Advertisement

ಅತಿಕ್ರಮಣ ತೆರವು ಮುಂದುವರಿಸಿ

03:20 PM Apr 11, 2017 | Team Udayavani |

ಹುಬ್ಬಳ್ಳಿ: ಅವಳಿ ನಗರದಲ್ಲಿ ಕೈಗೊಂಡಿರುವ ಪಾದಚಾರಿ ಮಾರ್ಗ(ಫ‌ುಟ್‌ಪಾತ್‌) ಅತಿಕ್ರಮಣ ತೆರವು ಕಾರ್ಯಾಚರಣೆ ಮುಂದುವರಿಸುವಂತೆ ಮಹಾಪೌರ ಡಿ.ಕೆ. ಚವ್ಹಾಣ ಆಯುಕ್ತರಿಗೆ ಆದೇಶಿಸಿದರು. ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ ಸದಸ್ಯರಾದ ಯಾಸೀನ್‌ ಹಾವೇರಿ ಪೇಟೆ, ದೀಪಕ ಚಿಂಚೋರೆ, ಜೆಡಿಎಸ್‌ನ ರಾಜು ಅಂಬೋರೆ ಇನ್ನಿತರ ಸದಸ್ಯರು ವಿಷಯ ಪ್ರಸ್ತಾಪಿಸಿ, ಆಯುಕ್ತರು ಸ್ವಪ್ರತಿಷ್ಠೆಗಾಗಿ ಫ‌ುಟ್‌ಪಾತ್‌ ಕಾರ್ಯಾಚರಣೆ ನಡೆಸಿದ್ದಾರೆ.

Advertisement

ದೊಡ್ಡ ಮಳಿಗೆಗಳ ಅತಿಕ್ರಮಣ ತೆರವು ಬಿಟ್ಟು ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯ ಮಾಡುತ್ತಿದ್ದು, ಬಿಜೆಪಿ ಸದಸ್ಯರನ್ನು ಸಂತೃಪ್ತಿಗೊಳಿಸಲು ಕಾರ್ಯಾಚರಣೆ ನಡೆದಿದೆ ಎಂದು ಆರೋಪಿಸಿದರು. ಧಾರವಾಡದಲ್ಲಿ 12 ಜನ ಸಣ್ಣ ವ್ಯಾಪಾರಸ್ಥರಿಗೆ ಅನ್ಯಾಯವಾಗಿದ್ದು, ಅವರಿಗೆ ನಷ್ಟ ತುಂಬಿ ಕೊಡಲು ತಲಾ 25 ಸಾವಿರ ರೂ.ಗಳ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ವಿಪಕ್ಷ ನಾಯಕ ಸುಭಾಸ ಶಿಂಧೆ, ಗಣೇಶ ಟಗರಗುಂಟಿ ಪರ್ಯಾಯ ವ್ಯವಸ್ಥೆ ಕೈಗೊಂಡು ತೆರವು ಮಾಡಬೇಕಿತ್ತು. ದೊಡ್ಡ ಮಳಿಗೆಗಳ ಅತಿಕ್ರಮ ತೆರವಿಗೆ ಮೊದಲು ಕ್ರಮ ಕೈಗೊಳ್ಳಿ ಎಂದರು. ಬಿಜೆಪಿ ಸದಸ್ಯರಾದ ವೀರಣ್ಣ ಸವಡಿ, ಡಾ| ಪಾಂಡುರಂಗ ಪಾಟೀಲ, ಶಿವು ಹಿರೇಮಠ, ನಿರ್ಮಲಾ ಜವಳಿ ಮಾತನಾಡಿ, ಪಾದಚಾರಿ ಮಾರ್ಗ ಅತಿಕ್ರಮಣ ತೆರವು ಕಾರ್ಯ ಉತ್ತಮವಾಗಿದೆ. 

ಕಾರ್ಯಾಚರಣೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಬೆಂಬಲ ಸೂಚಿಸಿದರಲ್ಲದೆ, ಪಾಲಿಕೆ ಸಭೆಯಲ್ಲಿ ನಾವೇ ಠರಾವು ಪಾಸ್‌ ಮಾಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಆಡಳಿತ ಹಾಗೂ ವಿಪಕ್ಷಗಳ ಕೆಲ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. 

ಹೊರನಡೆದ ಸದಸ್ಯರು: ಫ‌ುಟ್‌ಪಾತ್‌ ತೆರವು ಕಾರ್ಯಾಚರಣೆ ನೆಪದಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಅನೇಕ ವರ್ಷಗಳಿಂದ ಸಣ್ಣ ಪುಟ್ಟ ಅಂಗಡಿ ಇರಿಸಿಕೊಂಡಿದ್ದವರನ್ನು ತೆರವುಗೊಳಿಸಲಾಗಿದ್ದು, 12 ಜನರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಮಹಾಪೌರರ ಪೀಠದ ಮುಂದೆ ತೆರಳಿ ಒತ್ತಾಯಿಸಿದ ಕಾಂಗ್ರೆಸ್‌ ಸದಸ್ಯರಾದ ದೀಪಕ ಚಿಂಚೋರೆ, ಯಾಸೀನ್‌ ಹಾವೇರಿಪೇಟೆ, ಜೆಡಿಎಸ್‌ನ ರಾಜು ಅಂಬೋರೆ ಸಭೆಯಿಂದ ಹೊರ ನಡೆದರು. 

