ಭಟ್ಕಳ: ತಮಗೆ ನ್ಯಾಯಯುತವಾಗಿ ದೊರೆಯಬೇಕಾಗಿದ್ದ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಇಲ್ಲಿನ ತಾಲೂಕು ಆಡಳಿತ ಸೌಧದ ಪಕ್ಕದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಮೊಗೇರ ಸಮಾಜದ ಧರಣಿ ಸತ್ಯಾಗ್ರಹ 30ನೇ ದಿನ ಪೂರೈಸಿದ್ದು 31ನೇ ದಿನಕ್ಕೆ ಕಾಲಿಟ್ಟಿದೆ.
ಈಗಾಗಲೇ ರಾಜ್ಯದ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತಕುಮಾರ್ ಹೆಗಡೆ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುನೀಲ್ ನಾಯ್ಕ, ಶಾಸಕ ದಿನಕರ ಶೆಟ್ಟಿ ಸೇರಿದಂತೆ ಅನೇಕರು ಧರಣಿ ನಿರತರನ್ನು ಮಾತನಾಡಿಸಿದ್ದು, ಅವರ ಸಂಕಷ್ಟವನ್ನು ಕೇಳಿದ್ದಾರೆ.
ಸರಕಾರದ ಉನ್ನತ ಮಟ್ಟದ ಸಭೆಯೊಂದನ್ನು ವಿಧಾನ ಸೌಧದಲ್ಲಿ ಕರೆಯುವುದಾಗಿ ಭರವಸೆ ನೀಡಿದ್ದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ್ದ ಸಂಸದ ಅನಂತಕುಮಾರ್ ಹೆಗಡೆ ತಾನೂ ಕೂಡಾ ಮುಖ್ಯ ಮಂತ್ರಿಗಳೊಂದಿಗೆ ಭಾಗವಹಿಸುವ ಭರವಸೆ ನೀಡಿದ್ದಾರೆ.
ಮೂವತ್ತು ದಿನ ಪೂರೈಸಿದ ಹಿನ್ನೆಲೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮೊಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ, ನಾವು ಕಳೆದ 30 ದಿನಗಳಿಂದಲೂ ಧರಣಿ ನಡೆಸುತ್ತಿದ್ದೇವೆ. ನಮ್ಮಲ್ಲಿ ಎಲ್ಲರೂ ಬಡವರಿದ್ದು ಅವರ ಉದ್ಯೋಗ ಬಿಟ್ಟು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಅನೇಕ ವಿದ್ಯಾರ್ಥಿಗಳು ಇಂದು ಭಾಗವಹಿಸುತ್ತಿದ್ದಾರೆ ಎಂದರೆ ಅವರಿಗೆ ಯಾವುದೇ ಶೈಕ್ಷಣಿಕ ಸೌಲಭ್ಯ ದೊರೆಯದೇ ತೊಂದರೆಯಾಗಿದೆ. ಸರಕಾರ ಇನ್ನಾದರೂ ನಮ್ಮ ಮನವಿ ಮನ್ನಿಸಿ ನಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಬಿಗಿ ನಿಲುವು: ಕಳೆದ 13-14 ವರ್ಷಗಳಿಂದ ಜಾತಿ ಪ್ರಮಾಣ ಪತ್ರ ಪಡೆಯಲು, ಸಿಂಧುತ್ವ ಪಡೆಯಲು ತೀವ್ರ ತೊಂದರೆ ಅನುಭವಿಸುತ್ತಿದ್ದ ಮೊಗೇರ ಸಮಾಜದ ಯುವ ಜನತೆ ಬಿಗಿ ನಿಲುವು ತಾಳಿದ್ದಾರೆ. ಯಾವುದೇ ಕಾರಣಕ್ಕೂ ಪ್ರಮಾಣ ಪತ್ರ ನೀಡುವ ತನಕ ಧರಣಿ ಹಿಂಪಡೆಯಲಾರೆವು ಎನ್ನುವ ದೃಢ ಸಂಕಲ್ಪ ಮಾಡಲಾಗಿದೆ. ಸಚಿವರು, ಸಂಸದರು, ಶಾಸಕರುಗಳು ಕೋರಿದರೂ ತಮ್ಮ ಅಚಲವಾದ ನಿಲುವನ್ನು ಸ್ಪಷ್ಟ ಪಡಿಸಿದ ಸಮಾಜದ ಪ್ರಮುಖರು ಮೊದಲಿನಂತೆಯೇ ಪ್ರಮಾಣ ಪತ್ರ ವಿತರಣೆ ಆರಂಭಿಸಿದ ನಂತರವಷ್ಟೇ ಧರಣಿ ಹಿಂಪಡೆಯುತ್ತೇವೆ. ಇನ್ನೂ ತಮ್ಮ ತಾಳ್ಮೆ ಪರೀಕ್ಷಿಸಿದರೆ ಮುಂದೆ ಉಗ್ರ ಹೋರಾಟಕ್ಕೂ ಸಿದ್ಧರಾಗಿದ್ದೇವೆ ಎನ್ನುತ್ತಿದ್ದಾರೆ ಯುವಕರು.
ಮಾಜಿ ಶಾಸಕ ಮಂಕಾಳ ವೈದ್ಯ, ಹೊರಾಟ ಸಮತಿ ಪ್ರಮುಖ ಎಫ್.ಕೆ. ಮೊಗೇರ, ಪುಂಡಲೀಕ ಹೆಬಳೆ, ಜಟ್ಗಾ ಮೊಗೇರ, ವೆಂಕಟರಮಣ ಮೊಗೇರ, ಸುಕ್ರಪ್ಪ ಮೊಗೇರ ಮುಂತಾದವರು ಉಪಸ್ಥಿತರಿದ್ದರು.