೆ„ಲಮ್ಮ, ರೇಖಾ, ಶಾಂತಾ, ಗಂಗಾವತಿ ರವಿ, ರುದ್ರಮ್ಮ, ಶ್ರೀಧರ್ ಸೇರಿದಂತೆ ರಾಜ್ಯಾದ್ಯಂತ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಸಿಬ್ಬಂದಿ ಇದ್ದರು.