Advertisement

ಸದಸ್ಯರ ಅನಿಸಿಕೆಗಳನ್ನು ಆಲಿಸಿದ ಮಹಾಪೌರ ಡಿ.ಕೆ. ಚವ್ಹಾಣ, ಫ‌ುಟ್‌ಪಾತ್‌ ತೆರವು ಕಾರ್ಯಾಚರಣೆಯನ್ನು ಮುಂದುವರಿಸುವಂತೆ ಆಯುಕ್ತರಿಗೆ ಸೂಚಿಸುವ ಮೂಲಕ ಬಿಸಿಯೇರಿದ ಚರ್ಚೆಗೆ ತೆರೆ ಎಳೆದರು.

ವಾರ್ಡ್‌ ನಿಧಿ ಈ ವರ್ಷಕ್ಕೆ ಅನ್ವಯ: ಮಾಜಿ ಮಹಾಪೌರ ಮಂಜುಳಾ ಅಕ್ಕೂರ ಮಾತನಾಡಿ, ತಾವು ಮಹಾಪೌರರಾಗಿದ್ದಾಗ ಪ್ರತಿ ವಾರ್ಡ್‌ಗೆ 25 ಲಕ್ಷ ರೂ. ಹಾಗೂ ಮಹಾಪೌರ ನಿಧಿ ಬಿಡುಗಡೆ ಮಾಡಿದ್ದರೂ ಇದುವರೆಗೆ ಅದನ್ನು ಆಯುಕ್ತರು ಜಾರಿಗೊಳಿಸುತ್ತಿಲ್ಲ. ಮಹಾಪೌರ ನಿಧಿಯಾಗಿ ನೀಡಿದ ಹಣವನ್ನು ಸಹ ಬಿಡುಗಡೆ ಮಾಡುತ್ತಿಲ್ಲ. ಪಾಲಿಕೆ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗೆ ನಿರ್ಲಕ್ಷ್ಯ ತೋರಲಾಗಿದೆ ಎಂದು ಆರೋಪಿಸಿದರು. 

ಆಯುಕ್ತರು ಮಾತನಾಡಿ, ಮಹಾಪೌರರ ನಿಧಿಯಡಿ ಸುಮಾರು 1.50 ಕೋಟಿ ರೂ. ಬಳಕೆ ಆಗಿದೆ. ಈ ಬಗ್ಗೆ ಪರಿಶೀಲಿಸಿ ಹಣ ನೀಡುವುದಿದ್ದರೆ ಬಿಡುಗಡೆ ಮಾಡುವುದಾಗಿ ಹೇಳಿದರಲ್ಲದೆ, ವಾರ್ಡ್‌ ನಿಧಿಯನ್ನು 2017-18ನೇ ಆಯ-ವ್ಯಯದಲ್ಲಿ ಪರಿಗಣಿಸಿ ಈ ವರ್ಷಕ್ಕೆ ಅನ್ವಯವಾಗುವಂತೆ ಬಿಡುಗಡೆ ಮಾಡಲಾಗುವುದು ಎಂದರು. 

ಘನತ್ಯಾಜ್ಯ ಪ್ಯಾಕೇಜ್‌ಗೆ ಆಕ್ಷೇಪ: ಘನತ್ಯಾಜ್ಯ ವಿಲೇವಾರಿ ಕುರಿತಾಗಿ ಈ ಹಿಂದಿನ 22 ಪ್ಯಾಕೇಜ್‌ ಬದಲು ಆರು ಪ್ಯಾಕೇಜ್‌ ಮಾಡಿದ್ದು, ಇದರಿಂದ ಪೌರಕಾರ್ಮಿಕರ ಸಂಖ್ಯೆ ಕಡಿಮೆಯಾಗಿ ಸ್ವತ್ಛತೆಗೆ ತೊಂದರೆಯಾಗಲಿದೆ ಎಂದು ಸದಸ್ಯರಾದ ಗಣೇಶ ಟಗರಗುಂಟಿ, ಅಲ್ತಾಫ್ ಕಿತ್ತೂರು ಇನ್ನಿತರರು ಆಕ್ಷೇಪ ವ್ಯಕ್ತಪಡಿಸಿದರು.

ಆಯುಕ್ತರು ಮಾತನಾಡಿ, ಈ ಕುರಿತಾಗಿ ಕೆಲವರು ಹೈಕೋರ್ಟ್‌ ಮೊರೆ ಹೋಗಿದ್ದರಾದರೂ ಕೋರ್ಟ್‌ ಅರ್ಜಿಗಳನ್ನು ವಜಾಗೊಳಿಸಿದೆ. ಸರಕಾರದ ಆದೇಶದಂತೆ ಆರು ಪ್ಯಾಕೇಜ್‌ ಕೈಗೊಳ್ಳಲಾಗುತ್ತಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next