ಗದಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಿಂದ ಸಾಂಸ್ಕೃತಿಕ ಸಂಘಟನೆಗಳು ಆಯೋಜಿಸುವ ಕಾರ್ಯಕ್ರಮಗಳಿಗೆ ನೀಡುತ್ತಿದ್ದ ಸಹಾಯಧನ ಹಾಗೂ ಕಲಾವಿದರ ಪ್ರಾಯೋಜನೆ ಅನುದಾನ ರದ್ದುಗೊಳಿಸುವ ಸರಕಾರದ ಚಿಂತನೆಯನ್ನು ಕೈಬಿಡಬೇಕು ಎಂದು ಜಿಲ್ಲಾ ಸಾಂಸ್ಕೃತಿಕ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ಈ ಕುರಿತು ಜಿಲ್ಲಾ ಸಾಂಸ್ಕೃತಿಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ.ಕಾ. ವೆಂ. ಶ್ರೀನಿವಾಸ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಸಂಘ, ಸಂಸ್ಥೆಗಳ ಮೂಲಕ ಕನ್ನಡ ಮತ್ತು ಸಂಸ್ಕೃತಿ ಉತ್ತೇಜಿಸುವ ಕಾರ್ಯ ಚಟುವಟಿಕೆಗಳಿಗೆ ಹಾಗೂ ಅಸಂಘಟಿತ ಕಲಾವಿದರ ತಂಡಗಳಿಗೆ ವಾಧ್ಯ, ಪರಿಕರ ಮತ್ತು ವೇಷ ಭೂಷಣಗಳಿಗಾಗಿ ಸರಕಾರ ಸಹಾಯ ಧನ ನೀಡುತ್ತಿತ್ತು. ಆದರೆ, ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ.ಶಿವಕುಮಾರ ಅವರು ಇಲಾಖೆಯ ಸಹಾಯಧನ ರದ್ದುಗೊಳಿಸುವ ಬಗ್ಗೆ ಮಾತನಾಡಿರುವುದು ಖಂಡನೀಯ.
ಈಗಾಗಲೇ ಸಾಕಷ್ಟು ಆರ್ಥಿಕ ಸಂಕಷ್ಟದಲ್ಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕಲಾವಿದರಿಗೆ ಸರಕಾರದ ನೆರವು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ಅನುದಾನ ರದ್ದುಗೊಳಿಸುವ ಚಿಂತನೆಯನ್ನು ಕೈಬಿಟ್ಟು, ಸಂಘ, ಸಂಸ್ಥೆಗಳ ಹಾಗೂ ಕಲಾವಿದರ ವಾಧ್ಯ, ಪರಿಕರ ಮತ್ತು ವೇಷಭೂಷಣಕ್ಕಾಗಿ ನೀಡಬೇಕಾಗಿದ್ದ 2018-19 ನೇ ಸಾಲಿನ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸಬೇಕು.
ಜಿಲ್ಲಾ ಸಂಸ್ಕೃತಿಕ ಸಂಘಟನೆಗಳ ಒಕ್ಕೂಟದ ಗೌರವ ಸಲಹೆಗಾರ ಸಿ.ಕೆ.ಎಚ್. ಶಾಸ್ತ್ರಿ, ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಮೌನೇಶ ಸಿ. ಬಡಿಗೇರ, ಸುತಾರ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಅಶೋಕ ಆ. ಸುತಾರ, ಲಯ ಕಲಾಮನೆ ಕಲಾವಿದರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಶಂಕರಗೌಡ ಪಾಟೀಲ, ಕಲಾ ಚೇತನ ಸಾಂಸ್ಕೃತಿಕ ಅಕಾಡೆಮಿ ಉಪಾಧ್ಯಕ್ಷ ವಿಶ್ವನಾಥ ತೋ. ನಾಲವಾಡದ, ನಟರಂಗ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಸೋಮಶೇಖರ ಚಿಕ್ಕಮಠ, ಶ್ರೀರಾಜೇಶ್ವರಿ ಕಲಾಕುಟಿರದ ಅಧ್ಯಕ್ಷ ಗಜಾನನ ವರ್ಣೇಕರ, ನಟರಂಗ ಸಾಂಸ್ಕೃತಿಕ ಅಕಾಡೆಮಿ ಕಾರ್ಯದರ್ಶಿ ಪ್ರವೀಣ ಕರಲಿಂಗಣ್ಣವರ, ಕೂಗು ಧ್ವನಿ-ಪ್ರತಿಧ್ವನಿ ಸಮಿತಿ ಅಧ್ಯಕ್ಷ ಗವಿಶಿದ್ಧಯ್ಯ ಜ. ಹಳ್ಳಿಕೇರಿಮಠ, ಶ್ರೀಮಾತೃಭೂಮಿ ಸಾಂಸ್ಕೃತಿಕ ಹಾಗೂ ವಿವಿಧೋದ್ದೇಶಗಳ ಸೇವಾ ಸಂಘದ ಕಾರ್ಯದರ್ಶಿ ವೆಂಕಟೇಶ ಬಿ. ಇಮರಾಪುರ, ಗಾನಗಂಧರ್ವ ಕಲಾ ಟ್ರಸ್ಟ್ ಕಾರ್ಯದರ್ಶಿ ಸಿದ್ಧಲಿಂಗಯ್ಯಶಾಸ್ತ್ರೀ ಎಸ್. ಗಡ್ಡದಮಠ, ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಸಂಚಾಲಕರಾದ ಅಶೋಕ ಹಾದಿಮನಿ ಇದ್ದರು.