Advertisement

Ladakh: ಲಡಾಖ್‌ಗೆ ಕೇಂದ್ರಾಡಳಿತ ಸ್ಥಾನಮಾನ ಮುಂದುವರಿಕೆ

08:12 PM Aug 29, 2023 | Team Udayavani |

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ಕೇಂದ್ರಾಡಳಿತದ ಸ್ಥಾನ ತಾತ್ಕಾಲಿಕವಾದದ್ದು. ಸೂಕ್ತ ಸಂದರ್ಭ ಬಂದಾಗ ಹಿಂದೆ ಇದ್ದ ರಾಜ್ಯದ ಮಾನ್ಯತೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಂಗಳವಾರ ಮನವರಿಕೆ ಮಾಡಿಕೊಟ್ಟಿದೆ. ಸಂವಿಧಾನದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದನ್ನು ಪ್ರಶ್ನೆ ಮಾಡಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆಯನ್ನು ಸತತ 12ನೇ ದಿನ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾ.ಸಂಜಯ ಕಿಶನ್‌ ಕೌಲ್‌, ನ್ಯಾ.ಸಂಜೀವ್‌ ಖನ್ನಾ, ನ್ಯಾ.ಬಿ.ಆರ್‌.ಗವಾಯಿ ಮತ್ತು ನ್ಯಾ.ಸೂರ್ಯಕಾಂತ್‌ ಅವರನ್ನೊಳಗೊಂಡ ಸಾಂವಿಧಾನಿಕ ಪೀಠಕ್ಕೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅರಿಕೆ ಮಾಡಿದ್ದಾರೆ.

Advertisement

ಅದಕ್ಕೆ ಪ್ರತಿಕ್ರಿಯೆ ನೀಡಿದ ಸಾಂವಿಧಾನಿಕ ಪೀಠ “ಈ ವ್ಯವಸ್ಥೆ (ಕೇಂದ್ರಾಡಳಿತದ ಸ್ಥಾನಮಾನ) ಮುಕ್ತಾಯವಾಗಬೇಕು. ಜಮ್ಮು ಮತ್ತು ಕಾಶ್ಮೀರಕ್ಕೆ ಯಾವಾಗ ರಾಜ್ಯದ ಸ್ಥಾನಮಾನ ಮತ್ತೆ ನೀಡಲಾಗುತ್ತದೆ. ಅದನ್ನು ನಾವು ದಾಖಲಿಸಿಕೊಳ್ಳಬೇಕು. ಈ ಬಗ್ಗೆ ಗುರುವಾರ ಹೇಳಿಕೆ ನೀಡಿ’ ಎಂದು ಸಾಲಿಸಿಟರ್‌ ಜನರಲ್‌ ಮತ್ತು ಅಟಾರ್ನಿ ಜನರಲ್‌ ಆರ್‌.ವೆಂಕಟರಮಣಿ ಅವರಿಗೆ ಸೂಚಿಸಿತು. ಅದಕ್ಕೆ ಉತ್ತರಿಸಿದ ತುಷಾರ್‌ ಮೆಹ್ತಾ “ರಾಜ್ಯದ ಸ್ಥಾನಮಾನ ನೀಡುವ ಬಗ್ಗೆ ಗುರುವಾರ ಧನಾತ್ಮಕ ಹೇಳಿಕೆಯನ್ನು ನ್ಯಾಯಪೀಠದ ಮುಂದೆ ಮಂಡಿಸಲಾಗುತ್ತದೆ. ಇದರ ಜತೆಗೆ ಸಂಬಂಧಿಸಿದ ರಾಜಕೀಯ ವಿಚಾರಗಳನ್ನು ಅದರಲ್ಲಿ ಸೇರಿಸಲಾಗುತ್ತದೆ. ಲಡಾಖ್‌ ಕೇಂದ್ರಾಡಳಿತ ಪ್ರದೇಶವಾಗಿಯೇ ಮುಂದುವರಿಯಲಿದೆ’ ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡುವ ಬಗ್ಗೆ ಸಂಸತ್‌ನಲ್ಲಿಯೇ ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ. ಈ ನಿಟ್ಟಿನಲ್ಲಿ ಕೆಲಸ ಮತ್ತು ಪ್ರಕ್ರಿಯೆಗಳು ಮುಂದುವರಿದಿವೆ. ಅಲ್ಲಿ ಜನಜೀವನ ಸಾಮಾನ್ಯ ಸ್ಥಿತಿಗೆ ಬರುತ್ತಿದ್ದಂತೆಯೇ ಹಿಂದಿನ ವ್ಯವಸ್ಥೆ ಪುನಸ್ಥಾಪನೆಯಾಗಲಿದೆ ಎಂದರು.

“35ಎ ವಿಧಿಯಿಂದ ಜಮ್ಮುಕಾಶ್ಮೀರದ ನಿವಾಸಿಗಳಲ್ಲದವರಿಗೆ ಅನ್ಯಾಯ”
ಸಂವಿಧಾನದ 35ಎ ವಿಧಿಯಿಂದ ಜಮ್ಮುಕಾಶ್ಮೀರದ ಖಾಯಂ ನಿವಾಸಿಗಳಲ್ಲದ ಜನರಿಗೆ ವಂಚನೆಯಾಗಿದೆ. ಸಮಾನ ಅವಕಾಶ, ರಾಜ್ಯ ಸರ್ಕಾರದಲ್ಲಿ ಉದ್ಯೋಗಾವಕಾಶ, ಭೂಮಿಯನ್ನು ಕೊಳ್ಳುವ ಹಕ್ಕನ್ನು ಇತರೆ ಜನರು ತಪ್ಪಿಸಿಕೊಂಡಿದ್ದಾರೆ. ಜಮ್ಮುಕಾಶ್ಮೀರದ ಖಾಯಂ ನಿವಾಸಿಗಳಿಗೆ ಈ ವಿಚಾರದಲ್ಲಿ ವಿಶೇಷಾಧಿಕಾರವಿದ್ದಿದ್ದರಿಂದ ಇತರರು ವಂಚನೆಗೊಳಬೇಕಾಯಿತು. ಹೀಗೆಂದು ಸರ್ವೋಚ್ಚ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹೇಳಿದ್ದಾರೆ. ಅಷ್ಟು ಮಾತ್ರವಲ್ಲ ಜಮ್ಮುಕಾಶ್ಮೀರದ ಸಂವಿಧಾನ, ಭಾರತದ ಸಂವಿಧಾನಕ್ಕೆ ಅಧೀನ ಎಂದೂ ಹೇಳಿದ್ದಾರೆ. ಅಲ್ಲಿಗೆ ವಿಶೇಷ ಸ್ಥಾನಮಾನ ರದ್ದತಿ ವಿಚಾರದಲ್ಲಿ ಕೇಂದ್ರದ ನಿಲುವನ್ನು ಬಹುತೇಕ ಸರ್ವೋಚ್ಚ ಪೀಠ ಒಪ್ಪಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next